ಬಸ್ ನಿಲ್ದಾಣದಲ್ಲಿ ವೈಫೈ ಸೌಲಭ್ಯ ಕಲ್ಪಿಸಿ

ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

164

Get real time updates directly on you device, subscribe now.


ತುಮಕೂರು: ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸ್ಮಾರ್ಟ್ ಬಸ್ ನಿಲ್ದಾಣ ಮುಂದಿನ ನವೆಂಬರ್ ಮಾಹೆಯೊಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು. ಜನರಿಗೆ ಅನುಕೂಲವಾಗುವಂತೆ ವೈಫೈ ಸಂಪರ್ಕ ಸೇರಿದಂತೆ ವಿನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸುವಂತೆ ಕೆಎಸ್ಆರ್ ಟಿಸಿ ಮತ್ತು ಸ್ಮಾರ್ಟ್ಸಿಟಿ ಎಂಡಿ ಅವರಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ನಿರ್ಮಾಣವಾಗಿರುವ ಸೆಂಟ್ರಲೈಸ್ಡ್ ಸೆಂಟರ್ ಕಾಮಗಾರಿ ಪೂರ್ಣಗೊಂಡ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು.
ನಗರದ ಎಲ್ಲಾ ಪ್ರಮುಖ ಜಂಕ್ಷನ್ ಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಜನರಿಗೆ ಅನುಕೂಲವಾಗುವ ರೀತಿ ವೈಫೈ ಸಂಪರ್ಕ ಇರಬೇಕು. ಈಗ ಸ್ಮಾರ್ಟ್ ಸಿಟಿ ವತಿಯಿಂದ 6 ಪ್ರಮುಖ ಕೇಂದ್ರಗಳಲ್ಲಿ ಮಾತ್ರ ವೈಫೈ ಸಂಪರ್ಕ ಇದ್ದು, ಇದನ್ನು ಹೆಚ್ಚಿಸುವಂತೆ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿಗೆ ಸೂಚಿಸಿದರು.

ತುಮಕೂರು ನಗರ ಪ್ರವೇಶಿಸುವ ಜನರಿಗೆ ನಗರದ ಸೌಂದರ್ಯ ಎದ್ದು ಕಾಣಬೇಕು. ಎಲ್ಲೆಡೆ ಸ್ಮಾರ್ಟ್ನೆಸ್ ಇರಬೇಕು, ರಸ್ತೆಯ ಅಕ್ಕಪಕ್ಕ ಮತ್ತು ಮಧ್ಯ ಭಾಗಗಳಲ್ಲಿ ಹಸಿರೀಕರಣವಾಗಬೇಕು, ರಸ್ತೆಯ ಉಭಯ ಬದಿಗಳಲ್ಲಿ ಬೋಗನ್ ವಿಲ್ಲಾ ಗಿಡಗಳನ್ನು ನೆಡುವ ಮೂಲಕ ಹಾಗೂ ಹೂ ಗಿಡಗಳನ್ನು ಬೆಳೆಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ತುಮಕೂರು ನಗರ ಪ್ರವೇಶಿಸುವ ಎಲ್ಲಾ ಮುಖ್ಯ ದ್ವಾರಗಳಲ್ಲಿ ಕಲ್ಪತರು ನಾಡಿಗೆ ಪ್ರವೇಶ ಎಂಬ ನಾಮಫಲಕ ಇರಬೇಕು ಎಂದು ಸೂಚಿಸಿದರು.

ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟವುಳ್ಳ ಜಿಮ್ವೊಂದನ್ನು ನಿರ್ಮಿಸಬೇಕು. ನಗರದ 4 ದಿಕ್ಕಿನಲ್ಲಿ ಸುಸಜ್ಜಿತ ಎಲ್ಲಾ ವೈದ್ಯಕೀಯ ಉಪಕರಣ ಒಳಗೊಂಡ ಆ್ಯಂಬುಲೆನ್ಸ್ ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಿಂದ ನೀಡಬೇಕು. ನಗರದ ಧೋಬಿಘಾಟ್ ನಲ್ಲಿ ಅತ್ಯಾಧುನಿಕ ಬಟ್ಟೆ ತೊಳೆಯುವ ಯಂತ್ರ ಹಾಗೂ ಡ್ರೈಯರ್ ಗಳನ್ನು ಇರಿಸಬೇಕು. ಕೊಳಚೆ ನೀರು ಕಾಮಗಾರಿ ಪೂರ್ಣಗೊಳಿಸದ ಹೊರತು ಅಮಾನಿಕೆರೆಯಿಂದ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಿಲ್ಲ. ಅಮಾನಿಕೆರೆ ಮುಂಭಾಗದ ಗ್ಲಾಸ್ ಹೌಸ್ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಮತ್ತು ಸ್ಮಾರ್ಟ್ ಸಿಟಿಯಿಂದ ನಿರ್ಮಿಸಲಾದ ಎಲ್ಲಾ ಕಾಮಗಾರಿ ನಿರ್ವಹಣೆಗೆ ಪ್ರಾಯೋಜನೆ ಮಾಡಿಕೊಳ್ಳಬೇಕು. ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉಳಿಕೆಯಾಗಿರುವ 8 ಕೋಟಿ ರೂ. ಅನುದಾನ ಉಪಯುಕ್ತ ಕೆಲಸಗಳಿಗೆ ಬಳಸುವಂತೆ ಸೂಚಿಸಿದರು.

ಸುಸಜ್ಜಿತ ಬಡಾವಣೆ ನಿರ್ಮಿಸಲು ಸೂಚನೆ

ತುಮಕೂರಿನಲ್ಲಿ ಟೂಡಾ ಅಸ್ಥಿತ್ವಕ್ಕೆ ಬಂದಾಗಿನಿಂದ ಹೇಳಿಕೊಳ್ಳುವಂತಹ ಯಾವುದೇ ಬಡಾವಣೆ ನಿರ್ಮಾಣವಾಗಿಲ್ಲ. ಜನರಿಗೆ ಕಡಿಮೆ ದರದಲ್ಲಿ ಉತ್ತಮ ನಿವೇಶನ ನೀಡುವುದು ಟೂಡಾ ಉದ್ದೇಶವಾಗಿದೆ. ನಗರದಿಂದ 2 ಕಿ.ಮೀ. ದೂರದಲ್ಲಿ ಕನಿಷ್ಠ 1 ಸಾವಿರ ನಿವೇಶನ ರೂಪಿಸುವ ಸಂಬಂಧ ಇನ್ನೊಂದು ವಾರದೊಳಗಾಗಿ ಕರಡು ಯೋಜನೆ ಸಿದ್ಧಪಡಿಸುವಂತೆ ಟೂಡಾ ಆಯುಕ್ತ ಜಾಧವ್ ಅವರಿಗೆ ಸಚಿವರು ಸೂಚಿಸಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಮೆಟ್ರೋ ರೈಲು ವಿಸ್ತರಿಸುವ ಯೋಜನೆಯಿದ್ದು, ಯೋಜನೆ ಜಾರಿಗೊಂಡಲ್ಲಿ ಈ ಪ್ರದೇಶವೊಂದರಲ್ಲೇ 5 ಲಕ್ಷದ ವರೆಗಿನ ಜನಸಂಖ್ಯೆ ನಿರೀಕ್ಷಿಸಬಹುದಾಗಿದೆ. ಮುಂದಿನ 10 ವರ್ಷಗಳಲ್ಲಿ ತುಮಕೂರಿನ ಜನಸಂಖ್ಯೆ 25 ಲಕ್ಷ ದಾಟುತ್ತದೆ. ಬೆಳೆಯುವ ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಸುಸಜ್ಜಿತ ಬಡಾವಣೆ ಇರಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸೂಚಿಸಿದರು.
ಪಿಡಬ್ಲ್ಯೂಡಿ ಇಲಾಖೆಯಿಂದ ನಿರ್ಮಾಣವಾಗಿರುವ ಅತಿಥಿಗೃಹಗಳು ಸ್ವಚ್ಛವಾಗಿರುವಂತೆ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಒದಗಿಸಲು ಪ್ರಸ್ತಾವನೆ ಸಲ್ಲಿಸುವಂತೆ ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಮಲತಾಗೆ ಸೂಚಿಸಿದರು.

ಕೆಸ್ತೂರು- ಕೋರಾ ರಸ್ತೆ ನಿರ್ಮಿಸಲು ಒಂದು ವರ್ಷದ ಹಿಂದೆಯೇ ಅಡಿಗಲ್ಲು ಹಾಕಲಾಗಿತ್ತು. ಆದರೆ ಇದುವರೆವಿಗೂ ರಸ್ತೆಯಾಗಿಲ್ಲ. ಗುತ್ತಿಗೆದಾರ ಜೆಲ್ಲಿ ಸುರಿದ ಕಾರಣ ಜನರು ಓಡಾಡಲೂ ಆಗದೆ ಕಷ್ಟಪಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಮಲತಾಗೆ ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!