ತುಮಕೂರು: ನಗರ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದಿಂದ ದಾಸೋಹ ಜಿಲ್ಲೆ ಎಂದೇ ಪ್ರಸಿದ್ಧಿಯಾಗಿದ್ದು, ತುಮಕೂರು ನಗರದಲ್ಲಿ ಇನ್ನುಳಿದ ಅಧಿಕಾರಾವಧಿಯ ನಾಲ್ಕು ವರ್ಷಗಳೊಳಗಾಗಿ ಮತ್ತೊಮ್ಮೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅಭಿಲಾಷೆ ಇದೆ ಎಂದು ಕೇಂದ್ರ ಕ.ಸಾ.ಪ.ದ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ನುಡಿದರು.
ನಗರದ ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ಮೀಡಿಯಾ ಸೆಂಟರ್ ನಲ್ಲಿ ಜಿಲ್ಲಾ ಕಸಾಪ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕಾರಿ ಸಮಿತಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮಿಗಳು ಕನ್ನಡದ ಹೆಮ್ಮೆಯ ಅಭಿಮಾನದ ಅಸ್ಮಿತೆಯ ಸಂಸ್ಥೆ ಎಂದರೆ ಕನ್ನಡ ಸಾಹಿತ್ಯ ಪರಿಷತ್ತು, ಇದಕ್ಕೆ ಸದಸ್ಯರಾಗಲೀ ಬಿಡಲಿ ಕನ್ನಡಿಗರೆಲ್ಲರೂ ಇದರ ಸದಸ್ಯರೆಂದೇ ಭಾವಿಸಬೇಕು. ಇದಕ್ಕೆ ಎಷ್ಟೋ ಜನ ಸದಸ್ಯರಾಗಿದ್ದಾರೆ ಎಂಬುದು ಮುಖ್ಯವಲ್ಲ ಈ ಸಂಸ್ಥೆಯನ್ನು ಕನ್ನಡಿಗರೆಲ್ಲರೂ ಪೂಜನೀಯ ಭಾವನೆಯಿಂದ ನೋಡಬೇಕು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪಿತವಾದ ಈ ಸಂಸ್ಥೆ ಇಲ್ಲಿಯವರೆಗೂ ಮುಂದುವರೆದುಕೊಂಡು ಬಂದಿರುವುದನ್ನು ನೋಡಿದರೆ ಈ ಸಂಸ್ಥೆಯ ಮೌಲ್ಯ ಅರ್ಥವಾದೀತು. ಈ ಸಂಸ್ಥೆ ಹುಟ್ಟಿದ ನಗರ ಬೆಂಗಳೂರಿನಲ್ಲೇ ಶೇ.40 ರಷ್ಟು ಕನ್ನಡ ಬಲ್ಲವರು ಇದ್ದಾರೆಂದರೆ ಆಶ್ಚರ್ಯ. ಈ ಪರಿಸ್ಥಿತಿ ಇನ್ನುಮುಂದೆ ಜಿಲ್ಲಾ ಕೇಂದ್ರಗಳಿಗೂ ಬರಬಹುದು. ಆದ್ದರಿಂದ ಕನ್ನಡಿಗರೆಲ್ಲರೂ ಜಾಗೃತರಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಕನ್ನಡ ಬಾರದ ವಲಸಿಗರಿಗೆ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ನೋಡಿಕೊಳ್ಳಬೇಕು ಎಂದರು.
ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಜಾಗೃತರಾಗಬೇಕು, ಹೆಚ್ಚೆಚ್ಚು ಸಮ್ಮೇಳನದಂತಹ ಸಾರ್ವಜನಿಕ ಕಾರ್ಯಕ್ರಮ ರೂಪಿಸುವುದರ ಮೂಲಕ ಜಾಗೃತಿ ಉಂಟುಮಾಡಬೇಕು. 1963ರಲ್ಲಿ 40ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ದಗಂಗೆಯಲ್ಲಿ ತಮ್ಮ ಗುರುಗಳ ನೇತೃತ್ವದಲ್ಲಿ ನಡೆದುದನ್ನು ಸ್ಮರಿಸಿದ ಶ್ರೀಗಳು ಮತ್ತೊಮ್ಮೆ ಮೂರನೇ ಬಾರಿಗೆ ಅಂತಹ ಸಮ್ಮೇಳನ ತುಮಕೂರಿನಲ್ಲಿ ಆಯೋಜಿಸಲು ಜಿಲ್ಲಾ ಕಸಾಪ ಒತ್ತಾಯಿಸಿದರೆ ನಮ್ಮ ಸಂಸ್ಥೆಯೂ ಇತರರೊಂದಿಗೆ ಸಹಕಾರ ನೀಡಲು ಸಿದ್ಧ ಎಂದರು.
ನಮ್ಮ ಗುರುಗಳಾದ ಡಾ.ಶಿವಕುಮಾರ ಸ್ವಾಮಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವುದರ ಮೂಲಕ ಕನ್ನಡ ಕಟ್ಟುವ ಕಾಯಕ ಮಾಡಿದರು. ಆದರೆ ಇಂದು ಆ ಶಾಲೆಗಳಲ್ಲಿ ವಿದ್ಯಾರ್ಥಿ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ನೋಡಿದರೆ ವಿಷಾದವಾಗುತ್ತದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಬೇಕಾದ ತುರ್ತು ಇಂದು ಅಗತ್ಯವಿದೆ. ಇಂತಹ ವಿಷಯಗಳನ್ನು ಕಾರ್ಯಕಾರಿ ಸಮಿತಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಹ.ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜ್, ಕೋಶಾಧ್ಯಕ್ಷ ಪಾಂಡು ಪಟೇಲ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಎಂ.ಗೋವಿಂದರಾಯ ಇತರರು ಇದ್ದರು.
Comments are closed.