ಅಕ್ಕಿ ಕೊಟ್ಟೇ ಕೊಡುತ್ತೇವೆ: ಪರಮೇಶ್ವರ್

ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಸಲ್ಲದು

363

Get real time updates directly on you device, subscribe now.


ಕೊರಟಗೆರೆ: ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು, ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅಕ್ಕಿ ಕೊಟ್ಟೇ ಕೊಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಅಕ್ಕಿ ಕೊಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 5 ಕೆಜಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಕೇವಲ ಮೂರು ತಿಂಗಳ ಕಾಲ ಮಾತ್ರ ದುಡ್ಡು ಕೊಡುತ್ತೇವೆ. ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ ಅಕ್ಕಿ ಬದಲಿಗೆ ದುಡ್ಡು ಕೊಡುವುದನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ಆದರೆ ನಾವು ದುಡ್ಡು ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ, ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್ ಸಿಐನಲ್ಲಿ 7 ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಖಾಸಗಿಯವರಿಗೆ ಮಾರುತ್ತಿದ್ದಾರೆ. ನಮಗೆ ರಾಜಕೀಯ ಕಾರಣಕ್ಕೋಸ್ಕರ ಅಕ್ಕಿ ಕೊಡುತ್ತಿಲ್ಲ ಎಂದು ದೂರಿದರು.

10 ಕೆಜಿ ಅಕ್ಕಿಗೆ ದುಡ್ಡು ಹಾಕಬೇಕು ಎಂಬ ಬಿಜೆಪಿಯವರ ವಾದ ಸರಿಯಿಲ್ಲ. ಬಿಜೆಪಿಯವರಿಗೆ ಇದರ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.
ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿಯವರು ಸಲಹೆ ನೀಡಿದಕ್ಕೆ ದುಡ್ಡು ತಿನ್ನೋಕಾಗುತ್ತಾ ಎಂದು ಸಿದ್ದರಾಮಯ್ಯ ಅವರು ಹೇಳಿದ್ದ ವಿಚಾರವನ್ನು ಸುದ್ದಿಗಾರರು ಪ್ರಸ್ತಾಪಿಸಿದಾಗ, ಇದು ಪ್ರೆಸ್ಟೀಜ್ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು, ಪ್ರೆಸ್ಟೀಜ್ ನಿಂದ ಹೊಟ್ಟೆ ತುಂಬಲ್ಲ. ಬಿಜೆಪಿಯವರೇ ಹಣ ಕೊಡಿ ಎಂದು ಬೊಬ್ಬೆಯೊಡೆದರು. ಈಗ ಏಕಾಏಕಿ ಟೀಕೆ ಮಾಡುತ್ತಿದ್ದಾರೆ. ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಸ್ನೇಹಿತರಲ್ಲಿ ಮನವಿ ಮಾಡುತ್ತೇವೆ ಎಂದರು.

ತ್ಯಾಗ-ಬಲಿದಾನದ ಸಂಕೇತ
ಬದ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತ, ಎಲ್ಲರಿಗೂ ಶುಭಕಾಮನೆ ಹೇಳಿದ್ದೇನೆ. ಭಾರತ ಶಾಂತಿ ನಂಬಿದ ದೇಶ, ಸಂವಿಧಾನದಲ್ಲೇ ಅದನ್ನು ಅಳವಡಿಸಿಕೊಂಡಿದ್ದೇವೆ ಎಂದರು.
ಎಲ್ಲೋ ಒಂದು ಕಡೆ ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ, ಕಾಂಗ್ರೆಸ್ ಜಾತ್ಯಾತೀತವಾದ ಪಕ್ಷ, ಹಾಗಾಗಿ ಅವರು ನಮ್ಮ ಜತೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ, ಅಭಿವೃದ್ಧಿ ಜೊತೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದೆ. ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ಯಾರ ಮೇಲೂ ದ್ವೇಷ ಸಾಧಿಸಲು ಹೋಗುವುದಿಲ್ಲ, ಶಾಂತಿ ಕಾಪಾಡುವುದು ನಮ್ಮ ಆದ್ಯತೆ ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!