ಗುಬ್ಬಿ: ರೈತರ ಕಷ್ಟಗಳನ್ನು ಅಧಿಕಾರಿಗಳಾದವರು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ರೈತ ಸಂಘ ದ ಅಧ್ಯಕ್ಷ ಗೋವಿಂದರಾಜು ಹೇಳಿದರು.
ಪಟ್ಟಣದ ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿ ನೂರಾರು ರೈತರು ಬೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಮಾತನಾಡಿ, ಕೊಳವೆ ಬಾವಿಗಳಲ್ಲಿ ನೀರಿದ್ದರೂ ಸಹ ಅದನ್ನು ಹೊರ ತೆಗೆದು ತೋಟ ಹೊಲಗಳಿಗೆ ನೀರು ಹಾಯಿಸಲು ಸಾಧ್ಯವಾಗದಂತಹ ಸ್ಥಿತಿಯನ್ನು ವಿದ್ಯುತ್ ಇಲಾಖೆ ಸೃಷ್ಟಿಸಿದೆ. ಸರಿಯಾದ ರೀತಿಯಲ್ಲಿ ರೈತರಿಗೆ ವಿದ್ಯುತ್ ನೀಡದೆ ಅವರು ಬೆಳೆದಿರುವ ಬೆಳೆಯನ್ನು ನಾಶ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಕೊಡುವಂತಹ ವಿದ್ಯುತ್ ನ್ನ ಸರಿಯಾದ ರೀತಿಯಲ್ಲಿ ರೈತರಿಗೆ ನೀಡದೆ ಹೋದರೆ ರೈತರು ಹೇಗೆ ಕೃಷಿ ಮಾಡಬೇಕು. ಹಲವು ಕಡೆ ನೂರಾರು ಸಮಸ್ಯೆಗಳಿದ್ದರೂ ಸಹ ಯಾವುದೇ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡಿಲ್ಲ. ರೈತರೆಂದರೆ ಅಸಡ್ಡೆಯಾಗಿ ಕಾಣುವ ಅಧಿಕಾರಿಗಳ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಯಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ರೈತ ಮುಖಂಡರನ್ನು ಒಟ್ಟುಗೂಡಿಸಿ ಅಧಿಕಾರಿಗಳು ಸಭೆ ಕರೆದು ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲದೆ ಹೋದರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಎರಡು ವರ್ಷದಿಂದ ರೈತರ ಸಮಸ್ಯೆ ಬಗ್ಗೆ ಬೆಸ್ಕಾಂ ಇಲಾಖೆಗೆ ಹಲವು ವಿಚಾರ ದೂರು ನೀಡಿದರು ಯಾವುದೇ ಪ್ರಯಾಜನವಾಗಿಲ್ಲ. ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪದನೆ ಮಾಡುತ್ತಿಲ್ಲ. ನಾವು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಕಷ್ಟಪಟ್ಟು ಉಳಿಸಿ ಕೊಂಡಿದ್ದೇವೆ. ಈ ಬಾರಿ ಕೊಳವೆ ಬಾವಿಯಲ್ಲಿ ನೀರಿದ್ದರು ಸಹ ವಿದ್ಯುತ್ ನೀಡುತ್ತಿಲ್ಲ. ಅಧಿಕಾರಿಗಳು ಈ ಬೇಜವಾಬ್ದಾರಿತನ ಬಿಟ್ಟು ರೈತರ ಹಿತ ಕಾಪಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬೆಸ್ಕಾಂ ಇಇ ಪ್ರಶಾಂತ್ ಕೂಡ್ಲಿಗಿ ಆಗಮಿಸಿ ರೈತರ ಸಮಸ್ಯೆ ಬಗೆಹರಿಸಲು ನಾವು ಸದಾ ಸಿದ್ಧರಿದ್ದೇವೆ. ಒಂದಷ್ಟು ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗುತ್ತಿದ್ದು ಮುಂದಿನ ದಿನದಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಮತ್ತು ಜಿ.ಹೊಸ ಹಳ್ಳಿಯಲ್ಲಿ ವಿದ್ಯುತ್ ಉಪಸ್ಥಾವರ ಪ್ರಗತಿಯ ಹಂತದಲ್ಲಿದ್ದು, ಅಕ್ಟೋಬರ್ ಬೆಳಗ್ಗೆ ಪರಿಪೂರ್ಣಗೊಳ್ಳುತ್ತದೆ. ನಂತರ ಇಲ್ಲಿನ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ. ಗುಬ್ಬಿ ಪಟ್ಟಣದಲ್ಲಿ ಯುಜಿ ಕೇಬಲ್ ಅಳವಡಿಸುತ್ತಿದ್ದು, ಇದರಿಂದ ಪಟ್ಟಣದ ಸಮಸ್ಯೆಯೂ ಸಹ ಬಗೆಹರಿಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಚನ್ನಬಸವಣ್ಣ, ದಲಿತ ಮುಖಂಡ ನಾಗರಾಜು, ರೈತ ಮುಖಂಡ ಮಹದೇವ್, ಗಂಗಾರೇವಣ್ಣ, ಬಸವರಾಜ್, ಕುಮಾರ್ ಸ್ವಾಮಿ, ಸತ್ತಿಗಪ್ಪ, ಮೋಹನ್ ಸೇರಿದಂತೆ ನೂರಾರು ರೈತರು ಹಾಜರಿದ್ದರು.
Comments are closed.