ಜಲಶಕ್ತಿ ಅಭಿಯಾನದಲ್ಲಿ ಜಿಲ್ಲೆ ಉತ್ತಮ ಸಾಧನೆ

ಮಳೆ ನೀರು ಸಂಗ್ರಹಿಸಿ ನೀರಿನ ಸಮಸ್ಯೆ ತಪ್ಪಿಸಿ: ಅಗರ್ ವಾಲ್

111

Get real time updates directly on you device, subscribe now.


ತುಮಕೂರು: ಜಲಶಕ್ತಿ ಅಭಿಯಾನದಡಿ ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆ ಮತ್ತು ಅಂತರ್ಜಲ ಸಂರಕ್ಷಣೆಗಾಗಿ ಅನೇಕ ಯೋಜನೆಗಳ ಅನುಷ್ಠಾನಗೊಳಿಸಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ನಿರ್ದೇಶಕರು ಹಾಗೂ ಜಲಶಕ್ತಿ ಅಭಿಯಾನದ ಕೇಂದ್ರ ನೋಡಲ್ ಅಧಿಕಾರಿ ಅಮಿತ್ ಕುಮಾರ್ ಅಗರ್ ವಾಲ್ ಹೇಳಿದರು.

ಜಿಲ್ಲಾ ಪಂಚಾಯತ್ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಜಲಶಕ್ತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಶಕ್ತಿ ಅಭಿಯಾನವನ್ನು 2019ರಲ್ಲಿ ಪ್ರಾರಂಭಿಸಲಾಯಿತು. ಇದು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ಸಹಯೋಗದ ಪ್ರಯತ್ನದ ಮೂಲಕ ದೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ನೀರಿನ ಭದ್ರತೆಯ ಅಭಿಯಾನವಾಗಿದ್ದು, ಜಲಶಕ್ತಿ ಸಚಿವಾಲಯವು 04 ಮಾರ್ಚ್ 2023 ರಿಂದ 30 ನವೆಂಬರ್ 2023 ರ ವರೆಗೆ ಕುಡಿಯುವ ನೀರಿನ ಮೂಲ ಸಮರ್ಥನೀಯತೆ ಎಂಬ ವಿಷಯದೊಂದಿಗೆ ಮಳೆ ನೀರು ಉಳಿಸುವ ಮತ್ತು ಸಂರಕ್ಷಿಸುವ ಜಲ ಶಕ್ತಿ ಅಭಿಯಾನ ಕ್ಯಾಚ್ ದಿ ರೈನ್ ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ. ದೇಶದ 150 ನೀರಿನ ಒತ್ತಡದ ಜಿಲ್ಲೆಗಳಲ್ಲಿನ ಪ್ರಮುಖ ಜಲಮೂಲಗಳ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ನವೀಕರಣ, ನೀರಿನ ಮರು ಬಳಕೆ ಮತ್ತು ಪುನಃಶ್ಚೇತನ, ಜಲಾನಯನ ಅಭಿವೃದ್ಧಿ ಮತ್ತು ತೀವ್ರ ಅರಣ್ಯೀಕರಣ, ಅಸ್ತಿತ್ವದಲ್ಲಿರುವ ಕೊಳಗಳು, ಜೌಗು ಪ್ರದೇಶಗಳು ಮತ್ತು ನದಿಗಳನ್ನು ಪುನರುಜ್ಜೀವನಗೊಳಿಸುವುದು ಅಭಿಯಾನದ ಮುಖ್ಯ ಗುರಿಯಾಗಿದೆ ಎಂದರು.

ಮುಂಗಾರು ಪೂರ್ವದ 100 ದಿನಗಳ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುಬೇಕು. ಮಳೆ ನೀರು ಸಂರಕ್ಷಣೆ ಮಾಡಲು ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು, ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದ್ದು, ಕೇಂದ್ರ ಜಲಶಕ್ತಿ ಅಭಿಯಾನದಡಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಯೋಜನೆಗಳ ಸ್ಥಿತಿಗತಿಗಳ ಮೌಲ್ಯಮಾಪನ ನಡೆಸಿದ ಅವರು ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜನಪ್ರತಿನಿಧಿಗಳ ಅತ್ಯತ್ತುಮ ಕಾರ್ಯಶೀಲತೆಯಿಂದ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಜಲಶಕ್ತಿ ಅಭಿಯಾನದಡಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಕೆರೆ, ಕಲ್ಯಾಣಿಗಳ ಅಭಿವೃದ್ಧಿ, ನೀರು ಹರಿದು ಹೋಗುವ ನಾಲೆ, ಕಾಲುವೆಗಳ ಪುನಶ್ಚೇತನ, ಹೊಸ ಕೆರೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೊಳವೆಬಾವಿ ಮರುಪೂರಣ, ಮಳೆ ನೀರು ಸಂಗ್ರಹ ಮಾದರಿ ಅಳವಡಿಕೆ, ಬದುಗಳ ನಿರ್ಮಾಣ, ಕೃಷಿಹೊಂಡ ಮೊದಲಾದ ಕಾಮಗಾರಿಗಳಿಂದ ಜಲಮೂಲಗಳು ಅಭಿವೃದ್ಧಿಯಾಗುತ್ತಿವೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕೊಳವೆ ಬಾವಿಗಳ ಹತ್ತಿರ ಜಲ ಮರುಪೂರಣ ವ್ಯವಸ್ಥೆ ಸಮರ್ಪಕ ವಾಗಿರಬೇಕು. 506 ಎಕರೆ ವಿಶಾಲವಾದ ನಗರದ ಅಮಾನಿಕೆರೆಯ ಒಟ್ಟು 23 ಕಿ.ಮೀ ಗಳ ರಾಜಕಾಲುವೆಗಳ ಶುದ್ಧತೆ ಕಾಪಾಡಿಕೊಳ್ಳಲು ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ಮತ್ತು ನೀರಿನ ಕೊರತೆಯ ಸಮಸ್ಯೆ ಪರಿಹರಿಸಲು ಎಲ್ಲರೂ ಒಗ್ಗೂಡಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಸಂರಕ್ಷಣೆ, ಅಂರ್ತಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದಾದ್ಯಂತ ಆಯ್ದ 150 ಜಿಲ್ಲೆಗಳಲ್ಲಿ ಜಲಶಕ್ತಿ ಅಭಿಯಾನ ಯೋಜನೆ ಅನುಷ್ಠಾನಗೊಳಿಸಿದೆ. ಇದರಲ್ಲಿ ರಾಜ್ಯದ 06 ಜಿಲ್ಲೆ ಸೇರಿದ್ದು, ಈ ಯೋಜನೆಯಡಿ ತುಮಕೂರು ಜಿಲ್ಲೆಯು ಜಲಶಕ್ತಿ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಉತ್ತಮ ಸಾಧನೆ ಮಾಡಿದೆ. ಜಲಶಕ್ತಿ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಸಮೀಪದ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಸಭೆಯಲ್ಲಿ ಭಾರತ ಜಲಶಕ್ತಿ ಅಭಿಯಾನದ ತಾಂತ್ರಿಕ ಅಧಿಕಾರಿ ಹಾಗೂ ವಿಜ್ಞಾನಿಗಳಾದ ಡಾ. ಸುಚೇತನ ಬಿಸ್ವಾಸ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತೀಕ್ ಪಾಷ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ.ಕೆ.ಹೆಚ್, ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಮುರಳೀಧರ, ಹಿರಿಯ ಭೂ ವಿಜ್ಞಾನಿ ನಾಗವೇಣಿ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ರಾಮಕೃಷ್ಣ, ಜಿಲ್ಲಾ ಪಂಚಾಯತಿಯ ನಂಜೇಗೌಡ.ಎಸ್.ಎಂ. ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ಕಾರ್ಯ ನಿರ್ವಹಣಾ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!