ಪ್ರಾಚೀನ ಕಾಲದಲ್ಲಿ ನಮ್ಮ ಹಿರಿಯರು ಶ್ರಮಜೀವಿಗಳಾಗಿದ್ದರು. ಹೊಲ, ಗದ್ದೆಗಳಲ್ಲಿ ಬಿಸಿಲು, ಮಳೆ ಎನ್ನದೆ ದುಡಿಯುತ್ತಿದ್ದರು. ಮಹಿಳೆಯರು ಹೊರಗೆ ಒಳಗೆ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅವರಿಗೆ ಒಳ್ಳೆ ವ್ಯಾಯಮ ಮನೆಯಲ್ಲೆ ಸಿಗುತ್ತಿತ್ತು. ಅವರ ಆಹಾರ ಕ್ರಮವು ಹಿತ ಮಿತವಾಗಿರುತಿತ್ತು. ಆದರೆ ಇಂದು ನಾವುಗಳು ಯಾಂತ್ರಿಕ ಯುಗದಲ್ಲಿ ಇದ್ದೆವೆ. ಮನೆಯಲ್ಲಿ ಎಲ್ಲದಕ್ಕೂ ಯಂತ್ರಗಳ ಬಳಕೆ. ಕೆಳಗೆ ಕೂರದೆ ಒಲೆ ಊದದೆ ಗಂಟೆಗಟ್ಟಲೆ ನಿಂತು ಮಾಡುವ ಅಡುಗೆ ವ್ಯವಸ್ಥೆ. ಸಂಸ್ಕರಿಸಿದ ಆಹಾರ ಸೇವನೆ, ಕಚೇರಿಗಳಲ್ಲಿ ದಿನ ವಿಡೀ ಎಸಿ ರೂಮ್ ನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ, ಇವುಗಳೆಲ್ಲಾ ಮನುಷ್ಯನನ್ನು ಅಲಸ್ಯ ಮತ್ತು ಜಡತ್ವಕ್ಕೆ ನೂಕಿವೆ. ಅತಿಯಾದ ಸೌಕರ್ಯಗಳಿಂದ ಅಲ್ಪಾಯಿಷಿಗಳಾಗಿ ಸ್ವತಃ ನಾವುಗಳೇ ಅನಾರೋಗ್ಯದ ಬಾಗಿಲು ಬಡಿಯುತ್ತಿದ್ದೇವೆ. ಈ ಎಲ್ಲಾ ಜಂಜಾಟಗಳಿಂದ ಹೊರ ಬರಲು ಯೋಗಭ್ಯಾಸವು ಒಂದು ಉತ್ತಮ ಮಾರ್ಗ.
ಯೋಗ ಎಂದಾಕ್ಷಣ ಅದು ಕೇವಲ ವ್ಯಾಯಮ ಅಷ್ಟೇ ಅಲ್ಲ. ಅದು ನಮ್ಮ ಜೀವನ ಶೈಲಿಯ ಒಂದು ಕಲೆ, ಸಂಸ್ಕಾರದ ಭಂಡಾರ. ಇದನ್ನು ಪ್ರಾಚೀನ ಕಾಲದಿಂದಲೂ ಋಷಿ ಮುನಿಗಳು ಆಚರಿಸಿಕೊಂಡು ಅಳವಡಿಸಿಕೊಂಡು ಆರೋಗ್ಯವಾಗಿ ಜೀವಿಸಿ ತೋರಿಸಿದ್ದಾರೆ. ಯೋಗ ಎಂದರೆ ದೇಹ ಮತ್ತು ಮನಸ್ಸನ್ನು ಒಂದು ಗೂಡಿಸುವ ಒಂದು ಪ್ರಾಚೀನ ಕಲೆ. ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ನಮ್ಮ ಮನಸ್ಸಿನ ಒತ್ತಡ, ಆಸೆ, ಕೋಪ, ದ್ವೇಷಗಳನ್ನು ನಿಂತ್ರಿಸಬಹುದಾದ ಕಲೆಯೇ ಯೋಗ.
ಪತಂಜಲ ಋಷಿ ಮಹರ್ಷಿಗಳು ತಿಳಿಸಿರುವ ಹಾಗೆ ಯೋಗಾಭ್ಯಾಸವು ನೂರಾರು ಶ್ಲೋಕಗಳನ್ನು ಹೊಂದಿದ್ದು, ಸೂರ್ಯ, ಚಂದ್ರ, ಭೂಮಿ, ಪ್ರಕೃತಿ ನಮ್ಮ ಆರಾಧ್ಯ ದೈವಗಳ ಸ್ಮರಣೆಯಲ್ಲಿ ಒಂದೊಂದು ಆಸನಗಳನ್ನು ಒಳಗೊಂಡಿದೆ.
ಯೋಗ ಒಂದು ಸಂಸ್ಕಾರದ ಸಂಪತ್ತು. ಇಲ್ಲಿ ಕೇವಲ ದೈಹಿಕ ವ್ಯಾಯವ ಅಷ್ಟೇ ಅಲ್ಲದೆ ನಮ್ಮ ಜೀವನ ಶೈಲಿ, ಸಮಾಜ, ಕುಟುಂಬ ನೆರೆಯೊರೆಯವರೊಂದಿಗೆ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ನಮ್ಮ ಆಚಾರ ವಿಚಾರಗಳನ್ನು ಹೇಗೆ ಪಾಲಿಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಪತಂಜಲಿ ಯೋಗ ಸಿದ್ಧಾಂತವೆ ಸಂಸ್ಕಾರ, ಸಂಘಟನೆ ಮತ್ತು ಸೇವೆ ಇವಗಳನ್ನೇ ತನ್ನ ಧ್ಯೇಯವನ್ನಾಗಿಸಿಕೊಂಡಿದೆ.
ನಮ್ಮಲ್ಲಿ ಇಂದು ಬಹುತೇಕ ಮನೆಗಳಲ್ಲಿ ಕಣ್ಮರೆಯಾಗಿರುವುದು ಸಂಸ್ಕಾರ. ಮನೆಯಲ್ಲಿ ಹಿರಿಯರೇ ಸಂಸ್ಕಾರವಂತರಾಗಿಲ್ಲವಾದರೆ ಮಕ್ಕಳನ್ನು ಹೇಗೆ ಸಂಸ್ಕಾರ-ಸಂಪ್ರದಾಯಗಳನ್ನು ಹೇಳಿಕೊಡಲು ಸಾಧ್ಯ.
ಆದರೆ ಯೋಗಾಭ್ಯಾಸದಲ್ಲಿ ಮೊದಲು ಕಲಿಸುವುದೇ ನಮ್ಮ ಸಂಸ್ಕಾರದ ರೀತಿ-ನೀತಿಗಳನ್ನು. ಪಾದರಕ್ಷೆಗಳನ್ನು ಒಪ್ಪವಾಗಿ ಬಿಡುವುದರಿಂದ ಶುರುವಾಗುವ ಸಂಸ್ಕಾರ, ನಮ್ಮ ಕೇಶವಿನ್ಯಾಸ, ಹಣೆಯ ಮೇಲಿನ ಕುಂಕುಮದ ಬೊಟ್ಟು, ನಮ್ಮ ಸಂಪ್ರಾದಾಯಿಕ ಉಡುಗೆ ತೊಡುಗೆಗಳ ಬಗ್ಗೆ, ಪೂಜೆ, ಆರಾಧಾನೆ ಇವುಗಳೆಲ್ಲವನ್ನು ಯೋಗಾಭ್ಯಾಸದಲ್ಲಿ ಹೇಳಿಕೊಡಲಾಗುತ್ತದೆ. ಅತಿಥಿ ದೇವೋಭವ ಎನ್ನುವ ವಾಕ್ಯ ಇಂದು ಕೇವಲ ವಾಕ್ಯವಾಗಿ ಉಳಿದಿದೆ. ಮಕ್ಕಳು ತಂದೆ ತಾಯಿ ನೋಡಲು, ತಂದೆ ತಾಯಿ ಮಕ್ಕಳನ್ನು ನೋಡಲು ಪೋನ್ ಮಾಡಿ ಅನುಮತಿ ಪಡೆದು ಹೋಗಬೇಕಾದಂತ ಪರಿಸ್ಥಿತಿ. ಅತಿಥಿ ಸತ್ಕಾರದ ಮಹತ್ವ ಮತ್ತು ಸಮಯ ಹೊಂದಾಣಿಕೆ ಹಾಗೂ ಆದರಿಂದ ಸಿಗುವ ಸಂತೋಷ ಮತ್ತು ನೆಮ್ಮದಿಯು ಎಂತಹದು ಎನ್ನುವುದನ್ನು ಯೋಗಾಭ್ಯಾಸದಲ್ಲಿ ಹೇಳಿಕೊಡಲಾಗುತ್ತದೆ. ಎಡಗೈ ಬಲಗೈನಲ್ಲಿ ಹಾಕಿಕೊಂಡು ತಿನ್ನುವ ನಾವುಗಳು ಊಟ ಬಡಿಸುವ ವಿಧಾನವನ್ನೇ ಮರೆತಿದ್ದೇವೆ. ಊಟ ಬಡಿಸುವ ಕ್ರಮ ಮತ್ತು ಕೈತುತ್ತಿನ ರುಚಿ ಹೇಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ಅಭ್ಯಂಜನ ಸ್ನಾನ ಮಾಡುವ ಕ್ರಮ ಹೇಗಿರಬೇಕು ಎನ್ನುವುದನ್ನು ಪತಂಜಲಿ ಯೋಗ ಶಿಕ್ಷಣದಲ್ಲಿ ಕಲಿಯಬಹುದಾಗಿದೆ.
ನಾವೆಲ್ಲರೂ ಒಂದೇ, ಮೇಲು ಕೀಳುಗಳಿಲ್ಲದೆ ಬದುಕುವ ಎಂಬ ಜೀವನ ಕ್ರಮವನ್ನು ಕಲಿಸುವ ಮೂಲಕ ಸಂಘಟಿತರನ್ನಾಗಿ ಮಾಡುವ ಕಲೆಯೆ ಯೋಗ. ಸ್ವಂತಕ್ಕೆ ಸ್ವಲ್ಪ- ಸಮಾಜಕ್ಕೆ ಸರ್ವಸ್ವ ಎಂಬ ವಾಕ್ಯದೊಂದಿಗೆ ಸೇವಾ ಮನೋಭಾವನೆಯನ್ನು ನಮ್ಮಲ್ಲಿ ತುಂಬುವ ಏಕೈಕ ಕಲೆಯೇ ಯೋಗ.
ಯೋಗಾಭ್ಯಾಸದಲ್ಲಿ ದೇಹದ ಜೊತೆ ಮನಸ್ಸು, ಬುದ್ದಿ, ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಯೋಗದಲ್ಲಿ ಎಂಟು ಅಂಗಗಳು (ಅಷ್ಟಾಂಗಗಳು) ಇವೆ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮ ಜೀರ್ಣಾಂಗ ಕ್ರೀಯೆ ಉತ್ತಮವಾಗಿರುತ್ತದೆ. ಇಂದು ಅತಿ ಕಿರಿಯ ವಯಸ್ಸಿನಲ್ಲೆ ಆಕ್ರಮಿಸುತ್ತಿರುವ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ರೋಗಗಳಿಂದ ಮುಕ್ತರಾಗಿ ಬದುಕಲು ನಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸದ ಅಳವಡಿಕೆ ಉಪಯುಕ್ತವಾಗಿದೆ.
ಯೋಗವನ್ನು ಯಾವಗ, ಹೇಗೆಬೇಕಾದರೆ ಹಾಗೆ ಮಾಡುವಂತಿಲ್ಲ. ಉತ್ತಮ ಗುರುಗಳ ಮಾರ್ಗದರ್ಶನದಲ್ಲಿ ತದೇಕ ಚಿತ್ತದಿಂದ ಯೋಗಾಭ್ಯಾಸ ಮಾಡಿದಾಗ ಮಾತ್ರ ಯೋಗದ ಫಲವನ್ನು ಪಡೆಯಬಹುದು. ಅದರಲ್ಲು ಬೆಳಗಿನ ಬ್ರಾಹ್ಮಿಂ ಮುಹೂರ್ತದಲ್ಲಿ ಪ್ರತಿನಿತ್ಯ ಒಂದು ಅಥವಾ ಎರಡು ಗಂಟೆಗಳ ಕಾಲ ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಉಲ್ಲಾಸ ಬರಿತವಾಗಿರುತ್ತದೆ. ಇಡೀ ದಿನ ನಾವು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಇದಕ್ಕೆ ಯಾವುದೇ ಜಾತಿ , ಧರ್ಮ, ವರ್ಣ ಇತ್ಯಾದಿಗಳ ಬೇಧವಿಲ್ಲ. ಆಸಕ್ತಿ ಇರುವ ಯಾರಾದರೂ ಅಭ್ಯಾಸಿಸಬಹುದು.
ರೋಗ ಬಂದಮೇಲೆ ಅದರ ನಿವಾರಣೆಗೆ ಪ್ರಯತ್ನಿಸುವ ಬದಲು ರೋಗ ಬರದಂತೆ ಎಚ್ಚರ ವಹಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಯೋಗದ ಕೊಡುಗೆ ಮತ್ತು ಮಹತ್ವ ಮನುಕುಲಕ್ಕೆ ಒಂದು ವರದಾನ. ಇಂದಿನ ಕಲುಷಿತ ವಾತಾವರಣದ ಹಿನ್ನೆಲೆಯಲ್ಲಿ ಯೋಚಿಸಿದರೆ ಯೋಗ ಮಾಡದವರು ಬಹಳ ಬೇಗ ರೋಗಿಗಳಾಗುವ ಸಾಧ್ಯತೆ ಹೆಚ್ಚೆನಿಸುತ್ತದೆ. ಜಾಡ್ಯ ತುಂಬಿರುವ ಬದುಕಿನಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಲು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಇರುವಷ್ಟು ದಿನ ಆರೋಗ್ಯವಾಗಿ ಸಂಸ್ಕಾರಯುತರಾಗಿ, ಸಂಘಟಿತರಾಗಿ ಸೇವಾಮನೋಭಾವವನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕುವ ಮತ್ತು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿ ಬಾಳುವ ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
Comments are closed.