ಶಿರಾ: ನಾಡಿನ ಸಮಗ್ರ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮತ್ತು ನಿರ್ವಹಣೆ ಅನಿವಾರ್ಯ, ಆದರೆ ಅದಕ್ಕೆ ಪೂರಕವಾದ ತಾಂತ್ರಿಕತೆ ಮತ್ತು ಗುಣಮಟ್ಟದ ತಾಂತ್ರಿಕ ಶಿಕ್ಷಣ ಅಗತ್ಯ ಎಂದು ಸಾಧನಾ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ರೂಪೇಶ್ ಕೃಷ್ಣಯ್ಯ ತಿಳಿಸಿದರು.
ಶಿರಾದ ಜ್ಯೋತಿ ನಗರದಲ್ಲಿರುವ ಸ್ಟಾರ್ ಕಿಡ್ಸ್ ಶಾಲೆಯಲ್ಲಿ ಜೆಇಇ ಅಡ್ವಾನ್ ಸ್ಡ್ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 1024ನೇ ರ್ಯಾಂಕ್ ಪಡೆದಿರುವ ಶಿರಾದ ವಿದ್ಯಾರ್ಥಿ ಯಶವಂತ್.ಕೆ.ಟಿ ಅವರಿಗೆ ಟ್ರಸ್ಟ್ ವತಿಯಿಂದ ಅಭಿನಂದಿಸಿ ಮಾತನಾಡಿ, ಕೈಗಾರಿಕೆಗಳು ಮತ್ತು ಸೇವಾ ಘಟಕಗಳ ಯಶಸ್ಸಿನಲ್ಲಿ ಪ್ರಮುಖ ಅಂಶವೆಂದರೆ ತಾಂತ್ರಿಕ ಶಿಕ್ಷಣ, ಈ ಕ್ಷೇತ್ರದಲ್ಲಿ ಹೆಚ್ಚು ಪ್ರೇರಿತ ಮತ್ತು ನಿಖರವಾಗಿ ತರಬೇತಿ ಪಡೆದ ತಾಂತ್ರಿಕ ಕಾರ್ಮಿಕರ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಇತರೆ ಶೈಕ್ಷಣಿಕ ಕ್ಷೇತದಲ್ಲಿ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದು ಈಗ ತಾಂತ್ರಿಕ ಶಿಕ್ಷಣದಲ್ಲೂ ಆಸಕ್ತಿ ವಹಿಸಿ ಸಾಧನೆ ಮಾಡುತ್ತಿರುವುದು ಅಭಿನಂದಾರ್ಹ. ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಸಾಧನಾ ಟ್ರಸ್ಟ್ ಮಾಡುತ್ತ ಬಂದಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಾಧಕ ವಿದ್ಯಾರ್ಥಿ ಯಶವಂತ್ ನನ್ನ ಈ ಸಾಧನೆಗೆ ಪೋಷಕರ ಬೆಂಬಲ ಮತ್ತು ಪಾಠ ಕಲಿಸಿದ ಗುರುಗಳು ಕಾರಣ ಮತ್ತು ಐಐಟಿ ಯಂತಹ ರಾಷ್ಟ್ರ ಮಟ್ಟದ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಸೇರಲು ಅವಕಾಶ ಸಿಕ್ಕಿದ್ದು ಬಹು ದಿನಗಳ ಕನಸು ನನಸಾದಂತಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ರವಿಕುಮಾರ್, ಸದಸ್ಯರಾದ ರಘುನಾಥ್ ರಾವ್, ಕಿಶೋರ್ ಕುಮಾರ್, ಯಶವಂತ್ ಅವರ ಪೋಷಕರು ಮತ್ತು ಶಿಕ್ಷಕ ಸಿಬ್ಬಂದಿ ಹಾಜರಿದ್ದರು.
Comments are closed.