ಸಚಿವ ಮಾಧುಸ್ವಾಮಿ ಉಸ್ತುವಾರಿ ಬದಲಿಸಿದ್ರೆ ಹೋರಾಟ: ರಾಜಣ್ಣ

ಮಾಧುಸ್ವಾಮಿ ಮೇಲೆ ಬಿತ್ತ ಕಣ್ಣು?

533

Get real time updates directly on you device, subscribe now.


ಗುಬ್ಬಿ: ಸಚಿವ ಮಾಧುಸ್ವಾಮಿಯವರನ್ನು ಬದಲಿಸಿದರೆ ಹಾಗೂ ಹಾಗಲವಾಡಿ ಕೆರೆಗೆ ಶೀಘ್ರವಾಗಿ ಹೇಮೆ ಹರಿಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹಾಗೂ ಮುಂಬರುವ ಎಲ್ಲಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹಾಗಲವಾಡಿ ನೀರಾವರಿ ಹೋರಾಟ ಸಮಿತಿ ಸದಸ್ಯ ರಾಜಣ್ಣ ಎಚ್ಚರಿಸಿದರು.
ಹಾಗಲವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಹಾಗಲವಾಡಿ, ಮತ್ತೀಕೆರೆ, ಗಳಿಗೆಕೆರೆ, ಹರಳಕಟ್ಟೆ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುವ ಕಾಮಗಾರಿಗೆ ಟೆಂಡರ್ ಹಂತಕ್ಕೆ ತಂದಿರುವ ಸಚಿವ ಮಾಧುಸ್ವಾಮಿಯವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಮಾಡುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸುಮಾರು ಇಪ್ಪತ್ತೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಿನ ಯೋಜನೆಗಳಿಗೆ ಚಾಲನೆ ನೀಡಿ ನೀರು ಹರಿಸುವಲ್ಲಿ ಯಶಸ್ವಿ ಕಾಣುತ್ತಿರುವ ಆಶಾಭಾವನೆ ಹೊಂದಿದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಬದಲಾಯಿಸಿ ಬೇರೆಯ ವರಿಗೆ ನೀಡುತ್ತಿರುವ ಸುದ್ದಿಯೊಂದು ಹರಿದಾಡುತ್ತಿದ್ದು, ಯಾವುದೇ ಕಾರಣಕ್ಕೂ ಅವರನ್ನು ಜಿಲ್ಲಾ ಉಸ್ತುವಾರಿಯಿಂದ ಬದಲಾಯಿಸಬಾರದು, ತುಮಕೂರು ಜಿಲ್ಲೆಗೆ ನೀಡಿದಂತಹ ನೀರಿನ ಪಾಲನ್ನ ಪೂರ್ಣವಾಗಿ ಜಿಲ್ಲೆಗೆ ತರುವಲ್ಲಿ ಯಶಸ್ವಿ ಕಂಡಂತಹ ಏಕೈಕ ಸಚಿವರೆಂದರೆ ಮಾಧುಸ್ವಾಮಿ ಮಾತ್ರ, ಇಂಥ ಪ್ರಾಮಾಣಿಕರನ್ನ ಬದಲಾಯಿಸಿದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಇಂಥ ಕಾರ್ಯವೇನಾದರೂ ಮಾಡುವಲ್ಲಿ ಸರ್ಕಾರ ಮುಂದಾದರೆ ಜಿಲ್ಲೆಯಾದ್ಯಂತ ಹೋರಾಟದ ಬಿಸಿ ನೋಡಬೇಕಾಗುತ್ತದೆ, ಅಷ್ಟೇ ಅಲ್ಲದೆ ಹಾಗಲವಾಡಿ ಜನತೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೇರಿ ಮುಂಬರುವ ಎಲ್ಲಾ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದರು.
ನೀರಾವರಿ ವಿಚಾರದಲ್ಲಿ ಮಾಜಿ ಪ್ರಧಾನಿಗಳ ಒಬ್ಬರು ಮಾಧುಸ್ವಾಮಿ ಅವರ ಕಾರ್ಯವೈಖರಿಯನ್ನು ಶ್ಲಾಸಿದ್ದಾರೆ, ಆದರೆ ಸ್ವಪಕ್ಷದ ಕೆಲವು ರಾಜಕಾರಣಿಗಳು ಮಾಧುಸ್ವಾಮಿ ಅವರ ಏಳಿಗೆ ಸಹಿಸಲಾರದೆ ಈ ಕೃತ್ಯಕ್ಕೆ ಕೈ ಹಾಕಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಅಂತಹ ಕಿಡಿಗೇಡಿಗಳ ಮಾತಿಗೆ ಓಗೊಟ್ಟು ಸಚಿವರನ್ನು ಬದಲಾಯಿಸಿದಲ್ಲಿ ಮುಂದಿನ ದಿನಗಳಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಮುಖಂಡ ಲೋಕೇಶ್ ಮಾತನಾಡಿ ನೀರಾವರಿ ಸಚಿವರಾಗಿ ಮಾಧುಸ್ವಾಮಿ ಅವರು ನಾಲೆಯ ಪೂರ್ಣ ಮಾಹಿತಿ ಹೊಂದಿದ್ದಾರೆ, ಅಷ್ಟೇ ಅಲ್ಲದೆ ಎಲ್ಲೆಲ್ಲಿ ನಾಲೆಗಳು ಸ್ಥಗಿತವಾಗಿದೆ ಆ ಜಾಗಕ್ಕೆ ಬಂದು ಸಮಸ್ಯೆ ಬಗೆಹರಿಸಿ ನೀರು ಹರಿಸುವಲ್ಲಿ ಶ್ರಮಿಸುತ್ತಿದ್ದಾರೆ, ಇಂತಹ ದಕ್ಷ ಹಾಗೂ ಪ್ರಾಮಾಣಿಕ ಸಚಿವರನ್ನು ಇತಿಹಾಸದಲ್ಲೆಲ್ಲೂ ಕಂಡಿಲ್ಲ, ಬಡವರ ಪರ ಇರುವ ಸಚಿವರನ್ನು ಬದಲಾಯಿಸುವ ಪ್ರಮೇಯವೇನಿದೆ ಎಂದು ಪ್ರಶ್ನಿಸಿದರು.
ಇಂಥವರನ್ನು ಬದಲಾಯಿಸಿದರೆ ಯಾವುದೇ ಕಾರಣಕ್ಕೂ ನಾವು ಸುಮ್ಮನಿರುವುದಿಲ್ಲ, ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಹಿರಿಯ ಮುಖಂಡ ಕರಿಯಪ್ಪಜಟ್ಟಿ ಮಾತನಾಡಿ ಇಪ್ಪತ್ತೈದು ವರ್ಷದ ನೀರಿನ ಬವಣೆ ಈಗ ತೀರುವ ಆಶಯ ಸಚಿವರಿಂದ ಹೊಂದಿದ್ದೆವು, ಆದರೆ ಇಂತಹ ಸಚಿವರನ್ನೇ ಬದಲಾಯಿಸಲು ಹೊರಟಿರುವುದು ಯಾವ ನ್ಯಾಯ, ಇವರನ್ನು ಬದಲಾಯಿಸಿದರೆ ಮತ್ತೆ ಕಾಮಗಾರಿ ನೆನೆಗುದಿಗೆ ಬೀಳುತ್ತವೆ, ಈ ಹಿಂದಿನ ಸಚಿವರು ಶಾಸಕರು ಬರಿ ಆಶ್ವಾಸನೆ ನೀಡಿರುತ್ತಾರೆ, ಆದರೆ ಇವರು ನೀರು ಹರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ, ಇಂಥವರನ್ನ ಬದಲಿಸದಿರಿ ಎಂದರು.
ಇದೇ ಸಂದರ್ಭದಲ್ಲಿ ರಾಜಗೋಪಾಲ್, ನಾಗೇಂದ್ರಪ್ಪ ಗುರುಮೂರ್ತಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಯಾನಂದ್, ಮುಖಂಡರಾದ ಗುರುಮೂರ್ತಿ, ನಾಗೇಂದ್ರಪ್ಪ, ಗುರುಪ್ರಸಾದ್, ಚನ್ನಬಸವಣ್ಣ, ಲೋಕೇಶ್, ಚಂದ್ರಶೇಖರ್, ಶಿವರಾಜ್ ಇದ್ದರು.

Get real time updates directly on you device, subscribe now.

Comments are closed.

error: Content is protected !!