ಆಧಾರ್ ಕಾರ್ಡ್ ತಿದ್ದುಪಡಿಗೆ ಮುಗಿಬಿದ್ದ ಜನ

205

Get real time updates directly on you device, subscribe now.


ಕುಣಿಗಲ್: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆಯಲು ಆಧಾರ್ ಕಾರ್ಡ್ ತಿದ್ದುಪಡಿಗೆ ಕಾರ್ಡ್ ಹೊಂದಿರುವವರು ಅಧಾರ್ ಕೇಂದ್ರಕ್ಕೆ ಲಗ್ಗೆ ಇಡುತ್ತಿರುವ ಕಾರಣ ಅಧಾರ್ ಕಾರ್ಡ್ ಸೇವಾ ಕೇಂದ್ರಗಳು ಜನ ಜಂಗುಳಿಯಿಂದ ತುಂಬಿವೆ.

ಪಟ್ಟಣದಲ್ಲಿ ತಾಲೂಕು ಕಚೇರಿಯಲ್ಲಿ, ದೂರವಾಣಿ ವಿನಿಮಯ ಕೇಂದ್ರ, ಎಸ್ ಬಿಐ ಯಲ್ಲಿ ಆಧಾರ್ ಸೇವಾ ಕೇಂದ್ರಗಳಿದ್ದು ಸರ್ಕಾರದ ಗ್ಯಾರಂಟಿ ಯೋಜನೆಯ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿ ಪರಿಗಣಿಸುವ ಕಾರಣ ಕಾರ್ಡ್ದಾರರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಡ್ ತಿದ್ದುಪಡಿಗೆ ಬೆಳಗಿನಿಂದಲೆ ಕೇಂದ್ರದ ಮುಂದೆ ಕಾಯುವ ಸ್ಥಿತಿ ಉಂಟಾಗಿದೆ. ಸೇವಾ ಕೇಂದ್ರದಲ್ಲಿ ಟೋಕನ್ ನೀಡಿ ಕಾರ್ಡ್ದಾರರಿಗೆ ಸೇವೆ ನೀಡಲಾಗುತ್ತಿದೆ. ಆದರೂ ದಿನ ಒಂದಕ್ಕೆ ನಲವತ್ತು ಮಂದಿಗೆ ಸೇವೆ ನೀಡಲು ಸಾಧ್ಯವಾಗುತ್ತಿದೆ.

ಈ ಮಧ್ಯೆ ಕೆಲವೊಮ್ಮೆ ವಿದ್ಯುತ್ ಕಣ್ಣುಮುಚ್ಚಾಲೆ ಇದರ ಜೊತೆಯಲ್ಲಿ ಸರ್ವರ್ ಸಮಸ್ಯೆ ಕೂಡ ಕಾರ್ಡ್ದಾರರನ್ನು ಹೈರಾಣು ಮಾಡುತ್ತಿವೆ. ಈ ಮಧ್ಯೆ ತಾಲೂಕಿನವರಲ್ಲದೆ ಬೇರೆ ತಾಲೂಕಿನವರು ಸಹ ಆಧಾರ್ ತಿದ್ದುಪಡಿಗೆ ಪಟ್ಟಣದ ಕೇಂದ್ರಕ್ಕೆ ಬರುವ ಕಾರಣ ಪಟ್ಟಣದ ಕೇಂದ್ರದವರು ಪರದಾಡುವ ಸ್ಥಿತಿ ಉಂಟಾಗಿದೆ. ಆಧಾರ್ ಸೇವಾ ಕೇಂದ್ರಗಳನ್ನು ಹೋಬಳಿಯ ನಾಡ ಕಚೇರಿಯಲ್ಲೂ ನಡೆಸಲಾಗುತ್ತಿದ್ದು ತಾಂತ್ರಿಕ ಕಾರಣದಿಂದ ಬಹಳಷ್ಟು ವಿಳಂಬವಾಗುತ್ತಿದೆ ಎಂದು ಕಾರ್ಡ್ದಾರರು ಆರೋಪಿಸಿದ್ದಾರೆ. ಈ ಮಧ್ಯೆ ಗ್ಯಾರಂಟಿ ಯೋಜನೆಗೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಫಲಾನುಭವಿಗಳಿಗೆ ಪೂರಕ ದಾಖಲೆ ಹೊಂದಿಸಿಕೊಳ್ಳಲು ಮತ್ತಷ್ಟು ಕಾಲವಕಾಶ ಸರ್ಕಾರ ಕಲ್ಪಿಸಬೇಕೆಂದು ಆಧಾರ್ ಕಾರ್ಡ್ ತಿದ್ದುಪಡಿಗೆ ಆಗಮಿಸಿದ ಮಹಿಳೆ ಲಕ್ಷ್ಮಮ್ಮ ಒತ್ತಾಯಿಸಿದ್ದಾರೆ.

ಬಹುತೇಕ ಮಹಿಳೆಯರು ಆಧಾರ್ ಕಾರ್ಡ್ಗಳಲ್ಲಿ ತಮ್ಮ ಮೊಬೈಲ್ ನಂಬರ್ ದಾಖಲು ಮಾಡಲು ಬಂದರೆ ಮತ್ತೆ ಕೆಲವರು ವಿಳಾಸ ಬದಲಾವಣೆಗೆ ಬರುತ್ತಿದ್ದಾರೆ. ವಿಳಾಸ ಬದಲಾವಣೆಗೆ ಬರುವವರು ಸಮರ್ಪಕ ಪೂರಕ ದಾಖಲೆಗಳೊಂದಿಗೆ ಬರದೆ ಇರುವುದು ಸಹ ಸಿಬ್ಬಂದಿಯ ತಲೆನೋವಿಗೆ ಕಾರಣವಾಗಿದೆ. ಪಟ್ಟಣದ ಲೋಕೇಶ್ ಎಂಬುವರು ಸರ್ಕಾರ ಯೋಜನೆಗೆ ಫಲಾನುಭವಿಗಳ ಪರಿಗಣಿಸಲು ಸಾಧ್ಯವಾದಷ್ಟು ಕಡಿಮೆ ದಾಖಲೆ ಕೇಳಬೇಕು. ಆದರೆ ಇದೀಗ ಪ್ರತಿಯೊಂದು ದಾಖಲೆ ಹೊಂದಿಸಿಕೊಂಡು ಅರ್ಜಿ ಸಲ್ಲಿಸಲು ಫಲಾನುಭವಿಗಳು ಹಲವು ಕಚೇರಿಗೆ ಎಡತಾಕುವಂತಾಗಿದ್ದು ಅರ್ಜಿ ಸಲ್ಲಿಕೆಯನ್ನು ಮತ್ತಷ್ಟು ಸರಳೀಕರಣಗೊಳಿಸುವಂತೆ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!