ಈ-ಸಮೀಕ್ಷೆಗೆ ಎದುರಾಗಿರುವ ಸಮಸ್ಯೆ ನಿವಾರಿಸಿ

149

Get real time updates directly on you device, subscribe now.


ತುಮಕೂರು: ಒತ್ತಾಯ ಪೂರ್ವಕ ಆರೋಗ್ಯ ಮತ್ತು ಪೌಷ್ಠಿಕಾಂಶ ಸರ್ವೆ ಈ-ಸಮೀಕ್ಷೆ ಆಶಾಗಳಿಗೆ ಮಾತ್ರ ಮಾಡಿಸಲು ಒತ್ತಾಯಿಸುತ್ತಿರುವದನ್ನು ವಿರೋಧಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಎಐಯುಟಿಯುಸಿಗೆ ಸಂಯೋಜಿತ ತುಮಕೂರು ಜಿಲ್ಲಾ ಸಮಿತಿಯಿಂದ ನಗರದ ಬಿಎಸ್ಎನ್ಎಲ್ ಕಚೇರಿಯಿಂದ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಈ ವೇಳೆ ಜಿಲ್ಲಾ ಸಂಚಲಕಿ ಮಂಜುಳ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಈಗ ಕಳೆದ ಕೆಲ ದಿನಗಳಿಂದ ಮೊಬೈಲ್ ನಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗಳ ಈ- ಸಮೀಕ್ಷೆ ಮಾಡಲು ಆಶಾಗಳಿಗೆ ತರಾತುರಿಯ ತರಬೇತಿ ನೀಡಿ, ಮೊಬೈಲ್ ಆ್ಯಪ್ ಮೂಲಕ ಮಾಡಬೇಕೆಂದು ತಿಳಿಸಲಾಗಿದೆ. ಅಭಿಯಾನ ನಿರ್ದೇಶಕರು, ಎನ್ಎಚ್ಎಂ ಹಾಗೂ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ಇವರು ದಿ.18-02-21ರ ಸುತ್ತೋಲೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಿಎಚ್ಸಿಓ ಸಮೀಕ್ಷೆ ಮಾಡಲು ತಿಳಿಸಲಾಗಿದೆ. ಆದರೆ ಎಲ್ಲಾ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಒತ್ತಾಯ ಪೂರಕವಾಗಿ ಇಲಾಖೆ ಸಿಬ್ಬಂದಿ ಹೆದರಿಸಿ ಬೆದರಿಸಿ ಸಮೀಕ್ಷೆ ಮಾಡಲು ಹೇಳುತ್ತಿದ್ದಾರೆ. ಮುಖ್ಯವಾಗಿ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಡಾಟಾ ನೀಡದೇ ಇರುವುದರಿಂದ ಮಾಡಲು ಆಗುವುದಿಲ್ಲ. ಇನ್ನೂ ಕೆಲ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಕೊಟ್ಟರೂ ಸಹ ಮೊಬೈಲ್ ಆ್ಯಪ್ ಗಳ ಮುಖಾಂತರ ಕೆಲಸ ಮಾಡಲು ಆಗುವುದಿಲ್ಲ. ಮೊಬೈಲ್ ನಲ್ಲಿ ಆಪ್ ಡೌನ್ ಲೋಡ್ ಮಾಡಿಕೊಟ್ಟಾಗ ಅವರ ಫೋನ್ ಗಳು ಸ್ವಿಚ್ ಆಫ್ ಆಗುತ್ತಿವೆ. ಸರ್ವೆ ಮಾಡಲು ಹಲವಾರು ತೊಂದರೆ ಎದುರಾಗುತ್ತಿವೆ ಎಂದರು.

ಹಲವಾರು ಆಶಾಗಳಿಗೆ ಸ್ಮಾರ್ಟ್ ಫೋನ್ ಇಲ್ಲ, ಕೆಲವು ಆಶಾಗಳಲ್ಲಿ ಮೊಬೈಲ್ ಇದ್ದರೂ ಹೊಸ ಈ ಆಪ್ ಸಪೋರ್ಟ್ ಮಾಡುತ್ತಿಲ್ಲ. ಈಗಾಗಲೇ ನೀಡಿರುವ ಸಿಮ್ ಗೆ ನೆಟ್ ವರ್ಕ್ ಸಿಗುತ್ತಿಲ್ಲ. ಮೊಬೈಲ್ ಇದ್ದು ಮಾಡಲು ಹೋದಾಗ ಇಂಗ್ಲಿಷ್ ನಲ್ಲಿ ಟೈಪ್ ಮಾಡಬೇಕಾಗಿದೆ. ಇದರಿಂದ ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಕೆಲವೆಡೆ ಬೇರೆ ಸಿಮ್ ಗೂ ನೆಟ್ವರ್ಕ್ ಸಮಸ್ಯೆ ಇದ್ದು ಮಾಡಲು ಆಗುತ್ತಿಲ್ಲ. ಸರ್ವೆ ಮಾಡಲು ಹೋದಾಗ ಮಾಹಿತಿ ಕೊಡಲು ಕೆಲ ಜನರಿಂದ ವಿರೋಧವೂ ಆಗುತ್ತಿದೆ. ಈ ಸಮಸ್ಯೆ ಪರಿಹರಿಸಿ ಮತ್ತು ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿಯೊಂದಿಗೆ ಆಶಾ ಕಾರ್ಯಕರ್ತೆಯರು ಸರ್ವೆ ಮಾಡಲು ಸಿದ್ಧರಿರುವರು, ಸಿಬ್ಬಂದಿ ಜೊತೆ ಹೋಗಿ ಅವರ ಮೊಬೈಲ್ ನಲ್ಲಿ ಎಲ್ಲಾ ದಾಖಲೆಗಳನ್ನು ದಾಖಲಿಸಲು ಆಶಾ ಕಾರ್ಯಕರ್ತೆಯರು ಸಹಕಾರ ನೀಡುತ್ತಾರೆ. ಇಲ್ಲವಾದಲ್ಲಿ ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂದರ್ಭದಲ್ಲಿ ಅವರ ಪ್ರಾಣವನ್ನೇ ಒತ್ತೆ ಇಟ್ಟು ಜನರಿಗಾಗಿ ಕೆಲಸ ಮಾಡಿದ್ದಾರೆ. ಬಿಸಿಲು, ಮಳೆ ಎನ್ನದೇ ದಿನವಿಡಿ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸಕ್ಕೆ ಗೌರವ ಕೊಡುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯ ಅಧಿಕಾರಿ ಮಾತನಾಡಿ, ಹೆಚ್ಎನ್ಎಸ್ ಸರ್ವೆಯ ಹಕ್ಕೊತ್ತಾಯಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸುತ್ತೇವೆ. ತಾಲೂಕು ಮಟ್ಟದಲ್ಲಿ ಆಶಾಗಳು ಎದುರಿಸುತ್ತಿರುವ ಕುಂದು ಕೊರತೆಗಳ ಬಗ್ಗೆ ಒಂದು ಸಭೆ ಮಾಡಿ ಶೀಘ್ರವೇ ಚರ್ಚಿಸುತ್ತೇವೆ ಎಂದು ಹೇಳಿದರು.

ಇಲಾಖೆಯ ಒತ್ತಾಯ ಪೂರ್ವಕ ಸರ್ವೆಯನ್ನು ಸಂಘವು ತೀವ್ರಗಾಗಿ ಖಂಡಿಸುತ್ತದೆ ಹಾಗೂ ಆದಷ್ಟು ಬೇಗ ಈ-ಸಮೀಕ್ಷೆಯ ಸರ್ವೆಯ ಸಮಸ್ಯೆ ಬಗೆಹರಿಸಬೇಕು. ಅಲ್ಲಿಯವರೆಗೆ ಸಮೀಕ್ಷೆ ಮಾಡುವುದು ಕಷ್ಟ ಎಂದು ಆಗ್ರಪಡಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ನಿರ್ಮಲ, ಜಿಲ್ಲಾ ಸಂಘಟನಕಾರರಾದ ಕಲ್ಯಾಣಿ, ಆಶಾ ಮುಖಂಡರಾದ ಪ್ರೇಮ, ಪದ್ಮ, ಲಲಿತ, ಆಶಾ, ಮಂಜುಳ, ಲೋಕಮಣಿ, ಬೋಧಾವತಿ, ದಯಾಮಣಿ, ಲೀಲಾ, ಕಮಲಮ್ಮ, ಶೋಭಾ, ಕಲಾ, ಮಂಗಳ, ಕುಮಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!