ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳ ಪರಿಹರಿಸಿ

ಹೊರ ರೋಗಿಗಳಿಗೆ ಶೀಘ್ರ ಚಿಕಿತ್ಸೆ ದೊರೆಯುವಂತೆ ಮಾಡಿ

197

Get real time updates directly on you device, subscribe now.


ತುಮಕೂರು: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ ಎಸ್.ಎನ್.ಸ್ವಾಮಿ ನೇತೃತ್ವದಲ್ಲಿ ಕಲ್ಯಾಣಿ, ರತ್ನಮ್ಮ, ಅಶ್ವಿನಿ ಮತ್ತು ಲಕ್ಕಪ್ಪ ಇವರನ್ನು ಒಳಗೊಂಡ ತುಮಕೂರು ನಗರ ಸಮಿತಿಯ ನಿಯೋಗವು ಜಿಲ್ಲಾಸ್ಪತ್ರೆಯಲ್ಲಿರುವ ಸಮಸ್ಯೆ ಪರಿಹರಿಸಬೇಕೆಂದು ತುಮಕೂರು ಜಿಲ್ಲಾ ಸರ್ಜನ್ ಡಾ.ವೀಣಾ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಈ ವೇಳೆ ಎಸ್ ಯುಸಿಐ(ಸಿ) ಪಕ್ಷದ ನಗರ ಸಮಿತಿ ಕಾರ್ಯದರ್ಶಿಯಾದ ಎಸ್.ಎನ್.ಸ್ವಾಮಿ ಮಾತನಾಡಿ, ಹತ್ತು ತಾಲೂಕು ಒಳಗೊಂಡ ತುಮಕೂರು ಜಿಲ್ಲೆಯು ಅತಿ ವೇಗದಿಂದ ಬೆಳೆಯುತ್ತಿದ್ದು, ಜನಸಂಖ್ಯೆಯೂ ಹೆಚ್ಚುತ್ತಿದೆ. ಇದರ ಜೊತೆಗೆ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿವೆ. ಅಷ್ಟೇ ಅಲ್ಲದೆ ತಾಲೂಕು ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಉನ್ನತ ಮಟ್ಟದ ಸೌಲಭ್ಯಗಳ ಕೊರತೆ, ವೈದ್ಯರ ಕೊರತೆ ಇರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಜನ ದಟ್ಟಣೆ ವಿಪರೀತವಾಗಿದೆ. ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ಆಶಾಭಾವದಿಂದ ಜಿಲ್ಲಾಸ್ಪತ್ರೆಗೆ ಬಂದರೆ ಹೊರ ರೋಗಿಗಳ ಪ್ರವೇಶ ಚೀಟಿ ಕೌಂಟರ್ ಬಳಿ ಗಂಟೆಗಟ್ಟಲೇ ಅರ್ಧ ದಿನ ಸರದಿಯಲ್ಲಿ ನಿಂತು ಪ್ರವೇಶ ಚೀಟಿ ಪಡೆಯುವಷ್ಟರಲ್ಲೇ ನಿತ್ರಾಣರಾಗುತ್ತಾರೆ. ಇನ್ನು ಪ್ರವೇಶ ಚೀಟಿ ಸಿಕ್ಕ ನಂತರ ಮತ್ತೊಂದು ಸಾಲಿನಲ್ಲಿ ತಮ್ಮ ಸರದಿ ಬರುವವರೆಗೂ ಕಾಯ್ದು ನಿಂತು ವೈದ್ಯರ ಸಂದರ್ಶನ ಸಿಕ್ಕರೆ ಅದೆ ನಮ್ಮ ಪಾಲಿನ ಸೌಭಾಗ್ಯವೆಂದು ಚಿಕಿತ್ಸೆ ಪಡೆಯುತ್ತಾರೆ. ಇನ್ನೂ ಹಲವು ಮಂದಿ ಕಾದು ಕಾದು ವೈದ್ಯರ ಸಂದರ್ಶನ ಸಮಯ ಮುಗಿದರೆ ಮತ್ತೆ ಕಾಯುವ ಕೆಲಸ ಮುಂದಿನ ದಿನ ಮತ್ತೆ ಸರದಿಗಾಗಿ ಕಾಯ್ದು ಚಿಕಿತ್ಸೆ ಪಡೆಯುತ್ತಾರೆ. ಅದರಲ್ಲೂ ವಯೋವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಅತೀವ ಸಂಕಷ್ಟಪಡುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗೆ ಬರುವವರು ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಹಣ ಕೊಟ್ಟು ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಬಡವರು ಎಷ್ಟೋ ಜನರಿಗೆ ಪ್ರವೇಶ ಚೀಟಿ ಪಡೆಯಲೂ ಕೂಡ ಹಣವಿರುವುದಿಲ್ಲ. ದೂರದ ಊರುಗಳಿಂದ ಬಂದು ಹೊರ ರೋಗಿಗಳ ಪ್ರವೇಶ ಚೀಟಿ ಪಡೆದು ಚಿಕಿತ್ಸೆ ಪಡೆಯಲು ಸಂಬಂಧಿಕರ- ಸ್ನೇಹಿತರ ವಾಹನಗಳ ಮೂಲಕ ಆಸ್ಪತ್ರೆ ತಲುಪುವ ರೋಗಿಗಳು, ರೋಗಿಗಳ ವಾಹನಗಳಿಗೆ ಆಸ್ಪತ್ರೆಯ ಆವರಣದ ಯಾವುದೇ ಮೂಲೆಯಲ್ಲಿ ತಮ್ಮದೇ ಜವಾಬ್ದಾರಿಯಿಂದ ವಾಹನ ನಿಲ್ಲಿಸಿದರೂ ಪಾರ್ಕಿಂಗ್ ಚಾರ್ಜ್ ಕೊಡಬೇಕು. ಕೆಲವೊಮ್ಮೆ ಐದು- ಹತ್ತು ನಿಮಿಷ ವಾಹನ ಆಸ್ಪತ್ರೆ ಆವರಣದಲ್ಲಿ ನಿಂತಿದ್ದರೂ ಪಾರ್ಕಿಂಗ್ ಶುಲ್ಕ ತೆರುವಂತಂಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನಿಯ. ಇನ್ನೊಂದೆಡೆ ವಾಹನ ಪಾರ್ಕಿಂಗ್ ಗೆ ಯಾವುದೇ ನೆರಳಿನ ವ್ಯವಸ್ಥೆಯಾಗಲಿ, ಭದ್ರತೆಯಾಗಲಿ ಖಾತ್ರಿ ಮಾಡಲಾಗುತ್ತಿಲ್ಲ. ಇದೆಲ್ಲವೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಜನ ತಮ್ಮ ಅಳಲು ಹೇಳಿಕೊಳ್ಳುತ್ತಿದ್ದಾರೆ. ಆರೋಗ್ಯ ಕಾಪಾಡುವಂತಹ ಆಸ್ಪತ್ರೆಯಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡುವುದು ಅತಿ ಮುಖ್ಯವಾಗಿರುತ್ತದೆ. ಈ ಕುರಿತು ಹೆಚ್ಚಿನ ಕ್ರಮ ವಹಿಸಬೇಕು. ಆಸ್ಪತೆಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬಂದು ಹೋಗುವುದರಿಂದ ಆಸ್ಪತ್ರೆಯ ಶೌಚಾಲಯಗಳು ಶುಚಿಯಾಗಿರದೆ ಅದನ್ನು ಬಳಸಲು ಜನ ಕಷ್ಟಪಡುತ್ತಿದ್ದಾರೆ ಮತ್ತು ಎಷ್ಟೋ ಬಾರಿ ಆವರಣವೂ ಸ್ವಚ್ಛವಾಗಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಜನರಿಗೆ ಒದಗಿಸಲು ಅವಶ್ಯವಿರುವ ಸಿಬ್ಬಂದಿ ವರ್ಗ, ರೋಗಿಗಳ ಸಂಖ್ಯೆಗನುಗುಣವಾಗಿ ವೈದ್ಯರ, ದಾದಿಯರ ನಿಯೋಜನೆ ಮಾಡಬೇಕು ಮತ್ತುಅವಶ್ಯಕತೆಗೆ ತಕ್ಕಂತೆ ಸುಸಜ್ಜಿತ ಲ್ಯಾಬ್ ಮತ್ತು ಉಪಕರಣಗಳನ್ನು ಒದಗಿಸಬೇಕು. ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಕರಣ ಮಾಡುವ ಹುನ್ನಾರ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ನಿರ್ವಹಣೆಯಾಗಲಿ, ಇನ್ನಿತರ ಯಾವುದೇ ವಿಭಾಗಗಳನ್ನಾಗಲಿ ಖಾಸಗಿಕರಣ ಮಾಡುವುವನ್ನು ಕೈಬಿಟ್ಟು ಸಾರ್ವಜನಿಕರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿ ಪಡಿಸಬೇಕೆಂದು ಎಸ್ ಯುಸಿಐಸಿ(ಸಿ) ಪಕ್ಷ ಆಗ್ರಹಿಸುತ್ತದೆ ಎಂದರು.
ಹೊರ ರೋಗಿಗಳ ಪ್ರವೇಶ ಚೀಟಿ ಕೌಂಟರ್ಗಳ ಸಂಖ್ಯೆ ಹೆಚ್ಚಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಖಾತ್ರಿಪಡಿಸಬೇಕು, ಆಸ್ಪತ್ರೆಯ ಆವರಣದಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು, ಆಸ್ಪತ್ರೆಯ ಎಲ್ಲಾ ಹಂತದ ಖಾಸಗೀಕರಣ ಕೈಬಿಡಬೇಕು. ಜಿಲ್ಲಾ ಆಸ್ಪತ್ರೆಯ ಒತ್ತಡ ಕಡಿಮೆ ಮಾಡಲು ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಣಗೊಳಿಸಬೇಕು. ತುಮಕೂರು ಜಿಲ್ಲಾ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ಹಾಸಿಗೆಗಳನ್ನು ಹೆಚ್ಚು ಮಾಡಬೇಕು. ಆಧುನಿಕ ಯಂತ್ರೋಪಕರಣ ಒದಗಿಸುವುದು ಹಾಗೂ ನುರಿತ ತಂತ್ರಜ್ಞರನ್ನು ನಿಯೋಜಿಸುವುದು. ಎಲ್ಲಾ ವಿಭಾಗಗಳ ವೈದ್ಯರನ್ನು ಮತ್ತು ದಾದಿಯರನ್ನುಅಗತ್ಯಕ್ಕೆ ತಕ್ಕಂತೆ ನೇಮಿಸಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಲಾಯಿತು.
ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ. ವೀಣಾ ಅವರು ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!