ಸ್ವಉದ್ಯೋಗ ಕೈಗೊಂಡು ಮಾದರಿಯಾದ ದಂಪತಿ

188

Get real time updates directly on you device, subscribe now.


ಪ್ರಸನ್ನ ದೊಡ್ಡಗುಣಿ

ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಡಿ.ರಾಂಪುರದ ದಂಪತಿ ಸತೀಶ್ ಹಾಗೂ ಧನ್ಯಶ್ರೀ ಸ್ವ ಉದ್ಯೋಗದತ್ತ ಮುಖ ಮಾಡಿ ಆತ್ಮ ನಿರ್ಭರದ ಆಶಯದಲ್ಲಿ ಮುಂದೆ ಹೋಗುತ್ತಿದ್ದು ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
ತುಮಕೂರು ಜಿಲ್ಲೆ ಎಂದರೆ ಕಲ್ಪತರು ನಾಡು ಎಂದು ಪ್ರಸಿದ್ಧವಾಗಿದ್ದು, ಇಲ್ಲಿ ತೆಂಗು ಕೊಬ್ಬರಿ ಅತ್ಯಂತ ಹೆಚ್ಚು ಬೆಳೆಯಲಾಗುತ್ತದೆ. ಈ ನಡುವೆ ಕೇವಲ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಮಾತ್ರ ಸೀಮಿತವಾಗಿದ್ದ ಕಲ್ಪತರು ನಾಡು ಇತ್ತೀಚೆಗೆ ಕೊಬ್ಬರಿ ಎಣ್ಣೆ ಹಾಗೂ ಕಾಯಿ ಎಣ್ಣೆ ಮಾಡುವ ಮೂಲಕ ಕಲ್ಪತರು ನಾಡಿನ ನಂಟು ವಿದೇಶಕ್ಕೂ ಹರಡಿದೆ.
ಅಲ್ಪ ಬಂಡವಾಳದಲ್ಲಿ ಶುರುವಾದ ಶುದ್ಧ ತೆಂಗಿನ ಎಣ್ಣೆ, ಕೊಬ್ಬರಿ ಎಣ್ಣೆ, ಕಡಲೆಕಾಯಿ ಎಣ್ಣೆಯ ಗಾಣ ಹಾಕುವ ಮೂಲಕ ಸ್ವ ಉದ್ಯೋಗಕ್ಕೆ ನಾಂದಿ ಹಾಡಿರುವ ಈ ದಂಪತಿ ಇನ್ನಿತರೆ ನಾಲ್ಕೈದು ಜನರಿಗೂ ಕೆಲಸ ಕೊಟ್ಟು ಹೆಚ್ಚಿನ ಲಾಭ ಪಡೆಯುವುದು ಮಾತ್ರವಲ್ಲದೆ ಬೇರೆ ರಾಜ್ಯ ಹಾಗೂ ದೇಶಗಳಿಗೂ ಸಹ ಶುದ್ಧ ಕೊಬ್ಬರಿ ಹಾಗೂ ಕಾಯಿ ಎಣ್ಣೆ ಕಳಿಸುವ ಮೂಲಕ ಅವರ ಆದಾಯ ದ್ವಿಗುಣಗೊಳಿಸುತ್ತಿದ್ದಾರೆ.
ಕಾಲೇಜು ದಿನಗಳು ಮುಗಿದ ನಂತರ ಬೆಂಗಳೂರಿನ ಕಡೆ ಹೆಜ್ಜೆ ಹಾಕುವುದು ಅವರ ಮನಸ್ಸಾಗಿತ್ತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಶುದ್ಧ ಕೊಬ್ಬರಿ ಎಣ್ಣೆ ಹಾಗೂ ಕಾಯಿ ಎಣ್ಣೆ ತೆಗೆಯುವ ವಿಚಾರ ತಿಳಿದು ನಾವು ಯಾಕೆ ಇದನ್ನು ಮಾಡಬಾರದು ಎಂದು ನಿಶ್ಚಯಿಸಿ ಕೇರಳದಲ್ಲಿ ಸುಮಾರು ಹತ್ತು ದಿನಗಳ ಕಾಲ ತರಬೇತಿ ಪಡೆದು ನಮ್ಮ ಹಳ್ಳಿಯ ಮನೆಯಲ್ಲಿ ಕಾಯಿ ಎಣ್ಣೆಯ ಗಾಣ ಹಾಕುವ ಮೂಲಕ ಸ್ವ ಉದ್ಯೋಗಕ್ಕೆ ಮುಂದಾಗಿದ್ದಾರೆ.

ಕೇರಳದಲ್ಲಿ ತರಬೇತಿ ಪಡೆದ ನಂತರ ಸುಮಾರು 45 ಲಕ್ಷ ಹಣ ಪ್ರೋತ್ಸಾಹ ಧನ ಪಡೆದು ಈ ಕೆಲಸಕ್ಕೆ ಮುಂದಾಗಿದ್ದರು. ತೆಂಗಿನಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ ತೆಗೆಯಲು ಎಲ್ಲಾ ಸಿದ್ಧವಾಯಿತು. ಆದರೆ ಇದಕ್ಕೆ ಮಾರುಕಟ್ಟೆ ಎಲ್ಲಿದೆ ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ. ಹಲವು ಜನರನ್ನು ಕೇಳಿದ ಕೂಡಲೇ ಇದರ ದರ ಕೇಳಿದರೆ ಜನರು ಬೆಚ್ಚಿ ಬೀಳುತ್ತಿದ್ದರು. ಇಷ್ಟೊಂದು ಹಣ ಕೊಟ್ಟು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರವೂ ಬರುತ್ತಿತ್ತು. ನಂತರ ಇವರೆ ಪ್ಯಾಕ್ ಮಾಡಿ ಶುದ್ಧ ಕೊಬ್ಬರಿ ಎಣ್ಣೆ ಹಾಗೂ ಕಾಯಿ ಎಣ್ಣೆಯಿಂದ ಆಗುವ ಲಾಭ, ರೋಗ ನಿರೋಧಕ ಶಕ್ತಿ, ಹಲವು ಸಮಸ್ಯೆಗಳಿಗೆ ರಾಮಬಾಣ ಎಂದು ತಿಳಿಸಿದ ನಂತರ ಎಣ್ಣೆ ಖರೀದಿಸಲು ಜನರು ಮುಂದೆ ಬಂದರು.
ಈಗ ಮಾರುಕಟ್ಟೆಯ ಸಮಸ್ಯೆ ಇಲ್ಲ. ಹಲವು ಕಂಪನಿಗಳು ಮುಂದೆ ಬಂದು ಈ ಎಣ್ಣೆ ಖರೀದಿ ಮಾಡುತ್ತಿದ್ದಾರೆ. ಔಟ್ ಲೆಟ್ ಗಳಲ್ಲಿಯೂ ಸಹ ಶುದ್ಧ ಕೊಬ್ಬರಿ ಹಾಗೂ ಕಾಯಿ ಎಣ್ಣೆ ಸಿಗುತ್ತಿದೆ. ನಾವು ದಿನನಿತ್ಯ ಬಳಸುತ್ತಿರುವ ಕಡಲೆಕಾಯಿ ಎಣ್ಣೆಗೂ ಕಾಯಿ ಎಣ್ಣೆಗೂ ಸಾಕಷ್ಟು ವ್ಯತ್ಯಾಸದ ಇದ್ದು ಆರೋಗ್ಯದ ದೃಷ್ಟಿಯಿಂದ ಕಾಯಿ ಎಣ್ಣೆ ಉತ್ತಮವಾಗಿದೆ. ರಾಸಾಯನಿಕಗಳಿಂದ ತಯಾರಿಯಾಗುವ ಕಡಲೆಕಾಯಿ ಎಣ್ಣೆ ಬಿಟ್ಟು ಇಂತಹ ಕೊಬ್ಬರಿ ಹಾಗೂ ತೆಂಗಿನಕಾಯಿ ಎಣ್ಣೆ ಬಳಸುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎನ್ನುತ್ತಾರೆ ಸತೀಶ್.
ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕಾಯಿ ಹಾಗೂ ಕೊಬ್ಬರಿ ಇರುವುದರಿಂದ ಕೊಬ್ಬರಿ ತೆಗೆದುಕೊಂಡು ಬಂದಲ್ಲಿ ತಮ್ಮ ಗಾಣದ ಮೂಲಕ ಎಣ್ಣೆ ತಯಾರಿಸಿ ಕೊಡುವುದು ಸಹ ಉಂಟು, ರಾಸಾಯನಿಕಗಳಿಂದ ದೂರವಿದ್ದು ನೈಸರ್ಗಿಕವಾಗಿ ಸಿಗುವ ಕೊಬ್ಬರಿ ಹಾಗೂ ಕಾಯಿ ಎಣ್ಣೆ ಬಳಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ನಮ್ಮ ಸಂಪನ್ಮೂಲದಿಂದ ನಮಗೆ ಆದಾಯ ಹಾಗೂ ಉದ್ಯೋಗ ಸಿಕ್ಕಂತಾಗುತ್ತದೆ. ಯುವಕರು ಇಂತಹ ಕೆಲಸಗಳಿಗೆ ಮುಂದಾದರೆ ಅನುಕೂಲವಾಗುತ್ತದೆ ಎಂಬುದು ಸತೀಶ್ ಮಾತು.

Get real time updates directly on you device, subscribe now.

Comments are closed.

error: Content is protected !!