ಬೆಸ್ಕಾಂ ಬೇಜವಾಬ್ದಾರಿಗೆ ರೈತರ ಆಕ್ರೋಶ- ಸಮರ್ಪಕ ವಿದ್ಯುತ್ ಗೆ ಆಗ್ರಹ

ಕರೆಂಟ್ ಕಣ್ಣಾಮುಚ್ಚಾಲೆಗೆ ಮೋಟಾರ್ ಭಸ್ಮ

253

Get real time updates directly on you device, subscribe now.


ಕುಣಿಗಲ್: ಒಂದು ಗಂಟೆ ಕರೆಂಟ್ ಕೊಡ್ತಾರೆ, ಅದನ್ನು ಬಿಟ್ಟು ಬಿಟ್ಟು ಕೊಡೊದ್ರಿರಿಂದ ಎರಡು ಮೋಟಾರ್ ಸುಟ್ಟಿದೆ, ಮೊದಲೆ ಸಾಲದಲ್ಲಿದ್ದೇನೆ, ರಿಪೇರಿಗೆ ದುಡ್ಡು ಎಲ್ಲಿ ತರಲಿ, ಟಿಸಿ ಸುಟ್ಟರೆ ನಾಲ್ಕರಿಂದ ಐದು ಸಾವಿರ ಕೊಡ್ದೆ ರಿಪೇರಿ ಮಾಡಲ್ಲ, ಲೈನ್ ಜಂಪ್, ತೆಗೆದು ಹಾಕಲು ಲೈನ್ಮನ್ ಗೆ ಐನೂರು ಕೊಡಬೇಕು, ಎಲ್ಲಾ ಲೂಟಿಗೆ ನಿಂತಿದ್ದಾರೆ, ಹೇಳೋರಿಲ್ಲ ಕೇಳೋರಿಲ್ಲ ಎಂದು ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ನೇತೃತ್ವದಲ್ಲಿ ಬೆಸ್ಕಾಂ ಕುಣಿಗಲ್ ವಿಭಾಗದ ಇಇ ಕಚೇರಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಪ್ರತಿಭಟನಾ ಸಭೆಗೆ ಬೆಸ್ಕಾಂ ಇಇ ಪುರುಷೋತ್ತಮ್ ಆಗಮಿಸುತ್ತಿದ್ದಂತೆ ಆಕ್ರೋಶ ಹೊರಹಾಕಿದ ರೈತರು ಲಕ್ಷ, ಲಕ್ಷ ಸಂಬಳ ತಗೊಂಡ್ರೂ ಬಡ ರೈತರ ಸುಲಿಗೆ ಮಾಡುತ್ತೀರಾ, ಹುಲಿಯೂರು ದುರ್ಗದಲ್ಲಿ ಇಲಾಖಾಧಿಕಾರಿಗಳಿಂತ ಖಾಸಗಿಯವ ಸುದರ್ಶನ್, ಲೈನ್ ಮೆನ್ ಗಳ ಹಗಲು ದರೋಡೆಯಾಗಿದೆ, ಏನು ಮಾಡೋದು, ಶಾಸಕರು, ಮಾಜಿ ಶಾಸಕರ ಗಮನಕ್ಕೆ ತಂದ್ರೂ ಯಾರೂ ಗಮನಹರಿಸುತ್ತಿಲ್ಲ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, 7 ಗಂಟೆ ಮೂರು ಫೇಸ್ ಕರೆಂಟ್ ಕೊಡಬೇಕು, 32 ಕ್ರಷರ್ನವರಿಗೆ ದಿನಕ್ಕೆ 23 ಗಂಟೆ ಕರೆಂಟ್ಕೊಡ್ತೀರಾ, ರೈತರಿಗೆ ಕೊಡೊಲ್ಲ, ಕಲ್ಲು ಜಲ್ಲಿಯನ್ನು ಹೊಟ್ಟೆಗೆ ತಿನ್ತೀರಾ, ಸರ್ಕಾರದ ಲೋಪವೂ ಇದೆ, ಕ್ರಮೇಣ ಬೆಸ್ಕಾಂ ಖಾಸಗಿಕರಣ ಮಾಡಿ ರೈತರು ದುಡ್ಡುಕೊಟ್ಟು ಕರೆಂಟ್ ಪಡೆಯುವ ಸ್ಥಿತಿ ಮಾಡಲು ಹುನ್ನಾರ, ರೈತರಿಗೆ 28 ಸಾವಿರ ಕಟ್ಟಿಸಿಕೊಂಡು 25 ಕೆವಿ ಟಿಸಿ ಅಂತ ಹಾಕಿದ್ದೀರಾ, 15 ಕೆವಿ ವಿದ್ಯುತ್ ತಡೆಯಲ್ಲ, ಎಲ್ಲಾ ನಕಲಿ ಕಂಪನಿಯ ಟಿಸಿಕೊಟ್ಟು ರೈತರ ವಂಚನೆ ಮಾಡುತ್ತೀರಾ, ರೈತರಿಗೆ 7 ಗಂಟೆಗೆ ಕರೆಂಟ್ ಕೊಡಲಾಗಿದೆ ಎಂದು ದಾಖಲೆ ನಿರ್ವಹಿಸಿ ಕಾರ್ಖಾನೆಯವರಿಗೆ ನೀಡುತ್ತೀರಾ, ಸರ್ಕಾರ ರೈತರ ಪಾಲಿನ ಕರೆಂಟ್ ಬಿಲ್ ಕೊಡಲ್ವಾ ಕೊಟ್ಟಮೇಲೆ ಉಚಿತ ಎಲ್ಲಿಂದ ಬಂತು, ಅಧಿಕಾರಿಗಳು ಬಡ ರೈತರ ಶೋಷಣೆ ಮಾಡಿ ಲೂಟಿ ಹೊಡೀತಿದ್ದೀರಾ ಎಂದರು.
ಎಡೆಯೂರು ಭಾಗದ ರೈತ ಮೂರು ಎಕರೆ ಬೆಳೆ ಇಟ್ಟಿದ್ದೆ ಕರೆಂಟ್ ಸರಿಯಾಗಿ ಕೊಡದೆ ಬೆಳೆ ಕೈಕೊಡುವಂತಾಗಿದೆ, ಸಾಲ ಮಾಡಿದ್ದೇನೆ, ಸರಿಯಾಗಿ ಕರೆಂಟ್ ಕೊಡಲಿಲ್ಲ ಎಂದರೆ ನಿಮ್ಮ ಕಚೇರಿಗೆ ಬಂದು ಇಲ್ಲಿಯೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರು.
ರೈತರನ್ನು ಸಮಾಧಾನ ಮಾಡಿದ ಬೆಸ್ಕಾಂ ಇಇ, ಪೂರೈಕೆ ಸ್ಥಾವರದಲ್ಲಿ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿತ್ತು, ಇನ್ನು3- 4 ದಿನದೊಳಗೆ ಸಮಸ್ಯೆ ಬಗೆಹರಿಯಲಿದ್ದು, ಹಗಲು 4 ಗಂಟೆ, ರಾತ್ರಿ 3 ಗಂಟೆ ಮೂರು ಫೇಸ್ ವಿದ್ಯುತ್ ನೀಡಲು ಫೀಡರ್ ಪ್ರಕಾರ ವೇಳಾಪಟ್ಟಿ ನಿಗಡಿಪಡಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನೊಂದು ವಾರದೊಳಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಹೋಬಳಿ ಮಟ್ಟದ ವಿದ್ಯುತ್ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

Get real time updates directly on you device, subscribe now.

Comments are closed.

error: Content is protected !!