ತುಮಕೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳ ಅಕ್ರಮ ಸಾಗಾಣಿಕೆ ಸಂಬಂಧ ಜಿಲ್ಲೆಯ ಗಡಿ ಭಾಗಗಳಲ್ಲಿ 38 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಿ ಅಕ್ರಮ ಜಾನುವಾರು ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನುವಾರುಗಳನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ವಾಹನಗಳು ಆರ್ ಟಿಓ ಅವರಿಂದ ಪರವಾನಿಗೆ ಪಡೆದಿರಬೇಕು ಹಾಗೂ ವಾಹನದಲ್ಲಿ ನಿಗದಿತ ಸಂಖ್ಯೆಯಲ್ಲಿ ಜಾನುವಾರು ಸಾಗಾಣಿಕೆ ಮಾಡುವ ಬಗ್ಗೆ ಆರ್ ಟಿಓ, ಪೊಲೀಸ್ ಇಲಾಖೆ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಜಾನುವಾರು ಜಾತ್ರೆ, ಸಂತೆ, ನಡೆಯುವ ಸ್ಥಳಗಳಿಂದ ಜಾನುವಾರುಗಳನ್ನು ಅಧಿಕೃತವಾಗಿ ಸಾಗಾಣಿಕೆ ಮಾಡುವ ಸಮಯದಲ್ಲಿ ಜಾನುವಾರು ಮಾಲೀಕರು ಸಾಗಾಣಿಕೆ ಪರವಾನಿಗೆ ಪತ್ರ ಹಾಗೂ ಆರೋಗ್ಯ ದೃಢೀಕರಣ ಪತ್ರವನ್ನು ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಪಡೆದು, ಜಾನುವಾರು ಮಾರಾಟಕ್ಕೆ ಸಂಬಂಧಿಸಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರಶೀದಿ ಪಡೆಯುವುದು ಮತ್ತು ಜಾನುವಾರು ಸಾಗಾಣಿಕೆಗೆ ಸಾರಿಗೆ ಅಧಿಕಾರಿಗಳಿಂದ ಪರವಾನಿಗೆ ಪಡೆದ ವಾಹನದಲ್ಲಿಯೇ ಸಾಗಾಣಿಕೆ ಮಾಡಬೇಕು. ಈ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅಧಿಕೃತ ಕಸಾಯಿಖಾನೆಗಳಿರುವ ಬಗ್ಗೆ ಚರ್ಚಿಸಿ, ಮಹಾನಗರ ಪಾಲಿಕೆ, ಪುರಸಭೆ ಮತ್ತು ನಗರಸಭೆ ಮುಖ್ಯಾಧಿಕಾರಿಗಳು ಮಾಹಿತಿ ಸಂಗ್ರಹಿಸುವ ಕುರಿತು ಕ್ರಮವಹಿಸುವಂತೆ ಸೂಚಿಸಿದರು.
ಕೋಳಿ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕೆರೆ ಅಂಗಳದಲ್ಲಿ ಬಿಸಾಡುವ ಕೋಳಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡುವುದು ಮತ್ತು ಈ ಬಗ್ಗೆ ಸಾರ್ವಜನಿಕ ಸ್ಥಳದಲ್ಲಿರುವ ಸಿಸಿ ಕ್ಯಾಮೆುರಾ ಪರಿಶೀಲಿಸಿ ತ್ಯಾಜ್ಯ ಹಾಕುವವರಿಗೆ ದಂಡ ಹಾಕುವಂತೆ ಸೂಚಿಸಿದರಲ್ಲದೆ ತುಮಕೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಜಯಣ್ಣ, ಡಿಡಿಪಿಐ ನಂಜಯ್ಯ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರು ಹಾಜರಿದ್ದರು.
Comments are closed.