ಗುಬ್ಬಿ: ಪಟ್ಟಣದ ಕೊಬ್ಬರಿ ಖರೀದಿ ಕೇಂದ್ರದ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಾ ಹಗಲು ದರೋಡೆಯಲ್ಲಿ ತೊಡಗಿದ್ದಾರೆ ಎಂದು ರೈತರು ಪ್ರತಿಭಟನೆ ನಡೆಸಿದರು.
ಕೊಬ್ಬರಿ ಖರೀದಿಯಲ್ಲಿ ಹೆಚ್ಚಿಗೆ ತೂಕ ಮಾಡಿಕೊಳ್ಳುವ ಜೊತೆಗೆ ಗುಣಮಟ್ಟದ ನೆಪದಲ್ಲಿ ಕೊಬ್ಬರಿಯನ್ನು ತಿರಸ್ಕರಿಸುತ್ತಿದ್ದಾರೆ. ಕೊಬ್ಬರಿ ವ್ಯಾಪಾರಸ್ಥರಿಂದ ಯಾವುದೇ ಪರೀಕ್ಷೆ ಮಾಡದೆ ಕೊಬ್ಬರಿ ಖರೀದಿಸುವ ಅಧಿಕಾರಿಗಳು ರೈತರನ್ನು ಮಾತ್ರ ಸುಲಿಗೆ ಮಾಡುತ್ತಾ ಹಗಲು ದರೋಡೆಯಲ್ಲಿ ತೊಡಗಿರುವ ಅಧಿಕಾರಿಗಳನ್ನು ತಕ್ಷಣವೇ ಇಲ್ಲಿಂದ ಬಿಡುಗಡೆಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರೈತರು ಪ್ರತಿಭಟನೆಗೆ ಮುಂದಾದ ತಕ್ಷಣ ಕೊಬ್ಬರಿ ಖರೀದಿ ಕೇಂದ್ರದ ಅಧಿಕಾರಿ ನಾಪತ್ತೆಯಾದರು. ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರು ಸ್ವಲ್ಪ ಹೆಚ್ಚಿಗೆ ಹಣದ ಆಸೆಯಿಂದ ಕೇಂದ್ರಕ್ಕೆ ಬಂದು ಕೊಬ್ಬರಿ ಮಾರಲು ಮುಂದಾದರೆ ಅಧಿಕಾರಿಗಳು ಇಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗಳು ಬರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ಮಂಜುನಾಥ್ ಮತ್ತು ತೀರ್ಥ ಪ್ರಸಾದ್ ನೇತ್ರತ್ವದಲ್ಲಿ ಸುಮಾರು 15 ರಿಂದ 20 ಜನ ರೈತರು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ತಹಸಿಲ್ದಾರ್ ಬಿ.ಆರತಿ ಆಗಮಿಸಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
Comments are closed.