ಕೆಂಪೇಗೌಡರ ದೂರದೃಷ್ಟಿ ಅನುಕರಣೀಯ

ನಾಡಪ್ರಭುಗಳ ಬಗ್ಗೆ ಯುವ ಪೀಳಿಗೆ ತಿಳಿಯಲಿ: ಜಿಲ್ಲಾಧಿಕಾರಿ

153

Get real time updates directly on you device, subscribe now.


ತುಮಕೂರು: ನಾಡಪ್ರಭು ಕೆಂಪೇಗೌಡರ ಆದರ್ಶ, ಜನಪರ ಆಡಳಿತ ಹಾಗೂ ನಗರ ನಿರ್ಮಾಣದಲ್ಲಿದ್ದ ದೂರದೃಷ್ಟಿ ಅಂಶಗಳನ್ನು ಇಂದಿನ ಯುವ ಪೀಳಿಗೆ ಅರಿಯಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಬೆಂಗಳೂರು ನಗರದಲ್ಲಿ 23 ಪೇಟೆ ನಿರ್ಮಿಸಿ ಅಲ್ಲಿ ಜನರು ವ್ಯಾಪಾರ ವಹಿವಾಟು ಮಾಡಲು ಅನುಕೂಲ ಕಲ್ಪಿಸಿ ಕೊಡುವ ಮೂಲಕ ಬೆಂಗಳೂರಿನ ಆರ್ಥಿಕ ವ್ಯವಸ್ಥೆಗೆ ಬುನಾದಿ ಹಾಕಿಕೊಟ್ಟರು ಎಂದು ಹೇಳಿದರು.

ಕೆಂಪೇಗೌಡರು ಬೆಂಗಳೂರಿನಲ್ಲಿ ಒಟ್ಟು 2300 ಕೆರೆ ನಿರ್ಮಿಸಿದ್ದರು. ಈ ಕೆರೆಗಳ ವೈಶಿಷ್ಟ್ಯವೆಂದರೆ ಒಂದು ಕೆರೆ ತುಂಬಿದರೆ ಆ ಕೆರೆಯ ನೀರು ಮತ್ತೊಂದು ಕೆರೆಗೆ ಹೋಗುವ ರೀತಿಯಲ್ಲಿ ಅಂದಿನ ಕಾಲದಲ್ಲಿಯೇ ನಿರ್ಮಿಸಿದ್ದರು. ನಗರೀಕರಣದಿಂದ ಕೆರೆಗಳು ನಶಿಸಿ ಹೋಗಿ ಅಲ್ಲಿ ಕಾಂಕ್ರಿಟ್ ರಸ್ತೆ, ಬಸ್ ನಿಲ್ದಾಣ ನಿರ್ಮಾಣವಾಗಿವೆ ಎಂದು ಹೇಳಿದರು.

ಆಡಳಿತ ಅನುಕೂಲಕ್ಕಾಗಿ ನಾಲ್ಕು ದ್ವಾರ ನಿರ್ಮಿಸಿದ್ದರು. ಇಂದು ಬೆಂಗಳೂರು ನಾಲ್ಕು ದ್ವಾರಗಳನ್ನು ಮೀರಿ ಬೆಳೆದು ನಿಂತಿದೆ. ಮಹಾ ನಗರದಲ್ಲಿ 1 ಕೋಟಿ 40 ಲಕ್ಷ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಪ್ರತಿದಿನ ಸಾವಿರಾರು ಜನರು ಜೀವನ ನಡೆಸುವ ಸಲುವಾಗಿ ಉದ್ಯೋಗ ಹರಸಿ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ನಗರ ಶಾಸಕರಾದ ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಗರ ನಿರ್ಮಾಣದ ಪರಿಕಲ್ಪನೆಯನ್ನು 500 ವರ್ಷಗಳ ಹಿಂದೆಯೇ ತೋರಿಸಿ ಕೊಟ್ಟಿದ್ದು, ಬೆಂಗಳೂರು ನಗರ ನಿರ್ಮಾಣಕ್ಕೆ ಈ ನಿಟ್ಟಿನಲ್ಲಿ ಅಡಿಪಾಯ ಹಾಕಿದ್ದರು. ಒಂದು ಊರಿಗೆ ಎಷ್ಟು ಕೆರೆ ಹಾಗೂ ಉದ್ಯಾನವನ ಅವಶ್ಯಕತೆವಿದೆಯೋ ಅದಕ್ಕೆ ಅನುಗುಣವಾಗಿ ಬೆಂಗಳೂರು ನಗರವನ್ನು ಸಮತೋಲನವಾಗಿ ನಿರ್ಮಿಸಿದ್ದರು. ಅವರ ಹಾದಿಯಲ್ಲಿಯೇ ನಾವು ನಗರ ನಿರ್ಮಾಣ ಮಾಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಹುಲಿಯೂರು ದುರ್ಗದ ಭಾಗಗಳು ಒಳಪಟ್ಟಿದ್ದವು. ಸಮುದ್ರ ಮಟ್ಟದಿಂದ 900 ಅಡಿಗಳ ಎತ್ತರದಲ್ಲಿ ಬೆಂಗಳೂರನ್ನು ನಿರ್ಮಾಣ ಮಾಡಿ ಯಾವುದೇ ಹವಾಮಾನ ವೈಪರಿತ್ಯಗಳಿಗೆ ಜಗ್ಗದಂತ ನಗರ ನಿರ್ಮಾಣ ಮಾಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಒಕ್ಕಲಿಗ ಸಮುದಾಯದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!