ತುಮಕೂರು: ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುವ ಭರವಸೆಯನ್ನು ನಾಡಿನ ಜನತೆಗೆ ನೀಡಿದೆ. ಜನರು ನಮ್ಮ ಸರ್ಕಾರದ ಮೇಲೆ ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ಆದುದರಿಂದ ಜನರ ನಿರೀಕ್ಷೆಗೆ ತಕ್ಕಂತೆ ನಾವೆಲ್ಲರೂ ಪ್ರಾಮಾಣಿಕವಾಗಿ ಜನರ ಕಲ್ಯಾಣ ಕೆಲಸಗಳನ್ನು ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿ, ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಳೆದ ನಾಲ್ಕು ವರ್ಷಗಳಲ್ಲಿ ಕಷ್ಟ ಅನುಭವಿಸಿದ್ದು, ನಮ್ಮ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದುದರಿಂದ ಜನರ ನಿರೀಕ್ಷೆಗೆ ತಕ್ಕಂತೆ ಜನಪರ ಕೆಲಸ ಮಾಡುವಂತೆ ಕರೆ ನೀಡಿದರು.
ಹೊಸ ಬಜೆಟ್ ನಲ್ಲಿ ಜನಪರ ಕಲ್ಯಾಣ ಕಾರ್ಯಕ್ರಮ ನೀಡಲಾಗುವುದು. ಆಯಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನ ಮಾಡಬೇಕು. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳ ಜಾರಿ ಕುರಿತು ಅಂಕಿ ಅಂಶಗಳ ಮಾಹಿತಿ ನೀಡುವಾಗ ಎಚ್ಚರಿಕೆಯಿಂದ ಸಲ್ಲಿಸಬೇಕು. ಜಿಲ್ಲಾ ಮುಖ್ಯಸ್ಥರನ್ನೇ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಜನ ಸಾಮಾನ್ಯರು ಹೆಚ್ಚಾಗಿ ಭಾಗವಹಿಸುವ ಕೃಷಿ, ಕಂದಾಯ ಸೇರಿದಂತೆ ಎಲ್ಲಾ ಇಲಾಖೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜನರನ್ನು ಕಚೇರಿಗೆ ವಿನಾ ಕಾರಣ ಅಲೆಸಬಾರದು. ಜನರಿಂದ ಯಾವುದೇ ಪ್ರತಿಫಲ ನಿರೀಕ್ಷಿಸಬಾರದು. ಈ ಮೂಲಕ ಒಳ್ಳೆಯ ಆಡಳಿತ ನೀಡೋಣ ಎಂದು ಕರೆ ನೀಡಿದರು.
ಈಗಾಗಲೇ ಮಳೆ ಕೊರತೆ ಇದ್ದು, ಮಳೆ ಕೊರತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಪಿಎಲ್ ಕಾರ್ಡ್ ನೀಡುವ ಮುನ್ನ 10-15 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಬೇಕಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಶೇ.80 ರಷ್ಟು ಬಿಪಿಎಲ್ ಅಂತ್ಯೋದಯ ಕಾರ್ಡ್ಗಳನ್ನು ನೀಡಲಾಗಿದೆ. ಅನರ್ಹರು ಸಹ ಬಿಪಿಎಲ್ ಕಾರ್ಡ್ಗಳನ್ನು ಪಡೆದಿರುವ ಸಾಧ್ಯತೆ ಇದ್ದು, ಆಂದೋಲನ ರೀತಿ ಬಿಪಿಎಲ್ ಕಾರ್ಡ್ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಂಡು, ನಿಗದಿಪಡಿಸಿರುವ 10-15 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಿ ಅನರ್ಹರನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡುವಂತೆ ಗೃಹ ಸಚಿವರು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರಿಗೆ ಸೂಚಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಪ್ಲಾಸ್ಟಿಕ್ ಮಾದರಿಯ ನೀರಿನ ಕೊಳಾಯಿಗಳನ್ನು ಹಾಕಲಾಗಿದೆ. ಇದರ ಬಾಳಿಕೆ ಸಹ ಕಡಿಮೆಯಿದ್ದು, ಈ ಕುರಿತಂತೆ ಕ್ರಮವಹಿಸುವಂತೆ ಮತ್ತು ಜಿಲ್ಲೆಯಾದ್ಯಂತ ಎಸ್ ಸಿಪಿ, ಟಿಎಸ್ ಪಿ ಯೋಜನೆಯ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಪಿಆರ್ಇಡಿ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಅವರಿಗೆ ಸೂಚಿಸಿದರು.
ಕೆರೆಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು ಎಂದು ಸಣ್ಣ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಎತ್ತಿನ ಹೊಳೆ ಯೋಜನೆ ಕುರಿತಂತೆ ಸಮಗ್ರ ಪರಿಶೀಲನಾ ಸಭೆಯನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಪ್ರತಿ ಗ್ರಾಹಕರ ವಾರ್ಷಿಕ ವಿದ್ಯುತ್ ಸರಾಸರಿ ಬಳಕೆ ಕುರಿತಂತೆ ಮಾಹಿತಿ ಸಿದ್ಧಪಡಿಸಿಟ್ಟುಕೊಳ್ಳುವಂತೆ ಬೆಸ್ಕಾಂನ ಸೂಪರಿಡೆಂಟೆಂಟ್ ಇಂಜಿನಿಯರ್ ಲೋಕೇಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳು ಗೊಬ್ಬರ, ಬಿತ್ತನೆಬೀಜ, ದಾಸ್ತಾನು ಹಾಗೂ ವಿತರಣೆ ಬಗ್ಗೆ ಆದ್ಯತೆ ಅನುಸರಿಸಿ ಕ್ರಮ ವಹಿಸಬೇಕು. ಮಳೆ ಜಾಸ್ತಿ ಬಂದಲ್ಲಿ ಅದಕ್ಕೂ ಸಹ ಪೂರಕ ತಯಾರಿ ನಡೆಸಬೇಕು ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸವಾಗಬೇಕು. ಶಾಲೆ ಬಿಟ್ಟಂತಹ ಮಕ್ಕಳ ಕುರಿತು ಅಧಿಕಾರಿಗಳು ನಿಗಾವಹಿಸಿ ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ ಪದ್ಧತಿ ತಪ್ಪಿಸಬೇಕು. ಹೀಗೆ ಮಾಡಿದಲ್ಲಿ ಶಾಲೆ ತ್ಯಜಿಸುವ ಮಕ್ಕಳ ಸಂಖ್ಯೆ ಕಡಿಮೆಯಾಗುವುದು. ಮಕ್ಕಳಿಗೆ ಪಠ್ಯಪುಸ್ತಕ, ಯೂನಿ ಫಾರಂಗಳನ್ನು ಸಕಾಲಕ್ಕೆ ಒದಗಿಸಬೇಕು ಎಂದರು.
ವಿದ್ಯುತ್ ಲೈನ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು, ಲೈನ್ ಇನ್ಸ್ಪೆಕ್ಷನ್ ನಡೆಸಬೇಕು. ಹೀಗೆ ಮಾಡದಿದ್ದಲ್ಲಿ ಮಳೆ ಗಾಳಿಯಿಂದ ಟಿಸಿ ಸುಟ್ಟು ಹೋಗುವ ಹಾಗೂ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗುವ ಸಮಸ್ಯೆಗಳು ಉಂಟಾಗುತ್ತವೆ, ಬೆಸ್ಕಾಂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಫೀಲ್ಡ್ ಕೆಲಸಕ್ಕೆ ತೆರಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಲ್ಲಿ ಅಂತಹವರನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ಹೂಡುವಂತೆ ಸೂಚಿಸಿದ ಸಚಿವರು ಹೀಗೆ ಮಾಡಿದಲ್ಲಿ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತು ದೊರಕುತ್ತವೆ ಎಂದರು.
ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ದರ್ಶನ್, ಉಪ ವಿಭಾಗಾಧಿಕಾರಿಗಳಾದ ಹೋಟೆಲ್ ಶಿವಪ್ಪ, ಕಲ್ಪಶ್ರೀ, ರಿಷಿ ಆನಂದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.