ತುಮಕೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆ ಹಿಂಪಡೆಯಬೇಕು. ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ತುಮಕೂರು ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ನೂರಾರು ಜನರು ಪಾಲ್ಗೊಂಡು ಸರಕಾರ ಈ ಹಿಂದೆ ರೈತ ಸಂಘಟನೆಗಳಿಗೆ ಕೊಟ್ಟ ಮಾತಿನಂತೆ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೂಡಲೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ- 2013, ಎಪಿಎಂಸಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಹಾಗೂ ಗೋ ವಂಶ ಸಂರಕ್ಷಣಾ ಕಾಯ್ದೆಗಳನ್ನು ಸರಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಧರಣಿ ನಿರತ ರೈತ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಆರ್ಎಸ್ಎಸ್ ಅಣತಿಯಂತೆ ನಡೆಯುವ ಬಿಜೆಪಿ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಉಳುವವನೇ ಭೂಮಿ ಒಡೆಯ ಎಂಬ ಮಹಾತ್ವಕಾಂಕ್ಷೆಗೆ ಕೊಡಲಿ ಪೆಟ್ಟು ಬಿದ್ದಿರುವುದಲ್ಲದೆ, ಉಳ್ಳವನೇ ಭೂಮಿ ಒಡೆಯ ಎಂಬಂತಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಭೂ ಮಾಫೀಯದವರಿಗೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ರೈತರಿಂದ ಕಸಿದು ನೀಡುವ ಪ್ರಯತ್ನ ನೀಡುವ ಪ್ರಕ್ರಿಯೆ ಇದಾಗಿದ್ದು, ಇದನ್ನು ಆರಂಭದಿಂದಲೂ ರೈತ ಸಂಘ ವಿರೋಧಿಸುತ್ತಾ ಬಂದಿದೆ. ರೈತರು ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಬೆಂಬಲ ಸೂಚಿಸಿದ್ದ ಸಿದ್ದರಾಮಯ್ಯ ನಮ್ಮ ಸರಕಾರ ಬಂದರೆ ಈ ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿತ್ತು. ಆದರಂತೆ ಕೂಡಲೇ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ ಯುವ ಜನತೆ, ಪ್ರಗತಿಪರ ಚಳವಳಿಯ ನೇತಾರರು ಶ್ರಮಿಸಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಮತದಾರರಿಗೆ ನೀಡಿದ್ದ ಐದು ಗ್ಯಾರೆಂಟಿಗಳನ್ನು ಈಡೇರಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳೆವಣಿಗೆಯಾಗಿದೆ. ಅದೇ ರೀತಿ ರೈತರಿಗೆ ಮಾರಕವಾಗಿರುವ ಈ ಕಾಯ್ದೆಗಳನ್ನು ವಾಪಸ್ ಪಡೆದು, ದೇಶದ ಬೆನ್ನೆಲುಬಾಗಿರುವ ರೈತರನ್ನು ಕಾಪಾಡಬೇಕು ಎಂದು ಎ.ಗೋವಿಂದರಾಜು ಒತ್ತಾಯಿಸಿದರು.
ಈ ಹಿಂದಿನ ಸರಕಾರ ತನ್ನ ಅಂಗ ಸಂಸ್ಥೆಯಾದ ಸಂಘ ಪರಿವಾರಕ್ಕೆ ನೂರಾರು ಎಕರೆ ಸರಕಾರಿ ಜಾಗ ಮಂಜೂರು ಮಾಡಿದೆ. ರೈತರು ಕೃಷಿಗಾಗಿ ಸಣ್ಣ ಪ್ರಮಾಣದ ಸರಕಾರಿ ಜಮೀನು ಉಳುಮೆ ಮಾಡಿ ಫಾರಂ ನಂ 50-53 ಮತ್ತು 57 ಹಾಕಿ ಕಾಯುತಿದ್ದರೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಆದರೆ ಯಾವುದೇ ಷರತ್ತು ಇಲ್ಲದೆ ನೂರಾರು ಎಕರೆಯನ್ನು ಸಂಘ ಪರಿವಾರದ ಸಂಘಟನೆಗಳಿಗೆ ನೀಡಲಾಗಿದೆ. ಸರಕಾರ ಕೂಡಲೇ ಮಂಜೂರಾತಿ ರದ್ದುಪಡಿಸಿ ಭೂಮಿ ವಾಪಸ್ ಪಡೆಯಬೇಕೆಂದರು.
ಈ ಹಿಂದೆ ಅಂದರೆ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಬೆಲೆ ಆಯೋಗ ಸ್ಥಾಪಿಸಿದ್ದರು. ಅದನ್ನು ಶಾಸನಾತ್ಮಕ ರೂಪ ನೀಡಿ ರೈತರಿಗೆ ಬೆಂಬಲ ಬೆಲೆ ನೀಡುವಂತೆ ಮಾಡಬೇಕು. ಬೆಲೆ ಆವರ್ತ ನಿಧಿ ಸ್ಥಾಪಿಸಿ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ನೀಡಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕಾಗಿದೆ. ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು. ಸಕಾಲಕ್ಕೆ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ನೀಡಿ ಸಹಕರಿಸಬೇಕೆಂದು ಎ.ಗೋವಿಂದರಾಜು ಒತ್ತಾಯಿಸಿದರು.
ತುಮಕೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಕೊಬ್ಬರಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಳೆದ ವರ್ಷ ಇದೇ ದಿನ ಕ್ವಿಂಟಾಲ್ ಒಂದಕ್ಕೆ 19 ಸಾವಿರ ಇದ್ದ ಬೆಲೆ ಈಗ 8500 ಕ್ಕೆ ಇಳಿದಿದೆ. ಇದರಿಂದ ಕೊಬ್ಬರಿ ಬೆಳೆಗಾರರು ಕಂಗಾಲಾಗಿದ್ದಾರೆ. ಕೂಡಲೇ ಸರಕಾರ ಕೊಬ್ಬರಿಗೆ ಕನಿಷ್ಠ 15 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು. ನಾಫೆಡ್ ಮೂಲಕ ಖರೀದಿಸುತ್ತಿರುವ ಕೊಬ್ಬರಿಯನ್ನು ಸಣ್ಣದು, ದೊಡ್ಡದು ಎಂದು ಬೇರ್ಪಡಿಸದೇ ಖರೀದಿಗೆ ಅವಕಾಶ ಕಲ್ಪಿಸಬೇಕೆಂದು ರೈತರ ಸಂಘದ ಕಾರ್ಯಾಧ್ಯಕ್ಷ ಗೋವಿಂದರಾಜು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ದೊಡ್ಡಮಾಳಯ್ಯ, ವಿವಿಧ ತಾಲೂಕುಗಳ ಅಧ್ಯಕ್ಷರಾದ ವೆಂಕಟೇಗೌಡ, ಸಿ.ಜೆ.ಲೋಕೇಶ್, ಚಿಕ್ಕಬೋರೇಗೌಡ, ತಿಮ್ಮೆಗೌಡ, ಡಿ.ಆರ್.ರಾಜಶೇಖರ್, ನಾಗರಾಜು ಬೇಡತ್ತೂರು, ಭಾಗ್ಯಮ್ಮ, ರಂಗಹನುಮಯ್ಯ, ಷಬ್ರಬೀರ್ ಪಾಷ, ನಾದೂರು ಕೆಂಚಪ್ಪ, ಪೂಜಾರಪ್ಪ, ನರಸಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
Comments are closed.