ಕೊರಟಗೆರೆ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಇತ್ತೀಚೆಗೆ ಶಕ್ತಿ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿತು. ಆದರೆ ವಿದ್ಯಾರ್ಥಿಗಳು ಪ್ರಯಾಣಿಸಲು ಬಸ್ ಗಳಲ್ಲಿ ಜಾಗವಿಲ್ಲದ ಕಾರಣ ತಮ್ಮ ಊರುಗಳಿಗೆ ತಲುಪಲು ಗಂಟೆಗಟ್ಟಲೆ ಬಸ್ ಗಾಗಿ ಎದುರು ನೋಡುವ ಪರಿಸ್ಥಿತಿ ಕೊರಟಗೆರೆಯಲ್ಲಿ ನಿರ್ಮಾಣವಾಗಿದೆ.
ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ತುಮಕೂರು- ಕೊರಟಗೆರೆ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಆದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವ ಕಾರಣ ಬರುವಂತಹ ಬಸ್ ಗಳು ತುಂಬಿದ್ದು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ಬಸ್ ನಿರ್ವಾಹಕರು ಮುಂದೆ ಹೋಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದರು.
ವಿದ್ಯಾರ್ಥಿಗಳ ಬಳಿ ಬಸ್ ಪಾಸ್ ಇದ್ದರೂ ಸಹ ಸಮಯಕ್ಕೆ ಸರಿಯಾಗಿ ಬಸ್ ಬರದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಮತ್ತು ಹಿಂತಿರುಗಲು ಹರಸಾಹಸ ಪಡುವಂತಾಗಿದೆ. ಈ ವಿಚಾರವಾಗಿ ಸಾಕಷ್ಟು ಬಾರಿ ಕೊರಟಗೆರೆ ಬಸ್ ನಿಲ್ದಾಣದ ನಿರ್ವಾಹಕರಿಗೆ ತಿಳಿಸಿದರು ಸಹ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದರು.
ಬಸ್ ಗಾಗಿ ಗಂಟೆಗಟ್ಟಲೆ ಕಾದು ಕುಳಿತ ವಿದ್ಯಾರ್ಥಿಗಳು
ತುಮಕೂರು- ಬೆಂಗಳೂರು ಕಡೆಯಿಂದ ಬರುವಂತಹ ಸರ್ಕಾರಿ ಬಸ್ ಗಳಲ್ಲಿ ಅತಿ ಹೆಚ್ಚಾಗಿ ಮಹಿಳೆಯರು ಪ್ರಯಾಣಿಸುತ್ತಿರುವ ಹಿನ್ನೆಲೆ ಕೊರಟಗೆರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಾಲೂಕಿನ ಗ್ರಾಮೀಣ ಭಾಗದ ಊರುಗಳಿಗೆ ತಲುಪಲು ಗಂಟೆಗಟ್ಟಲೆ ಕಾಯುತ್ತಿರುವ ಪರಿಸ್ಥಿತಿ ಎದುರಾಗಿದ್ದು ಸಾರಿಗೆ ಇಲಾಖೆಯು ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹ ಮಾಡಿದರು.
ವಿದ್ಯಾರ್ಥಿಗಳು ಜೋತು ಬಿದ್ದು ಬಸ್ ನಲ್ಲಿ ಪ್ರಯಾಣ
ಗೌರಿಬಿದನೂರು ಮಾರ್ಗದ ತಾಲೂಕಿನ ಬೈರೇನಹಳ್ಳಿ, ಅರಸಾಪುರ, ಅಕ್ಕಿರಾಂಪುರ, ಸೋಂಪುರ, ಹೊಳವನಹಳ್ಳಿ, ಹೂಲಿಕುಂಟೆ ಇನ್ನೂ ಅನೇಕ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ಬರುವಂತಹ ಬಸ್ ಗಳಲ್ಲಿ ಜೋತು ಬಿದ್ದು ಪ್ರಯಾಣಿಸುವಂತಹ ಅನಿವಾರ್ಯತೆ ಎದುರಾಗಿದ್ದು ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಸರ್ಕಾರ ಮತ್ತು ಸಾರಿಗೆ ಇಲಾಖೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
BOX:
ಮಧುಗಿರಿ, ಪಾವಗಡ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಬಸ್ ನ ವ್ಯವಸ್ಥೆ ಇದೆ. ಆದರೆ ತುಂಬಾಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಸ್ ಗಳು ನಿಲ್ಲಿಸೋಲ್ಲ. ನಾವುಗಳು ಬಸ್ ಸಿಗದೆ ಇದ್ದಾಗ ಆಟೋ ಹಿಡಿದು ಕೊರಟಗೆರೆಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದ ಬಗ್ಗೆ ಸಾಕಷ್ಟು ಬಾರಿ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣದ ನಿರ್ವಾಹಕರಿಗೆ ತಿಳಿಸಿದರೂ ಯಾವುದೇ ಅನುಕೂಲವಾಗಿಲ್ಲ.
-ರೇಣುಕಾ, ವಿದ್ಯಾರ್ಥಿನಿ.
Comments are closed.