ಕುಣಿಗಲ್: ನಾಲ್ಕು ತಿಂಗಳ ಹೆಣ್ಣು ಮಗು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆರೋಪಿಸಿ ಖಾಸಗಿ ಆಸ್ಪತ್ರೆ ಮುಂದೆ ಮಗುವಿನ ಶವದೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಮಧ್ಯಾಹ್ನ ನಡೆಯಿತು.
ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಕೆಂಕೆರೆ ಗ್ರಾಮದ ರೈತ ದಿವಾಕರ, ಪತ್ನಿ ಅರುಣಗೆ ನಾಲ್ಕು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಬುಧವಾರ ಸ್ವಲ್ಪ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಹುಲಿಯೂರು ದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಗುರುವಾರವೂ ಇದೆ ರೀತಿ ಆದ ಕಾರಣ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆ (ಸಪ್ತಗಿರಿ ಆಸ್ಪತ್ರೆಗೆ) ಚಿಕಿತ್ಸೆಗೆ ಮಗು ಕರೆ ತಂದರು. ಮಗುವಿನ ಸ್ಥಿತಿ ಗಂಭೀರವಾದ್ದರಿಂದ ಆಸ್ಪತ್ರೆ ಸಿಬ್ಬಂದಿ ವೈದ್ಯರಿಗೆ ಮಾಹಿತಿ ನೀಡಿ ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ನೀಡಿ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸಾಗಿಸಲು ಸಿದ್ಧತೆ ನಡೆಸಿ ಮಗು ಪೋಷಕರಿಗೆ ನೀಡಿ ಕರೆದೊಯ್ಯಲು ಹೇಳಿದರು. ಈ ವೇಳೆಗೆ ಮಗು ಮೃತಪಟ್ಟಿತ್ತು. ಮಗುವಿನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಎಂದು ಆರೋಪಿಸಿ ಆಸ್ಪತ್ರೆ ಆವರಣದಲ್ಲಿ ಮೃತ ದೇಹದೊಂದಿಗೆ ಪ್ರತಿಭಟನೆ ಆರಂಭಿಸಿ ನಿರ್ಲಕ್ಷ್ಯಕ್ಕೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಿಪಿಐ ಗುರುಪ್ರಸಾದ್ ಅವರೊಂದಿಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ಪೊಲೀಸರು ಯಾವುದೆ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು. ಪೊಲೀಸರು ದೂರು ನೀಡುವಂತೆ ಮನವಿ ಮಾಡಿದರೂ ಲೆಕ್ಕಿಸದೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅಸ್ಪತ್ರೆ ಮುಖ್ಯಸ್ಥ ಡಾ.ಕುಮಾರ್ ಅವರೊಂದಿಗೆ ಆಗಮಿಸಿದ ಡಿವೈಎಸ್ಪಿ ಲಕ್ಷ್ಮೀಕಾಂತ, ಪ್ರತಿಭಟನಾನಿರತರೊಂದಿಗೆ ಚರ್ಚಿಸಿದರು. ಆಸ್ಪತ್ರೆ ಮುಖ್ಯಸ್ಥ ಡಾ.ಕುಮಾರ್, ಮಗುವಿಗೆ ನೀಡಲಾಗಿರುವ ಚಿಕಿತ್ಸಾ ವಿವರಗಳನ್ನು ವಿವರಿಸಿ ಆಸ್ಪತ್ರೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಮನವರಿಕೆ ಮಾಡಿ ಕಳಿಸಿಕೊಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಗೊಂಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಾ.ಕುಮಾರ್, ಮಗು ಆಸ್ಪತ್ರೆಗೆ ಕರೆತಂದಾಗಲೆ ಮಗುವಿನ ಆಮ್ಲಜನಕ ಮಟ್ಟ ತೀರಾ ಕುಸಿದಿತ್ತು. ಸಿಬ್ಬಂದಿ ಮನವರಿಕೆ ಮಾಡಿಕೊಟ್ಟು ಚಿಕಿತ್ಸೆ ನೀಡಿದ್ದಾರೆ. ಯಾವುದೇ ಲೋಪ ಎಸಗಿಲ್ಲ ಎಂದರು.
Comments are closed.