ತುಮಕೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ರೈಲ್ವೆ ಮಾರ್ಗ, ನೀರಾವರಿ, ಹೆದ್ದಾರಿ ನಿರ್ಮಾಣ, ಎತ್ತಿನ ಹೊಳೆ ಯೋಜನೆಗಳ ಭೂ ಸ್ವಾಧೀನವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀನಿವಾಸ.ಕೆ. ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸರ್ಕಾರದ ವಿವಿಧ ಯೋಜನೆಗಳ ಭೂ ಸ್ವಾಧೀನ ಪ್ರಕರಣಗಳಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ನಿಗದಿತ ಸಮಯದೊಳಗೆ ಪೂರ್ಣವಾಗಬೇಕು. ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಭೂ ಸ್ವಾಧೀನಕ್ಕೆ ಉಂಟಾಗಿರುವ ಅಡೆತಡೆಗಳನ್ನು ತ್ವರಿತವಾಗಿ ಬಗೆಹರಿಸಿ ಪರಿಹಾರ ವಿತರಣೆ ವ್ಯವಸ್ಥಿತವಾಗಿರಬೇಕು. ಭೂ ಸ್ವಾಧೀನ ಅಥವಾ ನ್ಯಾಯಾಲಯದ ತಡೆಯಾಜ್ಞೆಯಂತಹ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯಿಂದ ಪರಿಹರಿಸಿ ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಕೂಡಲೇ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು- ದಾವಣಗೆರೆ ಹಾಗೂ ತುಮಕೂರು- ರಾಯದುರ್ಗ ರೈಲ್ವೆ ಯೋಜನೆ, ಎತ್ತಿನಹೊಳೆ ಸೇರಿದಂತೆ ಮಹತ್ವದ ಯೋಜನೆಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದರು.
ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕೆಲವು ಸರ್ಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಜೂನ್ 23ರ ಒಳಗೆ ಇಂತಹ ಕಚೇರಿಗಳ ಪಟ್ಟಿ ನೀಡುವಂತೆ ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಎತ್ತಿನಹೊಳೆ ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಎನ್.ಮಂಜುನಾಥ, ಜಿಲ್ಲಾಧಿಕಾರಿಗಳ ಕಚೇರಿಯ ರಾಜೀವ್ ಬಿ.ಆರ್.ಎನ್.ಹೆಚ್ -206 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಹೇಮಾವತಿ ನಾಲಾ ವಲಯದ ಅಧಿಕಾರಿಗಳು, ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ, ಎನ್.ಹೆಚ್-48 ಹಾಗೂ ಎನ್.ಹೆಚ್-4 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳು, ತುಮಕೂರು- ದಾವಣಗೆರೆ ಹಾಗೂ ತುಮಕೂರು- ರಾಯದುರ್ಗ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳು, ತಹಶೀಲ್ದಾರರು, ಭೂ ದಾಖಲೆ ಅಧಿಕಾರಿಗಳು, ಮತ್ತಿತರ ಇಲಾಖೆಗಳು ಅಧಿಕಾರಿಗಳು ಇದ್ದರು.
Comments are closed.