ತುಮಕೂರು: ಬಸವನಗುಡಿ ನ್ಯಾಷನಲ್ ಮೈದಾನದಲ್ಲಿ ನಡೆದ ತಿಗಳ ಜನ ಜಾಗೃತಿ ಸಮಾವೇಶದಲ್ಲಿ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಗಳ ಜನಾಂಗಕ್ಕೆ ಎರಡು ವಿಧಾನಪರಿಷತ್ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ಆಗ್ನಿವಂಶ ಕ್ಷತ್ರಿಯರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಎ.ಎಸ್.ಬಸವರಾಜು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಎಂದರೆ ಸಾಮಾಜಿಕ ನ್ಯಾಯ ಎಂದು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಎಲ್ಲೆಡೆ ಹೇಳುತ್ತಿದ್ದಾರೆ.
ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಇದುವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲ. ಹಾಗಾಗಿ ತುಮಕೂರು ಭಾಗದಿಂದ ರೇವಣ್ಣಸಿದ್ದಯ್ಯ ಅವರನ್ನು ಎಂಎಲ್ ಸಿ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.
ರೇವಣ್ಣ ಸಿದ್ದಯ್ಯ ಕಳೆದ ಮೂವತ್ತು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಈ ಭಾಗದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಿಗಳ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಅವರನ್ನು ಎಂಎಲ್ ಸಿ ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಈ ಹಿಂದೆ ಪಿ.ಆರ್.ರಮೇಶ್ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ನಂತರ ಎಂಎಸ್ ಸಿ ಮಾಡಲಾಗಿತ್ತು. ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಮುಂದುವರೆಸಬೇಕೆಂಬುದು ಸಮಸ್ತ ತಿಗಳ ಸಮುದಾಯದ ಒತ್ತಾಯವಾಗಿದೆ ಎಂದು ಎ.ಎಸ್.ಬಸವರಾಜು ನುಡಿದರು.
ಕೋಲಾರದಲ್ಲಿ ಎಲ್.ಎ.ಮಂಜುನಾಥ್, ರಾಮನಗರದ ಶ್ರೀಕಾಂತ ಸೇರಿದಂತೆ ಹಲವರು ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದು, ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂತಹವರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ಸಿಗುವಂತೆ ಮಾಡಬೇಕು. ಹಾಗೆಯೇ ತಿಗಳರ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡಿ ಅನುದಾನ ಬಿಡುಗಡೆ ಮಾಡಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ತುಮಕೂರು ಸಮೀಪದ ಚಿಕ್ಕಹಳ್ಳಿಯ ತಿಗಳ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳನ್ನು ದುಷ್ಕರ್ಮಿಗಳು ಕಾಡಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಸುಮಾರು 3 ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಪತ್ತೆಯಾಗಿಲ್ಲ. ಪೊಲೀಸರ ಸದರಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ತುಮಕೂರು ಜಿಲ್ಲೆಯವರೇ ಆದ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಕರಣವನ್ನು ರಿಓಪನ್ ಮಾಡಿಸಿ ತನಿಖೆ ನಡೆಸಿ ತಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮಾಡಬೇಕು. ಗೃಹ ಸಚಿವರು ನ್ಯಾಯ ಕೊಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಕೂಡಲೇ ನೊಂದವರಿಗೆ ನ್ಯಾಯ ದೊರಕಿಸುವ ಕೆಲಸ ಆಗಬೇಕೆಂದು ಎ.ಎಸ್.ಬಸವರಾಜು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ ಮತ್ತಿತರರು ಇದ್ದರು.
Comments are closed.