ಹುಳಿಯಾರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಸಂತಸಗೊಂಡು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ತುಂಬಿ ತುಳುಕುವಂತೆ ಸಂಚರಿಸುತ್ತಿದ್ದಾರೆ. ಇನ್ನೊಂದೆಡೆ ಬಸ್ ಕಲಕ್ಷನ್ ನಂಬಿ ನೂರಾರು ಕುಟುಂಬಗಳಿಗೆ ಅನ್ನ ನೀಡುತ್ತಿದ್ದ ಖಾಸಗಿ ಬಸ್ ಗಳ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.
ಕೋವಿಡ್ ನಂತರ ಕೊಂಚ ಚೇತರಿಕೆ ಕಾಣುವ ಹೊತ್ತಿನಲ್ಲಿ ಶಕ್ತಿ ಯೋಜನೆ ಖಾಸಗಿ ಬಸ್ ಮಾಲೀಕರಿಗೆ ಬರ ಸಿಡಿಲಿನಂತೆ ಎರಗಿದೆ. ಖಾಸಗಿ ಬಸ್ ಗಳನ್ನೇ ನಂಬಿದ್ದ ಡ್ರೈವರ್, ಕಂಡಕ್ಟರ್, ಏಜೆಂಟರ್, ಕ್ಲೀನರ್, ಮೆಕ್ಯಾನಿಕ್ ಗಳಿಗೆ ಮುಂದೇನು ಎನ್ನುವ ಆತಂಕ ಕಾಡುತ್ತಿದೆ. ಖಾಸಗಿ ಬಸ್ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಮುನ್ನ ಸರ್ಕಾರ ನೆರವಿಗೆ ಧಾವಿಸುವ ಕೂಗು ಕೇಳಿ ಬರುತ್ತಿದೆ.
ಸರ್ಕಾರಿ ಬಸ್ ಸೌಲಭ್ಯಗಳೇ ಇಲ್ಲದ ಸಂದರ್ಭದಲ್ಲಿ ಬಸ್ ಸೌಲಭ್ಯ ಕಲ್ಪಿಸಿದ ಹೆಗ್ಗಳಿಗೆ ಖಾಸಗಿ ಬಸ್ ಮಾಲೀಕರದ್ದಾಗಿದೆ. ಇಲ್ಲಿಗೆ ಬರೋಬ್ಬರಿ ಎಪ್ಪತ್ತೈದು ವರ್ಷಗಳ ಹಿಂದೆಯೇ ಹುಳಿಯಾರಿನಿಂದ ತುಮಕೂರಿಗೆ ರಿಪಬ್ಲಿಕ್ ಬಸ್, ಗೋಪಾಲಕೃಷ್ಣ ಬಸ್, ಹುಳಿಯಾರು ಮಾರ್ಗವಾಗಿ ಚಿತ್ರದುರ್ಗದಿಂದ ಮೈಸೂರಿಗೆ ಸಿಟಿಸಿ ಬಸ್, ಅರಸೀಕೆರೆಯಿಂದ ಶಿರಾಗೆ ಹನುಮಾನ್ ಬಸ್, ತಿಪಟೂರಿಗೆ ಎಸ್ಆರ್ಎಸ್, ಬಸವೇಶ್ವರ, ಪ್ರಕಾಶ ಬಸ್, ತುಮಕೂರಿಗೆ ಶಹನಾಜ್, ಜಗಜ್ಯೋತಿ ಬಸವೇಶ್ವರ, ರಂಗನಾಥ ಬಸ್, ಚಿತ್ರದುರ್ಗಕ್ಕೆ ಕೊಟ್ರೇಶ್ವರ, ತಿಪ್ಪೇಸ್ವಾಮಿ ಬಸ್ ಗಳನ್ನು ಓಡಿಸುವ ಮೂಲಕ ಸಾರ್ವಜನಿಕರಿಗೆ ಸಾರಿಗೆ ಸೌಕರ್ಯ ಕಲ್ಪಿಸಲಾಗಿತ್ತು.
ನಂತರದ ದಿನಗಳಲ್ಲಿ ತಿಮ್ಮನಹಳ್ಳಿ ಗ್ರಾಮದ ಜಯಚಂದ್ರ ಅವರ ಸಿದ್ದೇಶ್ವರ ಬಸ್, ಸೀತರಾಮಣ್ಣ ಅವರ ಪ್ರಕಾಶ ಬಸ್, ಜಯರಾಮಣ್ಣ ಅವರ ಪ್ರಕಾಶ್ ಬಸ್, ಚಿದಾನಂದ್ ಅವರ ಪ್ರಕಾಶ್ ಬಸ್ ಬೆಂಗಳೂರಿಗೆ ಓಡಾಡಲು ಆರಂಭಿಸಿದವು. ಈ ಬಸ್ಗಳ ಬೆನ್ನಿಗೆ ಹೊಸದುರ್ಗ ವಿಜಯಕುಮಾರ್ ಅವರ ವಿಜಯ, ಪರಮೇಶ್ವರಪ್ಪ ಅವರ ಕಲ್ಲೇಶ್ವರ, ಮಾಯಾಚಾರ್ ಅವರ ತ್ಯಾಗರಾಜ, ಆಬೀದ್ ಸಾಬ್ ಅವರ ಮಾರ್ಚೆಂಟ್, ನಂಜುಂಡಶೆಟ್ಟರ ಇಂಡಿಯನ್ ಎಕ್ಸ್ ಪ್ರೆಸ್, ಹುಳಿಯಾರಿನ ಗೋವಿಂದರಾಜು, ಪ್ರದೀಪ್, ಪ್ರವೀಣ್ ಅವರ ಎಸ್ಎಲ್ಆರ್ ಬಸ್, ಆಲಂ, ಬಾಬು, ಅನ್ವರ್ ಸಾಬ್, ಅವರ ಎಚ್.ಬಿ ಟ್ರಾವೆಲ್ಸ್, ಜಬೀಉಲ್ಲಾ ಅವರ ಎಸ್ಎಂಎಸ್, ದೇವಾನಂದ್ ಅವರ ವಿಜಯಾ ಬಸ್ ಗಳು ಬೆಂಗಳೂರು ಮತ್ತು ಹೊಸದುರ್ಗ ಮಾರ್ಗದಲ್ಲಿ ಓಡಾಡುತ್ತಿದ್ದವು. ಇದೀಗ ಈ ಎಲ್ಲಾ ಬಸ್ ಗಳು ಪ್ರಯಾಣಿಕರಿಲ್ಲದೆ ಸೊರಗುವಂತಾಗಿವೆ.
ಇವುಗಳ ಜೊತೆ ಜೊತೆಗೆ ಹಳ್ಳಿ ಮಾರ್ಗವಾಗಿ ಹೊಸದುರ್ಗದ ಪರಮೇಶ್ವರಪ್ಪ ಅವರ ಕಲ್ಲೇಶ್ವರ ಬಸ್, ತಿಮ್ಮನಹಳ್ಳಿ ರಂಗಪ್ಪ ಅವರ ಸಿದ್ದೇಶ್ವರ್ ಬಸ್, ಕೆಂಕೆರೆ ಚನ್ನಪ್ಪ ಅವರ ಚನ್ನಬಸವೇಶ್ವರ ಬಸ್, ದಸೂಡಿ ಕೊಟ್ಟಿಗೆ ರಂಗಪ್ಪ ಅವರ ರಂಗನಾಥ ಬಸ್, ಶಿರಾ ಮದ್ದಣ್ಣ ಅವರ ಹನುಮಾನ್ ಬಸ್, ಶಿರಾ ಶ್ಯಾಮಣ್ಣ ಅವರ ಭಗವಾನ್ ಬಸ್, ನೋಣವಿನಕೆರೆ ರಾಜಣ್ಣ ಅವರ ಮಂಜುನಾಥ ಬಸ್, ತಿಪಟೂರ್ ಅಬೀಬುಲ್ಲಾ ಶರೀಫ್ ಅವರ ಎಸ್ಎಂಎಸ್ ಬಸ್, ಆಜೀ ಮಹಮದ್ ನೂರುಲ್ಲಾ ಅವರ ರಿಲೆಬಲ್ ಬಸ್, ನರಸಿಂಹಣ್ಣ, ಕೆಂಚೇಗೌಡರ ಪ್ರಕಾಶ ಬಸ್, ಪರದೇಗೌಡರ ಎಸ್ಎಲ್ಎನ್ಎಸ್ ಬಸ್ಗಳು ಸಂಚರಿಸುತ್ತಿದ್ದವು.
ಸರ್ಕಾರದ ನೆರವು ಬಯಸದೆ ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೌಲಭ್ಯ ನೀಡಿದ ಶ್ರೇಯಸ್ಸು ಈ ಖಾಸಗಿ ಬಸ್ ಗಳಿಗೆ ಸಲ್ಲುತ್ತದೆ. ಅಂಚೆ ಪತ್ರಗಳನ್ನು ತಲುಪಿಸುವ, ಹಾಲು, ಪೇಪರ್, ಹೂವು, ಔಷಧಿ ತಂದುಕೊಡುವ ಮೂಲಕ ನಾಗರಿಕ ಸೇವೆ ಮಾಡಿದ ಕೀರ್ತಿ ಇವರದಾಗಿದೆ. ಸರ್ಕಾರವೂ ಕೈಕಟ್ಟಿ ಕುಳಿತಿದ್ದ ಸಂದರ್ಭದಲ್ಲಿ ಸಾರಿಗೆ ಸೌಕರ್ಯ ನೀಡಿದ್ದ ಖಾಸಗಿ ಬಸ್ ಉದ್ಯಮ ಅನೇಕ ಏಳುಬೀಳುಗಳ ನಡುವೆಯೂ ತೆವಳುತ್ತಲೇ ಸಾಗುತ್ತಿತ್ತು. ಆದರೆ ಮಹಾಮಾರಿ ಕೊರೊನಾ ಖಾಸಗಿ ಬಸ್ ವಲಯವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಕೊರೊನಾದಿಂದಾಗಿ ಬೆಂಗಳೂರಿಗೆ ನಿತ್ಯ ಓಡಾಡುತ್ತಿದ್ದ ಐವತ್ತಕ್ಕೂ ಹೆಚ್ಚು ಬಸ್ ಗಳು ಏಕಾಏಕಿ ನಿಂತವು. ಹಳ್ಳಿ ಮಾರ್ಗವಾಗಿ ಓಡಾಡುತ್ತಿದ್ದ ಬಸ್ ಗಳಿಗೆ ಡಿಸೆಲ್ ಬೆಲೆ ಏರಿಕೆ ಪೆಟ್ಟು ನೀಡಿತು. ಈಗ ಸರ್ಕಾರದ ಉಚಿತ ಬಸ್ ಪಾಸ್ ಖಾಸಗಿ ಬಸ್ ಉದ್ಯಮವನ್ನೇ ಮಕಾಡೆ ಮಲಗಿಸಿ ಬಿಟ್ಟಿದೆ. ಸದ್ಯಕ್ಕಂತೂ ಈ ಉಚಿತ ಹೊಡೆತದಿಂದ ಪಾರಾಗುವ ಯಾವ ಲಕ್ಷಣಗಳೂ ಕಾಣಸಿಗದಿರುವುದು ಖಾಸಗಿ ಬಸ್ ವಲಯಲ್ಲಿ ಚಿಂತೆಗೀಡು ಮಾಡಿದೆ ಎನ್ನುತ್ತಾರೆ ಹಿರಿಯ ಬಸ್ ಏಜೆಂಟ್ ಲೋಕೇಶಣ್ಣ.
ಯಾವ ಮಾರ್ಗದಲ್ಲಿ ಖಾಸಗಿ ಬಸ್ಗಳ ಸಂಚಾರ ಇಲ್ಲವೋ ಅಲ್ಲಿ ಟಿಕೆಟ್ ದರ ಇಳಿಸದೆ ಖಾಸಗಿ ಬಸ್ ಗಳು ಓಡಾಡುವ ಮಾರ್ಗದಲ್ಲಿ ಮಾತ್ರ ಸರ್ಕಾರಿ ಬಸ್ಗಳ ದರ ಇಳಿಸಲಾಗಿದೆ. ಖಾಸಗಿ ಬಸ್ ಸಮಯದ ಐದೈದು ನಿಮಿಷ ಹಿಂದೆ ಮುಂದೆ ಸರ್ಕಾರಿ ಬಸ್ ಬಿಟ್ಟಿದ್ದಾರೆ. ಈ ಅನಾರೋಗ್ಯಕರ ಪೈಪೋಟಿ ಖಾಸಗಿ ಬಸ್ ವಲಯದವರ ನಿದ್ದೆ ಕೆಡಿಸುತ್ತಿದೆ. ಇದರ ನಡುವೆ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ನಷ್ಟದ ಭೀತಿ ಎದುರಾಗಿದೆ. ಉಚಿತ ಪಯಾಣದ ಐದಾರು ದಿನಗಳ ಬಳಿಕವೇ ಹೀಗಾದರೆ ಮುಂದೆ ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಸ್ಥಳೀಯವಾಗಿ ಎಪ್ಪತ್ತೈದು ವರ್ಷಗಳಿಂದ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದ ಖಾಸಗಿ ಬಸ್ ಗಳ ಸಂಚಾರ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತವೆ. ಸರ್ಕಾರ ಈ ಬಗ್ಗೆ ನಿಗಾ ವಹಿಸಬೇಕು ಎನ್ನುತ್ತಾರೆ ಹಿರಿಯ ಬಸ್ ಏಜೆಂಟ್ ಹು.ಕೃ.ವಿಶ್ವನಾಥ್.
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ದಿನಗಳಿಂದ ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಸಂಚರಿಸುವ ಮಾರ್ಗದಲ್ಲಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಪರಿಣಾಮ ಬಹುತೇಕ ಖಾಸಗಿ ಬಸ್ಗಳಲ್ಲಿ ಜನರೇ ಇಲ್ಲವಾಗಿದ್ದಾರೆ, ಬೆರಳೆಣಿಕೆಯ ಪುರುಷರು ಮಾತ್ರ ಕಂಡು ಬರುತ್ತಿದ್ದು, ಕೆಎಸ್ ಆರ್ ಟಿಸಿ ಬಸ್ ಗಳು ಸಂಚರಿಸದ ಗ್ರಾಮೀಣ ಮಾರ್ಗಗಳ ಖಾಸಗಿ ಬಸ್ ಗಳಲ್ಲಿ ಮಾತ್ರ ಮಹಿಳೆಯರು ಪ್ರಯಾಣಿಸಿದ್ದು ಕಂಡು ಬಂತು. ಶಿರಾ, ತಿಪಟೂರು ಮಾರ್ಗದಲ್ಲಿನ ಖಾಸಗಿ ಬಸ್ ಗಳಲ್ಲಿ ಎಂದಿನಂತೆ ಕಾಣುತ್ತಿದ್ದ ದಟ್ಟಣೆಯೂ ಇರಲಿಲ್ಲ. ಪಂಚನಹಳ್ಳಿ, ಹಿರಿಯೂರು, ದಸೂಡಿ ಮಾರ್ಗದ್ದೂ ಇದೇ ಸ್ಥಿತಿ. ಖಾಸಗಿ ಬಸ್ ನಿಲ್ದಾಣದಲ್ಲಿ ಬಹುತೇಕ ಬಸ್ಗಳ ಏಜೆಂಟರು, ನಿರ್ವಾಹಕರು, ಚಾಲಕರು ಪ್ರಯಾಣಿಕರಿಲ್ಲದೇ ಬೇಸರಗೊಂಡಿದ್ದು ಕಾಣಸಿಕ್ಕಿತು.
ಒಂದು ಬಸ್ ನಂಬಿ 15 ರಿಂದ 20 ಜನರ ಜೀವನ ನಿರ್ವಹಣೆ ನಡೆಯುತ್ತದೆ. ಪ್ರಯಾಣಿಕರೇ ಇಲ್ಲದಿದ್ದರೆ ಬಸ್ ಓಡಿಸುವುದಾದರೂ ಹೇಗೆ ಎಂದು ಪ್ರಶ್ನೆ ಎದುರಾಗುತ್ತದೆ. ಒಂದು ಬಸ್ ಗೆ ವರ್ಷಕ್ಕೆ 2 ಲಕ್ಷ ರೂ. ರಸ್ತೆ ಶುಲ್ಕ ಕಟ್ಟುತ್ತಾರೆ. ಪೆಟ್ರೋಲ್ ದರ, ಚಾಲಕರು, ನಿರ್ವಾಹಕರು ಸೇರಿ ಹಲವರ ವೇತನ, ಬಸ್ ನಿರ್ವಹಣೆ ಎಲ್ಲ ಸೇರಿ ಲಕ್ಷಾಂತರ ರೂಪಾಯಿ ಖರ್ಚು ಬರುತ್ತದೆ. ಒಟ್ಟಾರೆ ಸಂಕಷ್ಟದಲ್ಲಿ ಬದುಕು ದೂಡುತ್ತಿರುವ ಖಾಸಗಿ ಬಸ್ ಗಳಲ್ಲಿ ಶೇ.50 ರಷ್ಟು ಸೀಟು ಕಡಿಮೆಯಾದರೆ ಬರುವ ಹಣದಲ್ಲಿ ಬಸ್ ನಿರ್ವಹಣೆ ಮಾಡಿ ಜೀವನ ನಿರ್ವಹಣೆ ಹಣ ಉಳಿಯೋದಿಲ್ಲ. ಹಾಗಾಗಿ ಸರ್ಕಾರ ಉಚಿತ ಬಸ್ ಪಾಸ್ ನಿಂದಾಗಿ ಖಾಸಗಿ ಬಸ್ ವಲಯಕ್ಕೆ ಆಗಿರುವ ತೊಂದರೆಯನ್ನು ಮನಗಂಡು ಪರಿಹಾರದ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ. ಇಲ್ಲವಾದರೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ ಎನ್ನುವಂತ್ತಾಗುತ್ತದೆ. ಅಲ್ಲದೆ ರಾಜ್ಯಾದ್ಯಂತ ಖಾಸಗಿ ಬಸ್ ನಂಬಿರುವ ಲಕ್ಷಾಂತರ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಮೂರು ತಿಂಗಳಿಗೆ ಒಮ್ಮೆ ಪ್ರತಿ ಬಸ್ ಗೆ 50 ಸಾವಿರ ರೂ. ತೆರಿಗೆ ಕಟ್ಟಬೇಕು. ವರ್ಷಕ್ಕೆ 70 ಸಾವಿರದಿಂದ 1 ಲಕ್ಷ ರೂ. ವಿಮೆ, ಐದು ವರ್ಷಕ್ಕೆ ಒಮ್ಮೆ ಪರವಾನಗಿ ನವೀಕರಣ ಮಾಡಿಸಬೇಕು. ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಟಯರ್ ಬದಲಿಸಬೇಕು. ಒಂದೊಂದು ಟಯರ್ ಬೆಲೆ 22 ಸಾವಿರ ಇದೆ. ಚಾಲಕ, ನಿರ್ವಾಹಕ, ಕ್ಲೀನರ್, ನಿಲ್ದಾಣದ ಏಜೆಂಟರಿಗೆ ಕಮಿಷನ್, ವೇತನ ಪಾವತಿಸಬೇಕು. ಇದೆಲ್ಲ ಕಳೆದರೆ ಹಣ ಉಳಿಯುವುದೇ ಕಷ್ಟ. ಶಕ್ತಿ ಯೋಜನೆಯಿಂದ ಅನೇಕ ಕುಟುಂಬಗಳ ಬದುಕು ಬೀದಿಗೆ ಬೀಳಲಿದೆ. ಉಚಿತ ಕೊಡುಗೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸುವ ಮೂಲಕ ಸರ್ಕಾರವು ಖಾಸಗಿ ಬಸ್ ಗಳ ನೆರವಿಗೆ ಬರಬೇಕು ಎಂದು ಖಾಸಗಿ ಬಸ್ ಏಜೆಂಟ್ ಮಹಾಲಿಂಗಯ್ಯ ಒತ್ತಾಯಿಸಿದ್ದಾರೆ. ಆದರೆ ಈ ಕೂಗು ಸರ್ಕಾರಕ್ಕೆ ಕೇಳಿಸುತ್ತಾ ಎಂಬುದೇ ದೊಡ್ಡ ಪ್ರಶ್ನೆ.
Comments are closed.