ಕುಣಿಗಲ್: ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ತಜ್ಞರಿಂದ ತುರ್ತು ಚಿಕಿತ್ಸೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಎಂಎಂ ಆಸ್ಪತ್ರೆಯಲ್ಲಿ ಆರಂಭವಾಗುತ್ತಿರುವ ತುರ್ತು ಚಿಕಿತ್ಸಾ ಘಟಕ ಸಹಕಾರಿಯಾಗಲಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಗುರುವಾರ ಪಟ್ಟಣದ ಎಂಎಂ ಆಸ್ಪತ್ರೆಯಲ್ಲಿ ಬೆಂಗಳೂರು ಪೀಪಲ್ ಟ್ರೀ ಆಸ್ಪತ್ರೆ ಸಮೂಹದ ವತಿಯಿಂದ ಟ್ರಾಮ ಸೆಂಟರ್ ( ತುರ್ತು ಚಿಕಿತ್ಸಾ ಘಟಕ) ಉದ್ಘಾಟನೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾಗೂ ರಾಜ್ಯ ಹೆದ್ದಾರಿ 33 ಹಾದು ಹೋಗಿದೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಈ ಘಟಕದಲ್ಲಿ ನುರಿತ ವೈದ್ಯರು ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿ ತುರ್ತಾಗಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳಿಸಿ ಗಾಯಾಳುಗಳ ಪ್ರಾಣ ಉಳಿಸಲು ಸಹಕಾರಿಯಾಗಿದೆ ಎಂದರು.
ರಾಜೀವಗಾಂಧಿ ಆರೋಗ್ಯವಿಜ್ಞಾನಗಳ ವಿವಿಯ ಸಿಂಡಿಕೇಟ್ ಸದಸ್ಯ, ಎಂಎಂ ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ್ ಮಾತನಾಡಿ, ತಾಲೂಕಿನಲ್ಲಿ ನಡೆಯುವ ಅಪಘಾತಗಳಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಳಿಸುವ ಮಾರ್ಗ ಮಧ್ಯದಲ್ಲೆ ಗಾಯಾಳು ಮೃತ ಪಡುತ್ತಿರುವ ಘಟನೆ ಹೆಚ್ಚಿವೆ. ಗಾಯಾಳುಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ನುರಿತ ವೈದ್ಯರ ಸಹಕಾರದಿಂದ ಹೆಚ್ಚಿನ ಚಿಕಿತ್ಸೆಗೆ ತೆರಳಲು ಬೇಕಾದ ಅಗತ್ಯ ರಕ್ಷಣಾ ವ್ಯವಸ್ಥೆ ನಿರ್ವಹಿಸಿ ಕಳಿಸಲು ಈ ಘಟಕ ಸಹಕಾರಿಯಾಗಿದೆ. ಘಟಕದಲ್ಲಿ ಬೇಕಾದ ರಕ್ಷಣಾ ಉಪಕರಣ ಅಳವಡಿಸಿಕೊಳ್ಳಲು ಹತ್ತುಲಕ್ಷ ರೂ. ಮೌಲ್ಯದ ಉಪಕರಣಗಳನ್ನು ಇನ್ಪೋಸಿಸ್ ಸಂಸ್ಥೆಯವರು ನೀಡಿದ್ದಾರೆ. ಇದರ ಜೊತೆಯಲ್ಲಿ ಪೀಪಲ್ ಟ್ರಿ ಆಸ್ಪತ್ರೆಯ ನುರಿತ ತಜ್ಞರು ಇಲ್ಲಿ ಬಂದು ಪ್ರಾಥಮಿಕ ತಪಾಸಣೆ ನೆರವೇರಿಸುವ ಮೂಲಕ ರೋಗಿಗಳ ರೋಗ ಆರಂಭಿಕ ಹಂತದಲ್ಲೆ ಪತ್ತೆಹಚ್ಚಿ ಗುಣಪಡಿಸಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ತಜ್ಞ ವೈದ್ಯರಿಂದ ವಿವಿಧ ರೀತಿಯ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಿಂಡಿಕೇಟ್ ಸದಸ್ಯ ಡಾ.ವೆಂಕಟಗಿರಿ, ಪೀಪಲ್ ಟ್ರೀ ಸಮೂಹ ಆಸ್ಪತ್ರೆಯ ಸಿಇಒ ಡಾ.ಜ್ಯೋತಿ ನೀರಜ, ತಜ್ಞ ವೈದ್ಯರಾದ ಡಾ.ಪರಿಮಳ, ಡಾ.ನಿಖೀಲೇಶ, ಡಾ.ವಿವೇಕ್ ಗುಂಡಪ್ಪ, ಡಾ.ಅಭಿಷೇಕ್ ಇತರರು ಇದ್ದರು.
Comments are closed.