ತುಮಕೂರು: ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಯ 8ನೇ ತರಗತಿ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆ ಮಾತ್ರ ನೀಡುತ್ತಿದ್ದು, ಇದನ್ನು ಹೆಚ್ಚಿಸುವ ಮೂಲಕ ಕನಿಷ್ಠ ವಾರಕ್ಕೆ ಮಕ್ಕಳಿಗೆ 3 ಮೊಟ್ಟೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೈಸ್ಕೂಲ್ ವಿಭಾಗ, ಸರ್ವೋದಯ ಪ್ರೌಢಶಾಲೆ, ಎಂಪ್ರೆಸ್ ಶಾಲೆ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರ ಕುಂದುಕೊರತೆ ಆಲಿಸಿದ ನಂತರ ಮಾತನಾಡಿ, ಪ್ರಸ್ತುತ 8ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ನೀಡಲಾಗುತ್ತಿದೆ. 9 ಮತ್ತು 10ನೇ ತರಗತಿ ಮಕ್ಕಳು 8ನೇ ತರಗತಿ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡಿಕೊಂಡು ಓಡಾಡುವಂತಾಗಿದೆ. ಹಾಗಾಗಿ 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟ ನೀಡುವ ಕಾರ್ಯಕ್ರಮ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಾನು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆ ಮಾತ್ರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಾರಕ್ಕೆ 2 ಮೊಟ್ಟೆ ನೀಡುತ್ತಿದ್ದೆವು. ಈಗ 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ ಕೊಡುವ ಕಾರ್ಯಕ್ರಮ ವಿಸ್ತರಿಸುವ ಮೂಲಕ ವಾರಕ್ಕೆ 3 ಮೊಟ್ಟೆ ನೀಡಬೇಕು ಎಂದು ಹೇಳಿದರು.
ಪ.ಪೂ. ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಿ
ತುಮಕೂರು: ಸಂಯುಕ್ತ ಜೂನಿಯರ್ ಕಾಲೇಜುಗಳಲ್ಲಿ ಬಿಸಿಯೂಟದ ದೊಡ್ಡ ಸಮಸ್ಯೆಯಾಗುತ್ತಿದೆ. ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಮಾತ್ರ ಬಿಸಿಯೂಟ ನೀಡಲಾಗುತ್ತಿದ್ದು, ಪಿಯು ಮಕ್ಕಳಿಗೆ ನೀಡುತ್ತಿಲ್ಲ. ಹಾಗಾಗಿ ಪಿಯು ಮಕ್ಕಳಿಗೂ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 7ನೇ ವೇತನ ಆಯೋಗ ರಚನೆ ಮಾಡಿದ್ದು, ಸರ್ಕಾರಿ ನೌಕರರಿಗೆ ಶೇ.17 ರಷ್ಟು ಮಧ್ಯಂತರ ಪರಿಹಾರ ಕೊಟ್ಟಿದ್ದೆವು. ಹೊಸ ಸರ್ಕಾರ ಬಜೆಟ್ ನಲ್ಲಿ 7ನೇ ವೇತನ ಆಯೋಗದ ವರದಿ ತರಿಸಿಕೊಂಡು ನೌಕರರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಹಳೇ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದು ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸುವುದಾಗಿ ಕಾಂಗ್ರೆಸ್ ನವರು ಹೇಳಿದ್ದಾರೆ. ಆದಷ್ಟು ಬೇಗ ಈ ಸಮಿತಿಯ ವರದಿ ತರಿಸಿಕೊಂಡು ಒಪಿಎಸ್ ನ್ನು ಜಾರಿಗೊಳಿಸಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ, ಶೌಚಾಲಯದ ಕೊರತೆ ಬಗ್ಗೆ ಹೈಕೋರ್ಟ್ ಸಹ ಚಾಟಿ ಬೀಸಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಶೌಚಾಲಯಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಮಧ್ಯೆದಲ್ಲಿ ಶಿಕ್ಷಣ ಇಲಾಖೆ ಎಲ್ಲಿ ಸೊರಗಿ ಹೋಗುತ್ತದೋ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ರಾಜ್ಯದ ಜನತೆಗೆ ಎಷ್ಟೇ ಗ್ಯಾರಂಟಿಗಳನ್ನು ಕೊಡಿ, ಇನ್ನು ಏನು ಬೇಕಾದರೂ ಕೊಡಿ ನಮ್ಮ ಅಭ್ಯಂತರವಿಲ್ಲ. ಇವುಗಳ ಜೊತೆಗೆ ಶಿಕ್ಷಣ ಇಲಾಖೆಯನ್ನು ಸಬಲೀಕರಣ ಮಾಡುವತ್ತಲೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ನಾನು ತುಮಕೂರು ತಾಲ್ಲೂಕಿನ ವಿವಿಧ ಸರ್ಕಾರಿ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿದ್ದೇವೆ. ಶಾಲಾ- ಕಾಲೇಜುಗಳು ಪ್ರಾರಂಭವಾಗಿ 1 ತಿಂಗಳಾಗಿದೆ. ಶಿಕ್ಷಕರು, ಉಪನ್ಯಾಸಕರ ಕುಂದುಕೊರತೆ ಆಲಿಸುತ್ತಿದ್ದೇನೆ. ಭೇಟಿ ಸಂದರ್ಭದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ವಿವಿಧ ಸಮಸ್ಯೆ ಅನಾವರಣಗೊಂಡಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ರಾಜಕುಮಾರ್, ಶಿಕ್ಷಕರಾದ ರವಿಕುಮಾರ್, ಜೈರಾಮ್ ನಾಗರಾಜು ಮತ್ತಿತರರು ಹಾಜರಿದ್ದರು.
Comments are closed.