ತುಮಕೂರು: ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಗೆಲ್ಲುತ್ತೇನೆಂಬ ಛಲವಿರಬೇಕು. ಆಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ತಿಳಿಸಿದರು.
ನಗರದ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಡಿಸಿ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 593 ಅಂಕಗಳಿಸಿ ರಾಜ್ಯಮಟ್ಟದಲ್ಲಿ 5ನೇ ಸ್ಥಾನಗಳಿಸಿ ಕೀರ್ತಿತಂದ ಹಿತ.ಆರ್. ಎಂಬ ಸಾಧಕ ವಿದ್ಯಾರ್ಥಿನಿಗೆ ಪ್ರೋತ್ಸಾಹದಾಯಕವಾಗಿ ಲ್ಯಾಪ್ ಟಾಪ್ ನೀಡಿ ಗೌರವಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದುವಿಕೆಯಲ್ಲಿ ಒತ್ತಡ ಇದ್ದೇ ಇರುತ್ತವೆ. ಅದನ್ನು ಹೇಗೆ ನಿಭಾಯಿಸಬೇಕೆಂಬುದು ಗೊತ್ತಿರುವುದಿಲ್ಲ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಗೆಲ್ಲಲಾರದೆ ಹೋಗುತ್ತಾರೆ. ಆ ಒತ್ತಡ ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತರೆ ಯಶಸ್ಸನ್ನು ಕಾಣುತ್ತಾರೆ. ಅದಕ್ಕೋಸ್ಕರವೆ ನಮ್ಮ ಸಂಸ್ಥೆಯ ವತಿಯಿಂದ ನಮ್ಮ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷವೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಅವರ ವ್ಯಕ್ತಿತ್ವದ ಶಕ್ತಿ ಅರಿಯುವಂತೆ ಮಾಡಿ ಸಮಾಜಕ್ಕೆ ಸಾಧಕ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ಕೊಡುತ್ತಿದ್ದೇವೆ ಎಂದರು.
ಓದುವಿಕೆಯಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಧನಾತ್ಮಕ ಚಿಂತನೆ ಅಳವಡಿಕೊಳ್ಳಬೇಕು. ಧನಾತ್ಮಕ ಮನಸ್ಥಿತಿಯಿದ್ದರೆ ಏಕಾಗ್ರತೆಯಿಂದ ಪಾಠ ಪ್ರವಚನ ಕೇಳಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಿ ಹೆಚ್ಚಿನ ಅಂಕ ಗಳಿಸಿ ಸಾಧಕರಾಗಿ ಈ ರೀತಿಯ ಪುರಸ್ಕಾರಕ್ಕೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಜನರಾಗಲಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿನಿ ಹಿತ ಅವರ ಪೋಷಕರಾದ ರಮೇಶ್ ಹಾಗೂ ಸುಧಾ ದಂಪತಿ ಸನ್ಮಾನಿಸಲಾಯಿತು. ಪ್ರಸ್ತುತ ಸಂದರ್ಭದಲ್ಲಿ ಪ್ರಾಚಾರ್ಯಎಂ.ವೀರೇಶ್ ಬಾಬು, ಬೆಂಗಳೂರಿನ ಕೈವಲ್ಯಅಕಾಡೆಮಿಯ ಡಾ.ಲೋಕೇಶ್ ಬಾಬು, ಉಪನ್ಯಾಸಕ ಜೆ.ಎಲ್.ರಾಜಶೇಖರ್, ಉಪನ್ಯಾಸಕ ಸಿ.ಜಿ.ಮಹೇಶ್ ಚಂದ್ರ ಇತರರು ಇದ್ದರು.
Comments are closed.