ವಿದ್ಯುತ್ ಅವಘಡಕ್ಕೆ ಬೆಚ್ಚಿಬಿದ್ದ ಚೆನ್ನಿಗಪ್ಪ ಬಡಾವಣೆ ಜನತೆ

ವಿದ್ಯುತ್ ಸ್ಪರ್ಶದಿಂದ 4 ಜನ ಆಸ್ಪತ್ರೆಗೆ ದಾಖಲು- ಸ್ಥಳಕ್ಕೆ ಅಧಿಕಾರಿಗಳ ಆಗಮನ

273

Get real time updates directly on you device, subscribe now.


ಕೊರಟಗೆರೆ: ಬಿರುಗಾಳಿಯ ಆರ್ಭಟಕ್ಕೆ 11 ಕೆವಿಯ ವಿದ್ಯುತ್ ತಂತಿ ತುಂಡಾಗಿ ಸೆಕೆಂಡರಿ ತಂತಿಯ ಮೇಲೆ ಬಿದ್ದು ಚೆನ್ನಿಗಪ್ಪ ಬಡಾವಣೆಯ 45ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ. ಬೆಂಕಿ ಆರಿಸಲು ಹೋದ 4 ಜನರಿಗೆ ವಿದ್ಯುತ್ ಸ್ಪರ್ಶವಾಗಿ ಆಸ್ಪತ್ರೆಗೆ ದಾಖಲಾದರೆ ಮನೆಯಲ್ಲಿದ್ದ ಲಕ್ಷಾಂತರ ರೂ. ವಿದ್ಯುತ್ ಉಪಕರಣ ಮತ್ತು ಗೃಹ ಬಳಕೆ ವಸ್ತುಗಳು ಸುಟ್ಟು ಭಸ್ಮ ಆಗಿರುವ ಘಟನೆ ನಡೆದಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಚೀಲಗಾನಹಳ್ಳಿ ಗ್ರಾಮದ ಚೆನ್ನಿಗಪ್ಪ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಬಡಾವಣೆಯಲ್ಲಿ ಒಟ್ಟು 75 ಮನೆಗಳಿದ್ದ ಸುಮಾರು 230 ಜನ ವಾಸವಿದ್ದಾರೆ. ಏಕಾಏಕಿ ವಿದ್ಯುತ್ ಸ್ಪರ್ಶವಾಗಿ ಮನೆಗಳ ತುಂಬೆಲ್ಲಾ ಬೆಂಕಿ ಆವರಿಸಿಕೊಂಡು ಊರಿಗೆ ಊರೇ ತಮ್ಮ ಮನೆಗಳಿಂದ ಹೊರಗಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿ ಪ್ರಸ್ತುತವು ಗ್ರಾಮದಲ್ಲಿ ಭಯದ ವಾತಾವರಣ ಇದೆ.

ಚೀಲಗಾನಹಳ್ಳಿ ಗ್ರಾಮಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ, ಸಿಪಿಐ ಸುರೇಶ್, ಪಿಎಸೈ ಚೇತನಕುಮಾರ್, ಬೆಸ್ಕಾಂ ಇಲಾಖೆ ಎಇಇ ಅರಸಾರಾಜು ತಡರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸ್ಕಾಂ ಇಲಾಖೆಯ ಎಇ ಮಲ್ಲಣ್ಣ ನೇತೃತ್ವದ ಸಿಬ್ಬಂದಿ ತಂಡ ಘಟನೆಯ ರಾತ್ರಿಯಿಂದ ದಿನಪೂರ್ತಿ ಗ್ರಾಮದಲ್ಲೇ ಮೊಕ್ಕಾಂ ಹೂಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನಷ್ಟದ ಮಾಹಿತಿಯ ಅಂಕಿಅಂಶ ಕಲೆ ಹಾಕಿದ್ದಾರೆ.

ವಿದ್ಯುತ್ ಸ್ಪರ್ಶದಿಂದ 4 ಜನರಿಗೆ ಗಾಯ
ಪ್ಯಾನ್ ಗೆ ಆವರಿಸಿದ ಬೆಂಕಿ ಆರಿಸಲು ಸ್ವೀಚ್ ಆಫ್ ಮಾಡಲು ಯತ್ನಿಸಿದ ಮಂಜುನಾಥ್ ಗೆ ವಿದ್ಯುತ್ ಸ್ಪರ್ಶಸಿದೆ. ಆತನನ್ನು ರಕ್ಷಣೆ ಮಾಡಲು ಯತ್ನಿಸಿದ ತಾಯಿ, ಹೆಂಡತಿ ಮತ್ತು ಮಗನಿಗೂ ವಿದ್ಯುತ್ ಸ್ಪರ್ಶವಾಗಿ ನೆಲಕ್ಕೆ ಉರುಳಿದ್ದಾರೆ. ಚೆನ್ನಿಗಪ್ಪ ಬಡಾವಣೆಯ ಶಾರದಮ್ಮ(62), ಮಂಜುನಾಥ (46), ವರಲಕ್ಷ್ಮೀ (35), ದರ್ಶನ್ (12) ಎಂಬ 4 ಜನರಿಗೆ ಗಂಭೀರ ಗಾಯಗಳಾಗಿ ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ಪರಿಕರ ನಾಶ
ವಿದ್ಯುತ್ ಅವಘಡದಿಂದ ಚೆನ್ನಿಗಪ್ಪ ಬಡಾವಣೆಯ 45 ಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕವೇ ಕಡಿತವಾಗಿದೆ. ಬಡವರ ಮನೆಯಲ್ಲಿದ್ದ ಮೀಟರ್, ಟಿವಿ, ಪ್ಯಾನ್, ಪ್ರಿಡ್ಜ್, ಮೊಬೈಲ್ ಚಾರ್ಜರ್, ನೀರಿನ ಮೋಟಾರ್, ಸ್ವೀಚ್ ಬೋರ್ಡ್ ಸೇರಿದಂತೆ ವಿದ್ಯುತ್ ವೈರ್ ಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಬಡವಾಣೆಯ ಜನರಿಗೆ ಇನ್ನೂ ಭಯದ ವಾತಾವರಣ ಹಾಗೇ ಉಳಿದಿದೆ.

Get real time updates directly on you device, subscribe now.

Comments are closed.

error: Content is protected !!