ಗುಬ್ಬಿ: ಸುಮಾರು 20 ವರ್ಷಗಳಿಂದಲೂ ಬೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿಸಿಲ್ಲ. ಹಾಗಾಗಿ ಸಾಕಷ್ಟು ಸಮಸ್ಯೆಗಳಿವೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಕಡಬ ಹೋಬಳಿಯ ಬಾಡೇನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಊರಿನ ಎಲೆಕ್ಟ್ರಿಕಲ್ ವಸ್ತುಗಳು ನಾಶವಾಗಿರುವುದೇ ಅಲ್ಲದೆ ಲೋಕೇಶ್ ಎಂಬುವವರ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಕಾರಣ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ವಿದ್ಯುತ್ ಇಲಾಖೆಯಲ್ಲಿ ಹಳೆಯ ಕಂಬಗಳು ಹಳೆಯ ತಂತಿಗಳು ಅವೇ ಇದ್ದು ಬದಲಾವಣೆ ಮಾಡಿಲ್ಲ. ಹಾಗಾಗಿ ಪ್ರೈಮರಿ ಲೈನ್ ಸೆಕೆಂಡರಿ ಲೈನ್ ಮೇಲೆ ಬಿದ್ದು ಈ ದೊಡ್ಡ ಅವಘಡ ಸಂಭವಿಸಿದೆ.
ನಾನು ಸ್ಥಳಕ್ಕೆ ಭೇಟಿ ನೀಡಿದ್ದು ಎಲ್ಲಾ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇದು ಬೆಸ್ಕಾಂ ಇಲಾಖೆಯ ತಪ್ಪಿನಿಂದಲೇ ಆಗಿರುವುದರಿಂದ ಇದಕ್ಕೆ ಅವರೇ ಜವಾಬ್ದಾರಿಯುತವಾಗಿ ಗ್ರಾಮದ ಲೋಕೇಶ್ ಅವರಿಗೆ ನಷ್ಟವಾಗಿರುವ ವಸ್ತುಗಳು ಮನೆ ಸೇರಿದಂತೆ ಎಲ್ಲದಕ್ಕೂ ಸಹ ಪರಿಹಾರ ನೀಡುವುದು ಅವರ ಕರ್ತವ್ಯವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಜೊತೆಯಲ್ಲೂ ಮಾತುಕತೆ ಮಾಡುತ್ತೇನೆ ಎಂದು ತಿಳಿಸಿದರು.
ಸುಮಾರು 70 ಲಕ್ಷ ಮೌಲ್ಯ ವಸ್ತುಗಳನ್ನು ಕಳೆದುಕೊಂಡಿರುವ ಲೋಕೇಶ್ ಮಾತನಾಡಿ, ನಮ್ಮ ಇಡೀ ಬದುಕೇ ಇಂದು ಬೀದಿಗೆ ಬಿದ್ದಂತಾಗಿದೆ. ಮನೆಯಲ್ಲಿ ತಿನ್ನಲು ಹುಡಲು ಯಾವುದೇ ಬಟ್ಟೆ ವಸ್ತುಗಳು ಸಹ ಇಲ್ಲ. ಪ್ರತಿನಿತ್ಯ ಜೀವನಕ್ಕಾಗಿ ಫೋಟೋ ವೀಡಿಯೋ ಮಾಡಿ ಬದುಕುತ್ತಿದ್ದೆ, ಈ ಘಟನೆಯಿಂದ ಎಲ್ಲವೂ ಸುಟ್ಟು ಹೋಗಿದ್ದು, ನನ್ನ ಬದುಕಿಗೆ ಸರಕಾರ ದಾರಿ ಮಾಡಿಕೊಟ್ಟು ಪರಿಹಾರ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಮುನೇಶ್, ಸಿದ್ದರಾಮೇ ಗೌಡ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಉಪ ತಾಹಶೀಲ್ದಾರ್ ಅರುಣ್ ಕುಮಾರ್, ಎಇಇ ಅನಿಲ್ ಕುಮಾರ್, ಶಿವಾನಂದ ಸೇರಿದಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Comments are closed.