ಕುಣಿಗಲ್: ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯೊಂದಿಗೆ ಶಿಕ್ಷಕನೋರ್ವ ಪಾನಮತ್ತನಾಗಿ ಅಸಭ್ಯವಾಗಿ ವರ್ತಿಸುತ್ತಿದ್ದಲ್ಲದೆ, ಮೆಸೇಜ್ ಮಾಡಿ ಮಾನಸಿಕ ಕಿರುಕುಳ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರ ಮೇರೆಗೆ ಪ್ರಕರಣವನ್ನು ಬಿಇಒ ರಾಜಿಸಂಧಾನ ಮಾಡಿ ಬಗೆಹರಿಸಲೆತ್ನಿಸಿದ್ದನ್ನು ಖಂಡಿಸಿ ಶಿಕ್ಷಕಿ ನ್ಯಾಯಕ್ಕಾಗಿ ಡಿಡಿಪಿಐ ಮೊರೆ ಹೋಗಿರುವ ಘಟನೆ ಶಿಕ್ಷಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಾಲೂಕಿನ ಅಮೃತೂರು ಹೋಬಳಿಯ (ಹೊಳಲುಗುಂದ) ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ನಯನ (ಹೆಸರು ಬದಲಿಸಿದೆ) ಅವರಿಗೆ ಸಹ ಶಿಕ್ಷಕನೋರ್ವ ವಿನಾಕಾರಣ ಆಕೆಯ ಕೊಠಡಿಗೆ ಆಗಮಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದುದಲ್ಲದೆ, ರಾತ್ರಿವೇಳೆ ಪಾನಮತ್ತರಾಗಿ ಮೆಸೇಜ್ ಮಾಡುತ್ತಿದ್ದರಿಂದ ರೋಸಿಹೋದ ಶಿಕ್ಷಕಿ, ಶಿಕ್ಷಕನ ಕಿರುಕುಳದಿಂದ ಪಾರು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಾದ ಮೇಲಾಧಿಕಾರಿಗಳು ಸಂಧಾನ ಕಾರ್ಯಕ್ಕೆ ಮುಂದಾಗಿದ್ದರಿಂದ ಬೇಸತ್ತ ಶಿಕ್ಷಕಿ ತಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವಂತೆ ಡಿಡಿಪಿಐ ತುಮಕೂರು ಇವರಿಗೆ ವಿವರವಾದ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕರಣ ಡಿಡಿಪಿಐ ಅವರ ಬಳಿ ಇದೆ ಎಂದಿದ್ದಾರೆ. ಶಿಕ್ಷಕಿಯೊಬ್ಬರಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಕಿರುಕುಳ ಆಗಿರುವ ಘಟನೆಗೆ ಸಂಬಂಧಿಸಿದಂತೆ ಇಲಾಖೆಯ ಸ್ಥಳೀಯ ಅಧಿಕಾರಿಗಳು ದೂರು ಬಂದರೂ ಅಗತ್ಯ ಕ್ರಮ ಕೈಗೊಳ್ಳದೆ ಇರುವುದು ಶಿಕ್ಷಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ.
Comments are closed.