ಚಿಕ್ಕನಾಯಕನಹಳ್ಳಿ: ಸರ್ಕಾರದ ಯೋಜನೆಗಳು ರೈತರಿಗೆ ಎಷ್ಟು ಅನುಕೂಲವಾಗುತ್ತದೆಯೋ ಅಷ್ಟೇ ಅನಾನುಕೂಲ ಆಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಪಟ್ಟಣದ ಎಪಿಎಂಸಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಕೊಬ್ಬರಿ ಖರೀದಿ ಮಾಡಲು 20 ದಿನಗಳಿಂದ ರೈತರು ಕಾಯ್ದು ಕುಳಿತರು ಕೊಬ್ಬರಿ ಖರೀದಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೊಬ್ಬರಿ ಬೆಲೆ ನಿರಂತರವಾಗಿ ಕುಸಿತದಿಂದ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿ ಕೇಂದ್ರ ಸ್ಥಾಪಿಸಿ ಪ್ರತಿ ಕ್ವಿಂಟಾಲ್ ಗೆ 11,750 ರೂ. ಬೆಲೆ ನೀಡಿ ಕೊಬ್ಬರಿಯನ್ನು ಸುಮಾರು ಎರಡು ತಿಂಗಳಿಂದ ಖರೀದಿ ಮಾಡುತ್ತಿದ್ದು, ಆದರೆ ಚಿಕ್ಕನಾಯಕನ ಹಳ್ಳಿ ತಾಲೂಕಿನಲ್ಲಿ ಕೊಬ್ಬರಿ ಖರೀದಿ ಕೇಂದ್ರವೇ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕೊಬ್ಬರಿ ಮಾರಾಟ ಮಾಡಲು ರೈತರು ಕಷ್ಟ ಪಡುವಂತಾಗಿದೆ. ಖರೀದಿ ಕೇಂದ್ರದ ಮುಂದೆ ಕಣ್ಣೀರಾಕುವ ಪರಿಸ್ಥಿತಿಯಲ್ಲಿ ರೈತರು ಬಂದು ನಿಂತಿದ್ದಾರೆ. ಬಾಡಿಗೆ ಟ್ಯಾಕ್ಟರ್ ನಲ್ಲಿ ಕೊಬ್ಬರಿ ತುಂಬಿಕೊಂಡು 20 ದಿನ ಕಳೆದರು ಮಾರಾಟ ಮಾಡಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಏಕಾಏಕಿ ಮಂಗಳವಾರ ಚಿಕ್ಕನಾಯಕನ ಹಳ್ಳಿ ತಾಲೂಕಿನ ಕೊಬ್ಬರಿ ಗುಣಮಟ್ಟವಾಗಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಕೊಬ್ಬರಿ ಖರೀದಿ ನಿಲ್ಲಿಸಿದ್ದು ರೈತರಿಗೆ ದಿಕ್ಕುತೋಚದಂತಾಗಿದೆ.
ಕೊಬ್ಬರಿಯ ದುಡ್ಡು ಟ್ರಾಕ್ಟರ್ ಬಾಡಿಗೆಗೆ
ಎರಡು ತಿಂಗಳಿಂದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರಿಂದ ಕೊಬ್ಬರಿ ಸರ್ಕಾರ ಖರೀದಿ ಮಾಡುತ್ತಿದ್ದು, ಆದರೆ ಒಬ್ಬ ರೈತ ಕೊಬ್ಬರಿ ಮಾರಾಟ ಮಾಡಲು ಸುಮಾರು 10 ರಿಂದ 20 ದಿನಗಳ ಕಾಲ ಎಪಿಎಂಸಿ ಆವರಣದಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ರೈತರ ಬಳಿ ಟ್ರಾಕ್ಟರ್ ಇಲ್ಲವಾಗಿದ್ದು ಬಾಡಿಗೆ ಟ್ರಾಕ್ಟರ್ ಗಳ ಮೂಲಕ ಕೊಬ್ಬರಿ ಮಾರಾಟ ಮಾಡಲು ತರಲಾಗಿದೆ. ಒಂದು ಟ್ರಾಕ್ಟರ್ ಗೆ ಒಂದು ದಿನಕ್ಕೆ ಸುಮಾರು 1000 ರಿಂದ 1500ದ ವರೆಗೆ ಬಾಡಿಗೆ ವಿಧಿಸಲಾಗುತ್ತದೆ. ಕೊಬ್ಬರಿಯಲ್ಲಿ ದುಡಿದ ಹಣದ ಒಂದು ಭಾಗ ಕೊಬ್ಬರಿ ಮಾರಾಟಕ್ಕೆ ತಂದ ಟ್ರಾಕ್ಟರ್ ಬಾಡಿಗೆಗೆ ಹೋಗುತ್ತದೆ.
ಏಕಾಏಕಿ ಕೊಬ್ಬರಿ ಖರೀದಿ ಸ್ಥಗಿತ
ಎರಡು ತಿಂಗಳಿಂದ ಖರೀದಿ ಮಾಡಲಾಗುತ್ತಿದ್ದ ಕೊಬ್ಬರಿಯನ್ನು ಮಂಗಳವಾರ ಕೊಬ್ಬರಿಯ ಗುಣಮಟ್ಟ ಕಳಪೆಯಾಗಿದೆ ಎಂದು ಏಕಾಏಕಿ ನಿಲ್ಲಿಸಿದ್ದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇಷ್ಟು ದಿನ ಗುಣಮಟ್ಟ ಇಲ್ಲದ ಕೊಬ್ಬರಿ ಖರೀದಿ ಮಾಡಿದ್ರಾ, ಟ್ರಾಕ್ಟರ್ ನಲ್ಲಿ ಇರುವ ರೈತರ ಕೊಬ್ಬರಿಯನ್ನು ನೋಡದೆ ಗುಣಮಟ್ಟವನ್ನು ಹೇಗೆ ನಿರ್ಧರಿಸುತ್ತಾರೆ ಎಂಬುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರೈತರ ಸಮಸ್ಯೆ ಬಗೆಹರಿಸಲು ವಿಫಲರಾದರ ಅಧಿಕಾರಿಗಳು
ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭವಾದ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದು ತಹಶೀಲ್ದಾರ್ ಸೇರಿದಂತೆ ಸಂಬಂದಪಟ್ಟ ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ.
ರೈತರ ಕೊಬ್ಬರಿಗಿಂತ ವರ್ತಕರ ಕೊಬ್ಬರಿಯನ್ನು ಈ ಬಾರಿ ಹೆಚ್ಚಾಗಿ ಖರೀದಿ ಮಾಡಲಾಗಿದೆ, ಟ್ರಾಕ್ಟರ್ ಬಾಡಿಗೆ ಪಡೆದು ನಾವು ಕೊಬ್ಬರಿ ತಂದಿದ್ದು 10 ದಿನ ಕಳೆದರು ಸಹ ಕೊಬ್ಬರಿ ಖರೀದಿ ಮಾಡಲಾಗಿಲ್ಲ. ಮಂಗಳವಾರ ಯಾವುದೇ ಮಾಹಿತಿ ನೀಡದೆ ಖರೀದಿ ನಿಲ್ಲಿಸಿದ್ದಾರೆ. ಕೊಬ್ಬರಿ ಖರೀದಿ ಮಾಡದಿದ್ದರೆ ಪ್ರತಿಭಟನೆ ಮಾಡಲಾಗುತ್ತದೆ ಚಿಕ್ಕನಾಯಕನ ಹಳ್ಳಿಯ ಯುವ ರೈತ ವಿಜಯ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
Comments are closed.