ಕೇಂದ್ರ ಸರ್ಕಾರಿಂದ ದ್ವೇಷದ ರಾಜಕಾರಣ

ಅಕ್ಕಿ ನೀಡದ್ದಕ್ಕೆ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

150

Get real time updates directly on you device, subscribe now.


ತುಮಕೂರು: ಬಡವರಿಗೆ ಅನ್ನ ನೀಡುವ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದ್ವೇಷದ ರಾಜಕಾರಣ ಆರಂಭಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಆರೋಪಿಸಿದ್ದಾರೆ.

ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿ, ಬಡವರ ಹೊಟ್ಟೆ ತುಂಬಿಸುವ ಯೋಜನೆಗೆ ಅಕ್ಕಿ ಪೂರೈಸಲು ನಿರಾಕರಿಸಿ ರಾಜ್ಯದ ಮತದಾರರ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ ಪಡಿತರ ಹಕ್ಕಿ ಪೂರೈಸುವ ಎಫ್ ಸಿಐಗೆ ಪತ್ರ ಬರೆದು ಅಕ್ಕಿ ಪೂರೈಸುವಂತೆ ಮಾಡಿದ ಮನವಿ ಒಪ್ಪಿಗೆ ಸೂಚಿಸಿದ 24 ಗಂಟೆಯೊಳಗೆ ಕೇಂದ್ರದ ಒತ್ತಡಕ್ಕೆ ಮಣಿದು ಅಕ್ಕಿ ಪೂರೈಸಲು ನಿರಾಕರಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಈ ತಾರತಮ್ಯ ಸರಿಯಲ್ಲ. ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಇಡೀ ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಚಂದ್ರಶೇರಗೌಡ ತಿಳಿಸಿದರು.

ಕಾಂಗ್ರೆಸ್ ರಾಜ್ಯ ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ, ಒಂದೆಡೆ ಬಡವರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತೊಂದೆಡೆ ಗ್ಯಾರಂಟಿಗಳನ್ನು ಜಾರಿಗೊಳಿಸಿ ಎಂದು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ, ಕಪ್ಪು ಹಣ ವಾಪಸ್ ತರುವ ಭರವಸೆ ನೀಡಿದ್ದನ್ನು ಮೊದಲು ಈಡೇರಿಸಲಿ. 2013 ರಿಂದ 2018ರ ವರೆಗೆ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದೆ. ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆ ಜಾರಿಯಿಂದ ದಿಕ್ಕು ತೋಚದಂತಾಗಿರುವ ಬಿಜೆಪಿ ಉಳಿದ ಗ್ಯಾರಂಟಿಗಳ ಜಾರಿಗೆ ಬರುವ ಮುನ್ನ ಜನರಲ್ಲಿ ಇನ್ನಿಲ್ಲದ ಗೊಂದಲ ಮೂಡಿಸಲು ಹೊರಟಿದೆ. ಜನತೆಗೆ ಕೊಟ್ಟ ಮಾತಿನಂತೆ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲಿದೆ ಎಂದರು.

ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರಕಾರ ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯ ಮೂಲಕ ನೀಡುತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿ ಇಳಿಸಿದ್ದು ಬಿಜೆಪಿ ಸರಕಾರದ ಸಾಧನೆ. ಈಗ ಬಡವರಿಗೆ ನೀಡುವ ಅನ್ನಭಾಗ್ಯ ಯೋಜನೆಗೆ ಅಕ್ಕಿಪೂರೈಸಲು ನಿರಾಕರಿಸಿ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ನಮಗೆ ಗೊತ್ತಿದೆ, ಅಕ್ಕಿಯನ್ನು ಎಲ್ಲಿಂದು ತರಬೇಕೆಂದು. ನಿಮ್ಮ ಯಾವ ಕುತಂತ್ರಗಳಿಗೂ ನಮ್ಮ ಯೋಜನೆ ನಿಲ್ಲದು, ಬಡವರಿಗೆ ನಾವು ನೀಡಿದ ಭರವಸೆಯಂತೆ 10 ಕೆಜಿ ಅಕ್ಕಿ ನೀಡಲು ಸಿದ್ಧ. ಆದರೆ ಜನರು ತಿನ್ನುವ ಅನ್ನದ ವಿಚಾರದಲ್ಲಿ ರಾಜಕೀಯ ಮಾಡಿದ ಕೇಂದ್ರ ಸರಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಎಸ್ ಟಿ ರೂಪದಲ್ಲಿ ನಮ್ಮಿಂದ ಸಾವಿರಾರು ಕೋಟಿ ರೂ. ಆದಾಯ ಪಡೆಯುವ ಕೇಂದ್ರ ಸರಕಾರ ಕರ್ನಾಟಕವನ್ನು ಪ್ರತಿ ಹಂತದಲ್ಲಿಯೂ ಕಡೆಗಣಿಸುತ್ತಿದೆ. ಈಗಾಗಲೇ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್, ಷಣ್ಮುಖಪ್ಪ, ನರಸೀಯಪ್ಪ, ಕೆಂಚಮಾರಯ್ಯ, ಆರ್.ರಾಮಕೃಷ್ಣ, ಹೆಚ್.ನಿಂಗಪ್ಪ, ಟಿ.ಜಿ.ಲಿಂಗರಾಜು, ಸುಜಾತ, ಗೀತ, ನಾಗಮಣಿ, ನಾಗೇಶಬಾಬು, ಮರಿಚನ್ನಮ್ಮ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!