ತುಮಕೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ಸಂಬಂಧ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಲೆಕ್ಕ ಪತ್ರ ಪರಿಶೀಲನಾ ಸಭೆ ನಡೆಸಲಾಯಿತು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದಂತಹ ಅಭ್ಯರ್ಥಿಗಳು ಸಕಾಲದಲ್ಲಿ ಲೆಕ್ಕ ಪತ್ರ ದಾಖಲಾತಿ ಸಲ್ಲಿಸಬೇಕಿದ್ದು, ಬಹುತೇಕ ಅಭ್ಯರ್ಥಿಗಳು ಸಲ್ಲಿಸಿರುತ್ತಾರೆ. ಉಳಿದ ಅಭ್ಯರ್ಥಿಗಳು ವೆಚ್ಚದ ವಿವರಗಳನ್ನು ಇನ್ನೂ ಎರಡು- ಮೂರು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದ ವೈ.ಎಸ್.ಪಾಟೀಲ ಅವರು, ಈ ನಿಟ್ಟಿನಲ್ಲಿ ಆರ್ಓ, ಎಆರ್ಓ ಹಾಗೂ ಸಹಾಯಕ ವೆಚ್ಚ ವೀಕ್ಷಕರು ಅಭ್ಯರ್ಥಿಗಳನ್ನು ಸಂಪರ್ಕಿಸಿ ತ್ವರಿತ ಗತಿಯಲ್ಲಿ ಲೆಕ್ಕ ಪತ್ರ ದಾಖಲಾತಿ ಸಲ್ಲಿಸುವ ಸಂಬಂಧ ಮತ್ತೊಮ್ಮೆ ಅಭ್ಯರ್ಥಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದರು.
129- ತಿಪಟೂರು, 131- ಕುಣಿಗಲ್, 132- ತುಮಕೂರು ನಗರ, 133- ತುಮಕೂರು ಗ್ರಾಮಾಂತರ, 134- ಕೊರಟಗೆರೆ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಅಭ್ಯರ್ಥಿಗಳು ತಮ್ಮ ವೆಚ್ಚದ ವಿವರಗಳನ್ನು ಸಲ್ಲಿಸಿದ್ದು, ಉಳಿದ ವಿಧಾನಸಭಾ ಕ್ಷೇತ್ರಗಳ ಕೆಲ ಅಭ್ಯರ್ಥಿಗಳು ಲೆಕ್ಕ ಪತ್ರ ಸಲ್ಲಿಸಬೇಕಿರುತ್ತದೆ. ಈ ನಿಟ್ಟಿನಲ್ಲಿ ಆರ್ಓ ಮತ್ತು ಎಆರ್ಓಗಳು ಕ್ಷಿಪ್ರ ಗತಿಯಲ್ಲಿ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.
ಸಭೆಯಲ್ಲಿ ವೆಚ್ಚ ವೀಕ್ಷಕರಾದ ನವಾಬ್ ಸಿಂಗ್, ಮಯಾಂಕ್ ಶರ್ಮಾ, ಯಾಸರ್ ಅರಫತ್, ಎಂ.ಸ್ವಾಮಿನಾಥನ್, ಸತೇಂದ್ರ ಸಿಂಗ್ ಮೆಹೆರಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, 11 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಇತರೆ ಚುನಾವಣಾ ಸಿಬ್ಬಂದಿ ಹಾಜರಿದ್ದರು.
Comments are closed.