ತುಮಕೂರು: ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕೊಟ್ಟು ಜನರಿಗೆ ಟೋಪಿ ಹಾಕಿ ದ್ರೋಹ ಮಾಡಿ ಅಧಿಕಾರಕ್ಕೆ ಬಂದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿ ಈಗ ಹಲವು ಷರತ್ತು ಹಾಕಿ ಮೋಸ ಮಾಡಿದೆ ಎಂದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಕಿಡಿಕಾರಿದರು.
ತುಮಕೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಕನರಿಗೆ ದ್ರೋಹ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಮೋಸದ ವಿರುದ್ಧ ಸದನದ ಹೊರಗೆ ಒಳಗೆ ನಾವು ಹೋರಾಟ ಮಾಡುತ್ತೇವೆ ಎಂದರು.
ಅಧಿವೇಶನ ಆರಂಭದಿಂದ ಮುಗಿಯುವ ವರೆಗೂ ಧರಣಿ ಮಾಡುತ್ತೇವೆ. ರಾಜ್ಯದ ಎಲ್ಲಾಕಡೆಯಿಂದ ಬಂದು ಪ್ರತಿಭಟನೆ ಮಾಡಲಿದ್ದೇವೆ. ಸರ್ಕಾರ ಕೊಟ್ಟ ಯೋಜನೆ ಜಾರಿ ಮಾಡಬೇಕು. ಇಲ್ಲ ಅಂದರೆ ಅಧಿಕಾರದಲ್ಲಿ ಒಂದು ನಿಮಿಷನೂ ಇರಬಾರದು ಎಂದು ತಿಳಿಸಿದರು.
ಈ ಸರ್ಕಾರ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ. ನಾವು ಅಕ್ಕಿ ಕೊಡುತ್ತೇವೆ ಎಂದು ಎಲ್ಲಿ ಹೇಳಿದ್ದೇವೆ. ಇವರ ತೀಟೆಗೆ ಕೆಲ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಕೊಡುವ ಅಕ್ಕಿಯಲ್ಲಿ 1 ಕೆಜಿಯೂ ಕಡಿಮೆ ಆಗಬಾರದು. ಕಡಿಮೆ ಮಾಡಿದರೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಅಧಿವೇಶನಕ್ಕೆ ಮುಂಚೆ ವಿಪಕ್ಷ ನಾಯಕರ ಆಯ್ಕೆ ಮಾಡುತ್ತೇವೆ. ನನಗೆ 81 ವರ್ಷ ಆದರೂ ನಾನು ಹೋರಾಟ ಮಾಡುತ್ತೇನೆ. ನನ್ನನ್ನು ಯಾರೂ ನಿರ್ಲಕ್ಷ್ಯ ಮಾಡಿಲ್ಲ. ಇದರಲ್ಲಿ ಸತ್ಯಾಂಶ ಏನೂ ಇಲ್ಲ, ನನಗೆ ಪಕ್ಷದಿಂದ ಎಲ್ಲಾ ಸ್ಥಾನ ಮಾನ ಗೌರವ ಸಿಕ್ಕಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರೂ ಬೇಕಾದರೂ ಆಕಾಂಕ್ಷಿ ಆಗಬಹುದು. ಆಕಾಂಕ್ಷಿಗಳು ಬಹಳಷ್ಟು ಇದ್ದಾರೆ. ಮಾಜಿ ಸಚಿವ ಸೋಮಣ್ಣ ಆಕಾಂಕ್ಷಿ ಆಗೋದರಲ್ಲಿ ತಪ್ಪೇನಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಪ್ರಧಾನಿ ಮೋದಿಗೆ ವಿಶ್ವದಲ್ಲಿ ಗೌರವ ಸಿಗುತ್ತಿದೆ. ಅವರು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಮತ್ತೆ ದೇಶದಲ್ಲಿ ಅಧಿಕಾರ ಹಿಡಿಯುವುದು ಖಚಿತ, ಈ ಬಾರಿ ಕಳೆದ ಬಾರಿಯಂತೆ ಲೋಕಸಭೆಯಲ್ಲಿ ಕರ್ನಾಟದಲ್ಲಿ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದು ಹೇಳಿದರು.
Comments are closed.