ಬರಗೂರು: ಶಿರಾ ತಾಲೂಕಿನ 100 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ವ್ಯಾಸಂಗ ಮಾಡಲು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 70 ಲಕ್ಷ ರೂಪಾಯಿ, ಪಿಯುಸಿ ಹಂತದಲ್ಲಿ 2 ವರ್ಷದ ಪದವಿ ಪೂರ್ವ ಶಿಕ್ಷಣಕ್ಕೆ 1.40 ಕೋಟಿ ರೂಪಾಯಿಗಳನ್ನು ಜೇಮ್ಸ್ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದ್ದು ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಶಿರಾ ಕ್ಷೇತ್ರವನ್ನು ಶೈಕ್ಷಣಿಕ ಕಾಶಿ ಮಾಡಬೇಕೆಂಬ ಮಹತ್ವಾಕಾಂಕ್ಷೆಗೆ ಭದ್ರಬುನಾದಿ ಹಾಕುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹೇಳಿದರು.
ಶಿರಾ ತಾಲೂಕಿನ ಬರಗೂರು ನಾರಗೊಂಡನ ಹಳ್ಳಿ, ಕರಿದಾಸರಹಳ್ಳಿ ತೊಗರಗುಂಟೆ, ಕೊಟ್ಟ, ರಂಗಾಪುರ ಗ್ರಾಮಗಳಲ್ಲಿ 2022- 23 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬರಗೂರಿನ ವಿದ್ಯಾರ್ಥಿ ಶರಣ್ಯ98.40%, ನಿರ್ಮಲ.ವಿ. 98.08%, ಶ್ರೇಯ 98.30%, ಪೂರ್ವಿತ 97.76%, ಉನ್ನತ ಶ್ರೇಣಿ 98% ಪಡೆದಿದ್ದು, ತಾಲ್ಲೂಕಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಮನೆಗೆ ತೆರಳಿ ಆರ್ಥಿಕ ನೆರವು ನೀಡಿ ಮಾತನಾಡಿದರು.
ಒಬ್ಬ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ನನಗೆ ಕುಟುಂಬಗಳ ಕಷ್ಟ ಗೊತ್ತಿದೆ. ನಾನು ದುಡಿದ ಅಲ್ಪ ಪಾಲನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಳಸಿದರೆ ಶಿಕ್ಷಣ ಕ್ಷೇತ್ರ ಸುಧಾರಣೆ ಕಾಣುವುದರ ಜೊತೆಗೆ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು.
ಸಮಾಜದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಮಾರ್ಗ ಎಂಬ ಗುರಿಯೊಂದಿಗೆ ಮುನ್ನಡೆದಾಗ ಯಶಸ್ಸು ತಾನಾಗಿಯೇ ಬರಲಿದೆ. ಸಾಧಿಸುವ ಛಲ, ಅದಮ್ಯ ವಿಶ್ವಾಸ, ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದಾಗ ಯಶಸ್ಸು ತಾನಾಗಿಯೇ ಬರಲಿದೆ ಎಂದರು.
ವಿದ್ಯಾರ್ಥಿನಿ ಶ್ರೇಯ ಮಾತನಾಡಿ ನಮ್ಮ ಮನೆಯಲ್ಲಿ ದುಡಿವ ವ್ಯಕ್ತಿಗಳೇ ಇಲ್ಲ. ಅಜ್ಜಿಯ ಆಸರೆಯಿಂದ ಎಸ್ಎಸ್ಎಲ್ಸಿ ಯಲ್ಲಿ ಶೇಕಡ 97 ರಷ್ಟು ಅಂಕ ಪಡೆದೆ, ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರವೇಶ ಕಲ್ಪಿಸುವುದರ ಜೊತೆಗೆ ಎರಡು ವರ್ಷದ ವ್ಯಾಸಂಗದ ಶುಲ್ಕ 1.40 ಲಕ್ಷ ರೂಪಾಯಿಗಳನ್ನು ನೀಡುತ್ತಿರುವ ಚಿದಾನಂದ ಗೌಡರವರ ಸೇವೆ ನಮ್ಮಂತಹ ಬಡ ಕುಟುಂಬಗಳಿಗೆ ವರದಾನವಾಗಿದೆ. ನಮ್ಮ ಭವಿಷ್ಯ ರೂಪಿಸಲು ಇವರು ನೀಡುತ್ತಿರುವ ನೆರವು ಎಂದು ಮರೆಯಲು ಸಾಧ್ಯವಿಲ್ಲ ಎಂದರು.
ಪ್ರಾಂಶುಪಾಲ ಸುಬ್ರಮಣಿ, ಮುಖಂಡರಾದ ಸಂತೆಪೇಟೆ ನಟರಾಜು, ಕೊಟ್ಟ ಶ್ರೀನಿವಾಸ್ ಗೌಡ, ಗ್ರಾಮ ಪಂಚಾಯತಿ ಸದಸ್ಯ ಟಿ.ಡಿ. ನರಸಿಂಹಮೂರ್ತಿ, ಲಿಂಗದಹಳ್ಳಿ ಸುಧಾಕರ್ ಗೌಡ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ ಪಟೇಲ್, ಸದಸ್ಯ ಎಂ.ಶಿವಲಿಂಗಯ್ಯ, ಹೊಸಹಳ್ಳಿ ಸಿದ್ದಲಿಂಗಪ್ಪ, ದೊಡ್ಡಬಾಣಗೆರೆ ಶ್ರೀಧರ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಕುಮಾರ್, ಕಂಬಣ್ಣ, ಕರಿಯಣ್ಣ, ಕುಮಾರ್, ನಾಗರಾಜ ಗೌಡ, ರಾಜಣ್ಣ, ನರಸಿಂಹಣ್ಣ, ದೇವರಾಜ್, ಪುರುಷೋತ್ತಮ್ ಇದ್ದರು.
Comments are closed.