ಕುಣಿಗಲ್: ನಾಡಪ್ರಭು ಕೆಂಪೇಗೌಡರನ್ನು ಕೇವಲ ಪಾಳೆಗಾರರನ್ನಾಗಿ ನೋಡುವ ಮನೋಭಾವ ಬದಲಾಗಬೇಕು, ಅವರೊಬ್ಬರು ಸಾಮ್ರಾಟರಿಗೆ ಸಮಾನವಾಗಿ ಆಡಳಿತ ನಡೆಸಿದ ಮಹಾಪುರುಷ ಎಂದು ಕಿತ್ತನಾಗಮಂಗಲ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಎಲ್ಲರನ್ನು ಸಮಾನವಾಗಿ ನೋಡಿ ನಾಡಪ್ರಭುವಾಗಿದ್ದಾರೆ. ಎಲ್ಲಾ ವರ್ಗದ ಜನತೆಗೆ ಪ್ರಾತನಿಧ್ಯ ನೀಡಿದರೂ ಸ್ವಾರ್ಥಕ್ಕಾಗಿ ಒಕ್ಕಲಿಗರೆ ಒಂದು ಪೇಟೆ ನಿರ್ಮಿಸಲಿಲ್ಲ. ಒಕ್ಕಲಿಗರು ನೀಡುವವರೆ ವಿನಹ ಬೇಡುವವರಲ್ಲ ಎಂಬುದನ್ನು ತಮ್ಮ ಆಡಳಿತದ ಕಾರ್ಯ ವೈಖರಿಯಿಂದ ಸಾಬೀತು ಮಾಡಿ ಇತಿಹಾಸದಲ್ಲಿ ಉಳಿದಿದ್ದಾರೆ. ಒಕ್ಕಲಿಗ ಮಹಿಳಾ ಸಂಘಟನೆಗಳು ಸಂಘ ಕಟ್ಟಿಕೊಂಡು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಸಂಘಟನೆಗೊಳ್ಳುವ ಮೂಲಕ ಜನಾಂಗದ ಮೂಲ ಪುರುಷರ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡಬೇಕು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಶಾಸಕ ಡಾ.ರಂಗನಾಥ್ ಮಾತನಾಡಿ, ಸುಮಾರು ಐನೂರು ವರ್ಷಗಳ ಹಿಂದೆ ಯಾವುದೇ ನಕ್ಷೆ, ಯೋಜನೆ ಇಲ್ಲದೆ ವ್ಯವಸ್ಥಿತವಾಗಿ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲಾ ವರ್ಗದವರಿಗೂ ತಮ್ಮ ಆಡಳಿತದಲ್ಲಿ ಪ್ರಾತಿನಿಧ್ಯ ನೀಡಿ ಮನ್ನಣೆ ನೀಡಿದ್ದ ಕೆಂಪೇಗೌಡರ ಆಡಳಿತ, ಆದರ್ಶ ನಿಜಕ್ಕೂ ಇಂದಿನವರಿಗೆ ಮಾರ್ಗದರ್ಶನವಾಗಿದೆ. ಬೆಂಗಳೂರು ಕಡೆಗೆ ಇಂದು ಜಗತ್ತೆ ತಿರುಗಿ ನೋಡುವಂತಾಗಿದೆ. ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರ ಅಗಾದವಾಗಿ ಬೆಳೆಯುತ್ತಿರುವ ಕಾರಣ ಮುಂದಿನ 25 ವರ್ಷಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಬಳಕೆ ಶೂನ್ಯ ಮಟ್ಟಕ್ಕೆ ಬರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಪ್ರಜ್ಞಾವಂತ ವಿದ್ಯಾವಂತರನ್ನಾಗಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ, ತೋಟಕಾರಿಕೆ, ಹೈನುಗಾರಿಕೆ, ತೆಂಗಿನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ನಾಲ್ವರು ಮಹಿಳಾ ಉದ್ದಿಮೆದಾರರರನ್ನು, ಹತ್ತಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಎಲ್.ಎನ್.ಮುಕುಂದರಾಜ್ ಮುಖ್ಯಭಾಷಣ ಮಾಡಿದರು. ತಹಶೀಲ್ದಾರ್ ಮಹಾಬಲೇಶ್ವರ್, ತಾಪಂ ಇಒ ಜೋಸೇಫ್, ಡಿವೈಎಪಿ ಲಕ್ಷ್ಮೀಕಾಂತ, ಸಿಪಿಐ ಅರುಣ ಸಾಲಂಕಿ, ಬಿಇಒ ಬೊರೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಟಿಎಚ್ಒ ಮರಿಯಪ್ಪ, ಕಸಾಪ ಅಧ್ಯಕ್ಷ ಡಾ.ಕಪಿನಿಪಾಳ್ಯ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ, ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್, ಹುತ್ರಿದುರ್ಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲೇಶ, ಪುರಸಭೆ ಸದಸ್ಯರು, ಒಕ್ಕಲಿಗ ಸಂಘದ ಪದಾಧಿಕಾರಿಗಳು, ಒಕ್ಕಲಿಗ ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹುತ್ರಿದುರ್ಗ ಕೋಟೆಯಿಂದ ತರಲಾಗಿದ್ದ ಕೆಂಪೇಗೌಡರ ಜ್ಯೋತಿಯನ್ನು ಪ್ರವಾಸಿ ಮಂದಿರದಿಂದ ಆಕರ್ಷಕ ಸ್ಥಬ್ದಚಿತ್ರದೊಂದಿಗೆ ಜನಪದ ಕಲಾ ತಂಡಗಳೊಂದಿಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
Comments are closed.