ಕುಣಿಗಲ್: ಹಾಡಹಗಲೆ ಉಪ ನೋಂದಣಾಧಿಕಾರಿ ಕಚೇರಿ ಸಮೀಪದಲ್ಲಿ ನಿಂತಿದ್ದ ಇನ್ನೋವ ಕಾರಿನ ಕಿಟಕಿ ಗಾಜು ಮುರಿದು ಕಾರಿನಲ್ಲಿದ್ದ ಬ್ಯಾಗನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ರಾಜು ಎಂಬುವರು ಆಸ್ತಿ ಕ್ರಯಕ್ಕೆ ಕುಣಿಗಲ್ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಕಚೇರಿ ಸಮೀಪದಲ್ಲಿ ತಮ್ಮ ಕಾರನ್ನು ನಿಲ್ಲಿಸಿದ್ದು, ಆಸ್ತಿ ಕ್ರಯಕ್ಕೆ ತಂದಿದ್ದ ನಗದು ಬ್ಯಾಗನ್ನು ತಮ್ಮ ಬಳಿ ಇರಿಸಿಕೊಂಡು, ಸ್ವಲ್ಪ ಮೊತ್ತ ಹಾಗೂ ಇತರೆ ದಾಖಲೆ ಇದ್ದ ಬ್ಯಾಗನ್ನು ಕಾರಿನಲ್ಲಿ ಬಿಟ್ಟು ಬೀಗ ಹಾಕಿ, ದಾಖಲೆ ಸಿದ್ಧಪಡಿಸಲು ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದರು.ಈ ವೇಳೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಹೊಡೆದು ದಾಖಲೆ, ನಗದು ಇದ್ದ ಬ್ಯಾಗನ್ನು ಅಪಹರಿಸಿದ್ದಾರೆ.
ಕಾರಿನ ಗಾಜು ಒಡೆದಿರುವುದನ್ನು ಕಂಡ ದಾರಿಹೋಕರು ತಿಳಿಸಿದ ಮೇರೆಗೆ ಕಾರಿನ ಮಾಲೀಕ ಬಂದು ನೋಡಲಾಗಿ ದಾಖಲೆ, ನಗದು ಇದ್ದ ಬ್ಯಾಗು ಕಳುವಾಗಿರುವುದು ಕಂಡು ಬಂದಿದೆ. ಹಾಡುಹಗಲೆ ನಡೆದ ಘಟನೆಯಿಂದಾಗಿ ಉಪ ನೋಂದಣಾಧಿಕಾರಿ ಕಚೇರಿ ಸುತ್ತಮುತ್ತಲೂ ಜನತೆ ಆತಂಕಕ್ಕೆ ಒಳಗಾದರು. ಘಟನೆಗೆ ಸಂಬಂಧಿಸಿದಂತೆ ಕಾರಿನ ಮಾಲೀಕ ಸುಮಾರು ಐವತ್ತು ಸಾವಿರ ನಗದು, ಇತರೆ ದಾಖಲೆ ಕಳುವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Comments are closed.