ತುಮಕೂರು: ಮಕ್ಕಳು ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಹಾಗೂ ಬಾಲ್ಯ ಅನುಭವಿಸಲು ಪೋಷಕರು ಅವಕಾಶ ಮಾಡಿಕೊಡಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 18 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅದರಲ್ಲೂ 14 ವರ್ಷದೊಳಗಿನ ಮಕ್ಕಳು ಯಾವುದೇ ಅಪಾಯಕಾರಿ ಕೆಲಸ ಮಾಡುವಂತಿಲ್ಲ. ಬಾಲ ಕಾರ್ಮಿಕರಾಗಿ ದುಡಿಯುವಂತಹ ಮಕ್ಕಳು ಕಂಡಲ್ಲಿ ಸಾರ್ವಜನಿಕರು ಇಲಾಖೆಯ ಗಮನಕ್ಕೆ ತರಬೇಕು. ಬಾಲ ಕಾರ್ಮಿಕ ಪದ್ಧತಿ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಆಚರಣೆ ಹಾಗೂ ಜಾಗೃತಿ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಅಧಿಕಾರಿ ಹೆಚ್.ಎನ್.ರಮೇಶ್, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಶ್ವದಾದ್ಯಂತ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ದಿನ ಆಚರಿಸಲಾಗುತ್ತಿದೆ. ಪೋಷಕರು ಹಾಗೂ ಮಾಲೀಕರು ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರಬೇಕು. ಮಕ್ಕಳನ್ನು ಬಾಲ್ಯದಲ್ಲಿಯೇ ದುಡಿಮೆಗೆ ತಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾವನ್ನು ನಗರದ ಆರ್ಯನ್ ಶಾಲೆಯಿಂದ ಬಾಲಭವನದ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ನೂರುನ್ನೀಸಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್.ಆರ್.ಎಂ, ಕಾರ್ಮಿಕ ನಿರೀಕ್ಷಕ ವೆಂಕಟೇಶ್ ಬಾಬು, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರವಿಕುಮಾರ್ ಮತ್ತಿತರರು ಹಾಜರಿದ್ದರು.
Comments are closed.