ಕತ್ತೆ ನಿಕೃಷ್ಟವಲ್ಲ ಕಣ್ರೀ.. ತುಂಬಾ ಶ್ರೇಷ್ಠ

ತುಮಕೂರು ಜಿಲ್ಲೆಯಲ್ಲಿ ಕತ್ತೆ ಹಾಲಿನ ಮಾರಾಟ ಜೋರು !

537

Get real time updates directly on you device, subscribe now.


ತುಮಕೂರು: ತಾಯಿಯ ಎದೆ ಹಾಲು ಮಕ್ಕಳ ಪಾಲಿಗೆ ಅಮೃತ ಇದ್ದಂತೆ, ಹಾಗೆಯೇ ಹಸುವಿನ ಹಾಲು ಉತ್ತಮ ಆರೋಗ್ಯಕ್ಕೆ ಸಹಕಾರಿ, ಹಾಗಾದ್ರೆ ಕತ್ತೆ ಹಾಲು… ಇದು ಕೂಡ ಮಕ್ಕಳ ಪಾಲಿಗೆ ತುಂಬಾ ಶ್ರೇಷ್ಠವಂತೆ..!
ಕತ್ತೆಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ, ಕತ್ತೆ ಹಾಲು.. ಕತ್ತೆ ಹಾಲು… ಎಂದು ಕೂಗಿದ್ದೇ ತಡ ಮಕ್ಕಳಿರುವ ಮನೆಯಿಂದ ತಾಯಂದಿರು ಓಡೋಡಿ ಬಂದು ಹಾಲು ಖರೀದಿಸಿ ತಕ್ಷಣ ಮಕ್ಕಳಿಗೆ ಕುಡಿಸುವ ದೃಶ್ಯ ತುಮಕೂರು ಜಿಲ್ಲೆಯಲ್ಲಿ ಕಂಡು ಬರುತ್ತಿದೆ.

ತುಮಕೂರು ನಗರದ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲೂ ಕತ್ತೆ ಮಾಲೀಕರು ಕತ್ತೆ ಹಾಲು ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಕಾಲವಾದ್ದರಿಂದ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಕಾಣುಸಿಕೊಳ್ಳುವದು ಕಾಮನ್ ಆಗಿದ್ದು, ಇವುಗಳ ತಡೆಗೆ ಕತ್ತೆ ಹಾಲು ರಾಮಬಾಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕತ್ತೆ ಮಾಲೀಕರು ಕತ್ತೆಗಳನ್ನು ಒಡೆದುಕೊಂಡು ಬಂದು ಹಾಲು ಮಾರಾಟ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಕತ್ತೆ ಹಾಲು ಕತ್ತೆ ಹಾಲು ಎಂಬ ಕೂಗು ಕೇಳಿ ಬರುತ್ತಿದ್ದು, ಚಿಕ್ಕ ಮಕ್ಕಳಿರುವ ತಾಯಂದಿರು ಕತ್ತೆ ಹಾಲು ಪಡೆದು ಮಕ್ಕಳಿಗೆ ಕುಡಿಸುತ್ತಿದ್ದಾರೆ.

ಕತ್ತೆ ನಿಕೃಷ್ಟವಲ್ಲ.. ಶ್ರೇಷ್ಠ
ಕತ್ತೆ ಹಾಲು ಆರೋಗ್ಯಕ್ಕೆ ಶ್ರೇಷ್ಠ ಎಂಬ ಹೇಳಿಕೆ, ನಂಬಿಕೆಗಳಿಂದಾಗಿ ಜನರು ಕತ್ತೆ ಹಾಲು ಕುಡಿಯುತ್ತಿದ್ದಾರೆ. ಕತ್ತೆ ಎಂಬ ಪ್ರಾಣಿಯನ್ನು ನಿಕೃಷ್ಟವಾಗಿಸಿರುವ ಜನರು ಈಗ ಕತ್ತೆಯ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಅಂದ ಹಾಗೆ ಕತ್ತೆ ಹಾಲು ಎಂದರೆ ಅರ್ಧ ಲೀಟರ್ ನಷ್ಟು ಸಿಗುವುದಿಲ್ಲ. ಗ್ರಾಹಕರ ಎದುರೇ ಕತ್ತೆಯ ಹಾಲು ಕರೆದು ಕೊಡಲಾಗುತ್ತದೆ. ಒಂದು ವಳಲೆ ಹಾಲಿಗೆ 50 ರೂ. ನಿಗದಿ ಮಾಡಿದ್ದಾರೆ. 3 ವಳಲೆಗೆ ಡಿಸ್ಕೌಂಟ್ ಮಾಡಿ 100 ರೂ.ಗೆ ಮಾರುತ್ತಿದ್ದರು. ಕತ್ತೆಗಳಿಂದ ಹೆಚ್ಚು ಹಾಲು ಉತ್ಪತ್ತಿಯಾಗುವುದಿಲ್ಲವಾದ್ದರಿಂದ ಲಭ್ಯವಾಗುವ ಹಾಲನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂಎಲ್ ನಿಂದ ಅರ್ಧ ಲೀಟರ್ ಹಾಲು ನೀಡುತ್ತದೆ. ಎರಡು ಕತ್ತೆಗಳನ್ನು ವಾಹನದಲ್ಲಿ ಕರೆದುಕೊಂಡು ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡುತ್ತಿದ್ದೇವೆ. ಹೆಚ್ಚೆಂದರೆ ದಿನಕ್ಕೆ 800 ರಿಂದ 1000 ರೂ. ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ, ಹೀಗಾಗಿ ಕೃಷಿ ಕೆಲಸಗಳಿಗೆ ಕೂಲಿ ಹೋಗಿ ಜೀವನ ನಿರ್ವಹಣೆ ಮಾಡುತ್ತೇವೆ. ಕೃಷಿ ಕಸುಬು ಇಲ್ಲದಿದ್ದಾಗ ಪಟ್ಟಣಗಳಿಗೆ ತೆರಳಿ ಕತ್ತೆ ಹಾಲು ಮಾರುತ್ತೇವೆ ಎನ್ನುತ್ತಾರೆ ಕತ್ತೆಯ ಮಾಲೀಕ ಕೋಲಾರದಿಂದ ಬಂದ ಪಡಿಯಪ್ಪ.

ಚಿಕ್ಕನಾಯಕನಹಳ್ಳಿ ತಾಲ್ಲೂಕಲ್ಲಿ ಭರ್ಜರಿ ಮಾರಾಟ
ಚಿಕ್ಕನಾಯಕನಹಳ್ಳಿ ತಾಲ್ಲೂಕಲ್ಲಿ ಕತ್ತೆಗಳ ಮಲೀಕರು ದಂಡು ದಂಡಾಗಿ ಬಂದು ಹಾಲು ಮಾರಾಟ ಮಾಡುತ್ತಿದ್ದಾರೆ. ಒದೊಂದು ತಂಡ ಒಂದೊಂದು ಕಡೆಗೆ ತೆರಳಿ ಬೆಳಗಿನಿಂದ ಸಂಜೆವರೆಗೆ ಮಾರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ಕೆ.ಸಿ.ಪಾಳ್ಯ, ಲಿಂಗಪ್ಪನಪಾಳ್ಯ, ಕಂಪನಹಳ್ಳಿ, ಗೌಡಗೆರೆ ಗ್ರಾಮಗಳಲ್ಲಿ ಕತ್ತೆಯ ಹಾಲು ಎಂದು ಕೂಗುತ್ತ ಸಂಚರಿಸಿ ಮಾರಾಟ ಮಾಡಿದರು. ಆಸಕ್ತರು ಹಣ ನೀಡಿ ಸ್ಥಳದಲ್ಲಿಯೇ ತಮ್ಮ ಮಕ್ಕಳಿಗೆ ಕತ್ತೆ ಹಾಲು ಕುಡಿಸುತ್ತಿದ್ದರು.
ಇದಿಷ್ಟೇ ಅಲ್ಲದೆ ಗುಬ್ಬಿ, ತಿಪಟೂರು, ತುರುವೇಕೆರೆ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲೂ ಕತ್ತೆ ಹಾಲು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಪಕ್ಕದ ಆಂಧ್ರ ಪ್ರದೇಶ, ಹಾಗೂ ಕೋಲಾರ ಜಿಲ್ಲೆಗಳಿಂದ ಕತ್ತೆಗಳ ಮಾಲೀಕರು ಬಂದು ಕತ್ತೆ ಹಾಲು ಮಾರಾಟ ಮಾಡುತ್ತಿದ್ದಾರೆ.

ಬಹಳ ಹಿಂದಿನಿಂದಲೂ ಕತ್ತೆ ಹಾಲು ಮಾರಾಟ ಮಾಡುತ್ತೇವೆ. ಬೇಸಿಗೆ ವೇಳೆ ಮಕ್ಕಳು ಆರೋಗ್ಯ ಕೆಡುವುದು ಹೆಚ್ಚು, ಅಲ್ಲದೆ ಚಳಿಗಾಲದಲ್ಲಿ ಮಕ್ಕಳಿಗೆ ಶೀತವಾಗುತ್ತದೆ. ಈ ಎರಡು ಸಮಯದಲ್ಲೂ ನಾವು ಊರೂರು ಸುತ್ತಿ ಕತ್ತೆ ಹಾಲು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಆಂಧ್ರ ಕತ್ತೆ ಮಾಲೀಕ ವೆಂಕಟಪ್ಪ. ಒಟ್ಟಾರೆ ಕತ್ತೆಗೊಂದು ಕಾಲ ಎಂಬ ಮಾತು ಈಗ ಕತ್ತೆ ಹಾಲಿನ ಡಿಮ್ಯಾಂಡ್ ನೋಡಿ ಸತ್ಯ ಎನ್ನುವಂತಾಗಿದೆ.

Get real time updates directly on you device, subscribe now.

Comments are closed.

error: Content is protected !!