ಕೊಬ್ಬರಿ ಖರೀದಿಗೆ ಗಾತ್ರದ ನೆಪ

ಗುಣಮಟ್ಟದ ಕೊಬ್ಬರಿ ಖರೀದಿಸದ ಅಧಿಕಾರಿಗಳ ವಿರುದ್ಧ ರೈತರ ಕಿಡಿ

181

Get real time updates directly on you device, subscribe now.


ತುರುವೇಕೆರೆ: ಪಟ್ಟಣದ ನ್ಯಾಫೆಡ್ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಗಾತ್ರದ ನೆಪವೊಡ್ಡಿ ರೈತರು ಬೆಳೆದ ಉತ್ತಮ ಗುಣಮಟ್ಟದ ಕೊಬ್ಬರಿ ಖರೀದಿಸದೆ ವಂಚಿಸಲಾಗುತ್ತಿದೆ ರೈತರು ಆರೋಪಿಸಿದರು.
ಪಟ್ಟಣದ ಎಪಿಎಂಸಿ ಎದುರು ರೈತರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ವೇಳೆ ರೈತರು ನ್ಯಾಫೆಡ್ ಕೇಂದ್ರದಲ್ಲಿ 75 ಮಿ.ಮೀ ನಷ್ಟು ಗಾತ್ರದ ಕೊಬ್ಬರಿಗಳನ್ನು ಮಾತ್ರ ಖರೀದಿ ಮಾಡಬೇಕೆಂದು ನ್ಯಾಫೆಡ್ ಕೇಂದ್ರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ 75 ಮಿ.ಮೀ ಗಿಂತಲೂ ಕಡಿಮೆ ಇರುವ ಕೊಬ್ಬರಿ ಖರೀದಿಸಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ರೈತಾಪಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ರೈತರು ಆರೋಪಿಸಿದರು.

ವಿವಿಧ ಕಾರಣಕ್ಕೆ ಕೊಬ್ಬರಿ ಬೆಳೆ ಸಣ್ಣ ಮತ್ತು ದಪ್ಪ ಇಳುವರಿ ಬರುತ್ತವೆ. 75 ಮಿ.ಮೀ ಗಿಂತಲೂ ಕಡಿಮೆ ಗಾತ್ರದ ಕೊಬ್ಬರಿ ಸಹ ಬಹಳ ಗುಣಮಟ್ಟ ಹೊಂದಿರುತ್ತವೆ. ಆದರೆ ನ್ಯಾಫೆಡ್ ಅಧಿಕಾರಿಗಳು ಕೇವಲ ಗಾತ್ರಕ್ಕೆ ಪ್ರಾಧಾನ್ಯತೆ ನೀಡಿ ಕಡಿಮೆ ಗಾತ್ರದ ಕೊಬ್ಬರಿ ಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ವರ್ಷಗಳ ಕಾಲ ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತರು ದೂರಿದರು.
ಕಳೆದ ಹತ್ತು ಹದಿನೈದು ದಿನಗಳಿಂದಲೂ ಎಲ್ಲಾ ಗುಣಮಟ್ಟದ ಕೊಬ್ಬರಿ ಖರೀದಿ ಮಾಡುತ್ತಿದ್ದ ಅಧಿಕಾರಿಗಳು ಈಗ ಏಕಾಏಕಿ 75 ಗ್ರೇಡ್ ನ ಕೊಬ್ಬರಿ ಮಾತ್ರ ಖರೀದಿ ಮಾಡುತ್ತಿರುವುದು ಯಾವ ನ್ಯಾಯ, ಕಡಿಮೆ ಗಾತ್ರ ಇರುವ ಕೊಬ್ಬರಿಯನ್ನು ರೈತಾಪಿಗಳು ದೊಡ್ಡ ಗಾತ್ರ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರದ ಅಧಿಕಾರಿಗಳು ತಮ್ಮ ಮೇಲ್ಮಟ್ಟದ ಅಧಿಕಾರಿಗಳು 75 ಮಿಮೀ ಗಾತ್ರಕ್ಕೆ ಮೇಲ್ಪಟ್ಟ ಕೊಬ್ಬರಿ ಮಾತ್ರ ಖರೀದಿ ಮಾಡಬೇಕೆಂದು ಆದೇಶಿಸಿದ್ದಾರೆ. ಈ ಹಿಂದೆ ಕಡಿಮೆ ಗಾತ್ರದ ಕೊಬ್ಬರಿ ಖರೀದಿ ಮಾಡಲಾಗಿತ್ತು. ಅದನ್ನು ಗೋಡೋನ್ಗೆ ಹಾಕಿಕೊಳ್ಳದೆ ಹಿಂತಿರುಗಿಸಲಾಗಿದೆ. ಇದರಿಂದಾಗಿ ಕಡಿಮೆ ಗಾತ್ರದ ಕೊಬ್ಬರಿ ತಮ್ಮಿಂದ ಕೊಳ್ಳಲು ಸಾಧ್ಯವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಅಧಿಕಾರಿಗಳು ರೈತರ ಬಳಿ ವ್ಯಕ್ತಪಡಿಸಿದರು.

ಪ್ರತಿ ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಕನಿಷ್ಠ 15 ಸಾವಿರ ರೂ. ಬೇಕು, ವರ್ಷಗಟ್ಟಲೆ ಬೆಳೆದು ಇಂದು ಮಾರುಕಟ್ಟೆ ಇಲ್ಲದೇ ರೈತಾಪಿಗಳು ಪರದಾಡುವಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇವಲ 8 ಸಾವಿರ ರೂ. ಇದೆ, ಇತ್ತ ನ್ಯಾಫೆಡ್ ಗೆ ಬಿಟ್ಟರೆ ಸುಮಾರು 11.750 ರೂ. ದೊರೆಯುತ್ತವೆ. ಆದರೆ ಅಧಿಕಾರಿಗಳು ಗ್ರೇಡ್ ಹೆಸರಿನಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಹೊಸಹಳ್ಳಿ ದೇವರಾಜ್ ಮತ್ತು ಕಸುವಿನಹಳ್ಳಿಯ ಆನಂದ್ ದೂರಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರಿಂದ ಕೊಬ್ಬರಿ ಖರೀದಿ ಮಾಡಲು 4 ಕೇಂದ್ರ ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ ಕೇವಲ ಐದಾರು ಟ್ರ್ಯಾಕ್ಟರ್ ನಷ್ಟು ಕೊಬ್ಬರಿ ಮಾತ್ರ ಖರೀದಿ ಮಾಡಲಾಗುತ್ತಿದೆ. ಆದರೆ ಪ್ರತಿದಿನ ಇಲ್ಲಿಗೆ ನೂರು ವಾಹನಗಳಲ್ಲಿ ಕೊಬ್ಬರಿ ತರಲಾಗುತ್ತಿದೆ. ಹಾಗಾಗಿ ಎಪಿಎಂಸಿ ಆವರಣದಲ್ಲಿ ಐದುನೂರಕ್ಕೂ ಹೆಚ್ಚು ವಾಹನ ಕಳೆದ 15 ದಿನಗಳಿಂದ ಸಾಲುಗಟ್ಟಿ ನಿಂತಿವೆ. ಪ್ರತಿದಿನ ಟ್ರ್ಯಾಕ್ಟರ್ ಗೆ ಬಾಡಿಗೆ ಕೊಡಲು ರೈತಾಪಿಗಳಿಗೆ ಆಗುತ್ತಿಲ್ಲ. ಒಡೆದಿರುವ ಕೊಬ್ಬರಿ ಮಳೆ, ಬಿಸಿಲಿಗೆ ತೂಕವೂ ಕಡಿಮೆಯಾಗುತ್ತದೆ. ಹೀಗಾದರೆ ರೈತಾಪಿಗಳ ನೋವು ಕೇಳುವವರ್ಯಾರು ಎಂದು ನೀಲಕಂಠ ಸ್ವಾಮಿ ಮತ್ತು ಸೊಪ್ಪಿನಹಳ್ಳಿ ಕಲ್ಲೇಶ್ ಕಳವಳ ವ್ಯಕ್ತಪಡಿಸಿದರು.

ಜೂನ್ 27 ರೈತರ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಜೂನ್ 27 ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಗುಣಮಟ್ಟದ ಎಲ್ಲಾ ಕೊಬ್ಬರಿ ಖರೀದಿ ಮಾಡುವಂತೆ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ತಾಕೀತು ಕೊಬ್ಬರಿ ಕೇಂದ್ರದ ಬಳಿ ತಹಸೀಲ್ದಾರ್ ಬಂದು ರೈತಾಪಿಗಳ ಸಮಸ್ಯೆ ಆಲಿಸಬೇಕೆಂದು ರೈತರು ಗ್ರಹಿಸಿದರು. ಆದರೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ರವರು ತಾವು ಬೇರೆಡೆ ಇರುವುದರಿಂದ ಸ್ಥಳಕ್ಕೆ ಬರಲು ಸಾಧ್ಯವಿಲ್ಲವೆಂದು ಹೇಳಿ ತಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿಕೊಡುವುದಾಗಿ ಹೇಳಿದರು. ಆದರೆ ರೈತರು ಮಾತ್ರ ತಹಸೀಲ್ದಾರ್ ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದರು, ಆದರೆ ಖರೀದಿ ಕೇಂದ್ರದಲ್ಲಿ ಕೊಳ್ಳುವ ಸಮಯ ಮೀರಿದ್ದರಿಂದ ಸ್ಥಳಕ್ಕೆ ತಹಸೀಲ್ದಾರ್ ಬರಲಿಲ್ಲ. ಆದರೆ ಎಪಿಎಂಸಿಯ ಕಾರ್ಯದರ್ಶಿ ವೆಂಕಟೇಶ್ ಆಗಮಿಸಿ ರೈತರಿಗೆ ಕೊಬ್ಬರಿ ಗುಣಮಟ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

Get real time updates directly on you device, subscribe now.

Comments are closed.

error: Content is protected !!