ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡಿದ್ದ ದಿಲೀಪ್ ಸಾವು

304

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಕರೆಕಲ್ಲು ಪ್ರದೇಶದಲ್ಲಿ ಇದೇ ತಿಂಗಳ 3 ನೇ ತಾರೀಕಿನಂದು ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ದಿಲೀಪ್ (22) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ತುರುವೇಕೆರೆ ಪಟ್ಟಣದ ನೇಸರ ಡಾಬಾದಲ್ಲಿ ಹಣಕಾಸಿನ ಸಂಬಂಧ ಕ್ಯಾಮಸಂದ್ರ ಪ್ರಸಾದಿ ಹಾಗೂ ಇತರೆ ಯುವಕರ ನಡುವೆ ಹೊಡೆದಾಟ ನಡೆದಿತ್ತು. ಈ ಸಂಬಂಧ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜೂನ್ 3 ರಂದು ಕ್ಯಾಮಸಂದ್ರ ಪ್ರಸಾದಿ ಮತ್ತಿತರರು ರಾಜಿ ಸಂಧಾನ ಮಾಡಿಕೊಳ್ಳುವುದಾಗಿ ಸಂಜು ಮತ್ತು ಸ್ನೇಹಿತರನ್ನು ಕ್ಯಾಮಸಂದ್ರಕ್ಕೆ ಆಹ್ವಾನಿಸಿ ಲಾಂಗು ಮಚ್ಚುಗಳಿಂದ ದಾಳಿ ನಡೆಸಿದ್ದರು. ಮೂರು ಬೈಕ್ ಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದರು.

ದಾಳಿಯಲ್ಲಿ ತೀವ್ರತರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ, ಆ ನಂತರ ದಿಲೀಪನನ್ನು ಆದಿ ಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸದೇ ದಿಲೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ಮೃತ ದಿಲೀಪ್ ಶವವನ್ನು ತುರುವೇಕೆರೆ ಪಟ್ಟಣಕ್ಕೆ ತರಲಾಗಿದ್ದು, ಮೃತನ ಸಂಬಧಿಕರು ಹಾಗೂ ಸ್ನೇಹಿತರು ದಿಲೀಪ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ದಿಲೀಪ್ ಸಾವಿನ ನಂತರ ಮುಂಜಾಗ್ರತಾ ಕ್ರಮವಾಗಿ ಡಿವೈಎಪಿ ಲಕ್ಷ್ಮೀಕಾಂತ್ ಮತ್ತು ತಂಡ ತುರುವೇಕೆರೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿದೆ.
ಪಿಎಸ್ಐ ಸಸ್ಪೆಂಡ್
ಮಾ 29 ರ ಹಲ್ಲೆ ಪ್ರಕರಣ ಮತ್ತು ಜೂ 3 ರ ಗಲಾಟೆ ಪ್ರಕರಣದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತುರುವೇಕೆರೆ ಸಬ್ ಇನ್ಸ್ ಪೆಕ್ಟರ್ ಹೊನ್ನೇಗೌಡ ಅವರನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!