ಮೇಘಗಳ ಆಲಯದಲ್ಲೊಂದು ರಾಗಮಾಧುರ್ಯ ಸಂಸ್ಕೃತಿ

ಮೋಡಗಳ ನಿವಾಸ, ಬುಡಕಟ್ಟು ಜನಾಂಗದ ಆವಾಸ

214

Get real time updates directly on you device, subscribe now.

ಬೆಳಗಿನ ಐದು ಗಂಟೆ ಸಮಯ. ಜಿಗಣಿಯ ಕಲ್ಲುಬಾಳು ಗ್ರಾಮದಲ್ಲಿರುವ ವಿವೇಕಾನಂದ ವಿದ್ಯಾಶಾಲೆಯ ಲಲಿತಾ ದೀದಿಯವರಿಂದ ಕರೆಬಂತು. ಕುತೂಹಲದಿಂದ ಕರೆ ಸ್ವೀಕರಿಸಿ ದಾಗ “ಕೂಡಲೇ ವೀಡಿಯೋ ಕಾಲ್ ಮಾಡಿ, ನಿಮಗೊಂದು ಅಚ್ಚರಿಯ ಜಗತ್ತನ್ನು ತೋರಿಸುತ್ತೇನೆ” ಎಂದರು. ಅತ್ಯುತ್ಸಾಹದಿಂದ ಕೂಡಲೇ ವಿಡಿಯೋ ಕಾಲ್ ಮಾಡಿದೆ. ಅಲ್ಲಿ ನಾನು ಕಂಡ ಅದ್ಭುತ ಜಗತ್ತನ್ನು ನಿಮಗೂ ಪರಿಚಯಿಸುತ್ತಿದ್ದೇನೆ.

ಮೋಡಗಳ ನಿವಾಸ, ಬುಡಕಟ್ಟು ಜನಾಂಗದ ಆವಾಸ

ನಮಗೆಲ್ಲಾ ‘ಕಸ್ತೂರಿ ನಿವಾಸ’ ಗೊತ್ತು. ಆದರೆ ‘ಮೋಡಗಳ ನಿವಾಸ’ ಯಾರಿಗೂ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಅದು ನಮ್ಮ ಈಶಾನ್ಯದ ಸಪ್ತ ಸಹೋದರಿ ರಾಜ್ಯಗಳಲ್ಲೊಂದಾದ ಮೇಘಾಲಯ ಪದದ ಅರ್ಥ. ಮೇಘಾಲಯ ರಾಜ್ಯದ ರಾಜಧಾನಿಯಾದ ಶಿಲ್ಲಾಂಗ್ ಅನ್ನು ಪೂರ್ವದ ಸ್ಕಾಟ್ಲ್ಯಾಂಡ್ ಎಂದು ಕರೆಯುತ್ತಾರೆ. ಅಂತಹ ಭವ್ಯ ಪ್ರಕೃತಿ ಸೌಂದರ್ಯ ಇಲ್ಲಿನದು. ಈ ರಾಜ್ಯದ ಇನ್ನೊಂದು ಹೆಚ್ಚುಗಾರಿಕೆ ಎಂದರೆ, ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ  ಇರುವುದು ಇಲ್ಲಿಯೇ. ಇಲ್ಲಿರುವ ಖಾಸಿಹಿಲ್ಸ್ ನಲ್ಲೆ ದಾಖಲೆಯ ಮಳೆ ಬೀಳುವ ಚಿರಾಪುಂಜಿ, ಮಾಸಿನ್ರಾಮ್ ಇರುವುದು. ಇಲ್ಲಿನ ಸರಾಸರಿ  ವಾರ್ಷಿಕ ಮಳೆ ಪ್ರಮಾಣ 1200 ಸೆಂಟಿಮೀಟರ್ ಗೂ ಅಧಿಕ. ಆದ್ದರಿಂದ ಮೇಘಾಲಯವು ಭೂಮಿ ಮೇಲಿನ ಅತ್ಯಂತ ಹೆಚ್ಚು ತೇವಾಂಶಭರಿತ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಜನವರಿ 21, 1972 ರಲ್ಲಿ ಸ್ವಾಯತ್ತ ರಾಜ್ಯವಾಗಿ ಉದಯವಾದ ಈ ರಾಜ್ಯದ ಭೂಪ್ರದೇಶ, ಅದಕ್ಕೂ ಮೊದಲು ಅಸ್ಸಾಂ ರಾಜ್ಯದ ತೆಕ್ಕೆಯಲ್ಲಿತ್ತು.

ಖಾಸಿ ಹಿಲ್ಸ್, ಗಾರೊ ಹಿಲ್ಸ್ ಹಾಗೂ ಜೈನ್ ತಿಯಾಗಳ ಹಿಲ್ಸ್- ಇವು ಮೇಘಾಲಯದ ಮೂರು ಮುಖ್ಯ ಜಿಲ್ಲೆಗಳು. ಖಾಸಿ, ಗಾರೊ ಹಾಗೂ ಜೈನ್ ತಿಯಾಗಳ  ಬುಡಕಟ್ಟು ಜನಾಂಗಗಳು ತಮ್ಮ ತಮ್ಮ ಸಾಮ್ರಾಜ್ಯವನ್ನು ಈ ಪ್ರಾಂತ್ಯಗಳಲ್ಲಿ ಸ್ಥಾಪಿಸಿ ಆಳ್ವಿಕೆ ಮಾಡಿದ್ದವು. ಇವುಗಳಲ್ಲಿ ಖಾಸಿ ಜನಾಂಗವೇ ಅಧಿಕ ಜನಸಂಖ್ಯೆಯದ್ದಾಗಿತ್ತು. 19ನೇ ಶತಮಾನದಲ್ಲಿ ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ ಮೇಘಾಲಯ ಸಹ ಅವರ ಅಧೀನದಲ್ಲಿತ್ತು. ಅದರ ಪರಿಣಾಮ ಮತ್ತು ಆನಂತರದ ಕ್ರಿಶ್ಚಿಯನ್ ಮಿಷನರಿಗಳ ನಿರಂತರ ಧರ್ಮಪ್ರಸಾರದ ಫಲವಾಗಿ ಇಂದು ಮೇಘಾಲಯದ ಜನಸಂಖ್ಯೆಯಲ್ಲಿ ಶೇಕಡಾ 70 ಕ್ಕೂ ಹೆಚ್ಚು ಭಾಗ ಕ್ರಿಶ್ಚಿಯನ್ ಮಯವಾಗಿದೆ. ಇವರ ಮತ ಪರಿವರ್ತನೆಗೆ ಸಾಕ್ಷಿಯಾಗಿ ಇಂದಿಗೂ ಅಲ್ಲಿನ ಗುಹೆಗಳಲ್ಲಿ ಪುರಾತನ ಶಿವ, ದುರ್ಗೆಯರ ಮೂರ್ತಿಗಳನ್ನು ಕಾಣಬಹುದಾಗಿದೆ. ಆದರೂ ಜೈನ್ ತಿಯಾಗಳ ಜನಾಂಗದಲ್ಲಿ ಶಿವರಾತ್ರಿಯನ್ನು ಆಚರಿಸುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ.

ಮಾತೃಪ್ರಧಾನ ಸಂಸ್ಕೃತಿ, ಅಪರಿಮಿತ ಹೆಣ್ಣಿನ ಧೀಶಕ್ತಿ

ಖಾಸಿ ಜನಾಂಗ ಮೇಘಾಲಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿ ಖಾಸಿ ಭಾಷೆ ಇಲ್ಲಿನ ಪ್ರಮುಖ ಭಾಷೆಯಾಗಿದೆ. ಗಾರೊ ಭಾಷೆಯ ಪ್ರಭಾವವೂ ಸಾಕಷ್ಟಿದೆ. ಆದರೆ ಈ ರಾಜ್ಯದ ಅಧಿಕೃತ ಭಾಷೆ ಇಂಗ್ಲಿಷ್. ಖಾಸಿಗಳ ಜನಸಂಖ್ಯೆ ಸುಮಾರು 9 ಲಕ್ಷ. ಇವರ ಜೀವನ ಪದ್ಧತಿ ಕೂಡ ತುಂಬಾ ವಿಶಿಷ್ಟವಾಗಿದೆ. ಪುರಾತನ ಜೀವನಪದ್ಧತಿಯಾದ ‘ಮಾತೃಪ್ರಧಾನ ಸಂಸ್ಕೃತಿ ‘(ಮ್ಯಾಟ್ರಿಲೈನಿಯಲ್) ಇವರದ್ದಾಗಿದೆ. ಮನೆತನದ ಆಸ್ತಿ ಕುಟುಂಬದ ಕಿರಿಯ ಮಗಳ ಪಾಲಾಗಿ, ಇಡೀ ಕುಟುಂಬ ನಿರ್ವಹಣೆಯ ಜವಾಬ್ದಾರಿ ಆಕೆಯದ್ದಾಗಿರುತ್ತದೆ. ಕುಟುಂಬದ ಎಲ್ಲಾ ತೀರ್ಮಾನಗಳು ಹೆಣ್ಣಿನದ್ದೆ ಆಗಿರುತ್ತವೆ.

ದೇಶದ ಉಳಿದೆಡೆ ಮದುವೆಯಾದ ನಂತರ ಹೆಣ್ಣು ತವರು ಮನೆಯಿಂದ ಗಂಡನ ಮನೆಗೆ ಬಂದು ನೆಲೆಸುವುದು ರೂಢಿ. ಆದರೆ ಇಲ್ಲಿ ಮದುವೆಯಾದ ಗಂಡು ತನ್ನ ಮನೆಯನ್ನು ತ್ಯಜಿಸಿ ಹೆಣ್ಣಿನ ಮನೆಗೆ ಬಂದು ನೆಲೆಸುವ ಸಂಪ್ರದಾಯವಿದೆ.
ಇತರೆಡೆಯಲ್ಲಿಯಂತೆ ‘ಪುರುಷ ಅಹಂ’ಎಂಬುದು ಇಲ್ಲಿಲ್ಲ. ‘ನಾವು ಗಂಡಸರಾಗಿ ಹೆಣ್ಣುಮಕ್ಕಳ ಮಾತನ್ನೇಕೆ ಕೇಳಬೇಕು?’, ‘ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ’,
‘ನಾನೇಳಿದಂತೆ ಕೇಳು, ಎದುರಾಡಬೇಡ’- ಇಂತಹ ಯಾವ ಕೊಂಕು ಮಾತುಗಳಿಗೂ ಇಲ್ಲಿ ಆಸ್ಪದವಿಲ್ಲ.

ಹೆಂಡತಿಯಾದವಳು ಒಂದು ಕಚೇರಿಯ ಮುಖ್ಯಸ್ಥೆ ಅಥವಾ ಒಂದು ಶಾಲೆಯ ಪ್ರಿನ್ಸಿಪಾಲ್ ಆಗಿ , ಅದೇ ಕಚೇರಿ ಅಥವಾ ಶಾಲೆಯಲ್ಲಿ ಆಕೆಯ ಗಂಡ ಕಾರಿನ ಡ್ರೈವರ್ ಅಥವಾ ಕಸಗುಡಿಸುವ ಕೆಲಸ ಮಾಡುವ ಉದಾಹರಣೆ ಎಲ್ಲಾದರೂ ನೋಡಿದ್ದೀರಾ? ನಮ್ಮೆಲ್ಲರ ಪುರುಷಹಂಕಾರ ಇದಕ್ಕೆ ಅಡ್ಡಿಯಾಗುತ್ತದೆ ಅಲ್ಲವೆ? ಆದರೆ ಇಲ್ಲಿ ಅದು ಮಾಮೂಲಿ ವಿಚಾರ. ಅನೇಕ ಕಚೇರಿ, ಶಾಲೆಗಳಲ್ಲಿ ಇಂತಹ ಉದಾಹರಣೆಗಳನ್ನು ಹೇರಳವಾಗಿ ನಾವು ಕಾಣಬಹುದು. ಹಾಗಾಗಿ ಇಲ್ಲಿನ ಗಂಡು-ಹೆಣ್ಣಿನ ಅನುಪಾತ ಕೂಡ ದೇಶದ ಇತರೆಡೆಗಿಂತ ವಿಭಿನ್ನವಾಗಿದೆ.1981ರ ಜನಗಣತಿಯಂತೆ 1000 ಪುರುಷರಿಗೆ 954 ಇದ್ದ ಮಹಿಳೆಯರ ಸಂಖ್ಯೆ 2001ರ ವೇಳೆಗೆ 975 ಕ್ಕೆ ಏರಿಕೆ ಕಂಡಿತ್ತು. ರಾಷ್ಟ್ರೀಯ ಸರಾಸರಿ ಪ್ರಮಾಣ 933 ಆಗಿತ್ತು. ಇದೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಸಿಳ್ಳೆ ಸಂಗೀತದ ಸಿಳ್ಳೆಹಳ್ಳಿ(ವಿಸ್ಲಿಂಗ್ ವಿಲೇಜ್)

ಮೇಘಾಲಯಕ್ಕೆ ಭೇಟಿ ಕೊಡುವ ಸೂಕ್ತ ಸಮಯ ಮಾರ್ಚ್ ನಿಂದ ಜುಲೈ. ನೀವೇನಾದರೂ ಮೇಘಾಲಯಕ್ಕೆ ಪ್ರವಾಸ ಕೈಗೊಂಡು, ಅಲ್ಲಿನ ಕೊಂಗ್ ತಾಂಗ್ ಎಂಬ ಹಳ್ಳಿಗೆ  ಭೇಟಿಕೊಟ್ಟು, ನಮ್ಮಲ್ಲಿಯಂತೆ ಸಿಳ್ಳೆಯಲ್ಲಿ ಹಾಡು ಹಾಡುವ ‘ಸಿಳ್ಳೆ ಸಂಗೀತ’ವನ್ನು ಬಾಯಿಂದ ಹೊರಡಿಸುತ್ತಾ, ನಿಸರ್ಗ ಸೌಂದರ್ಯ ಸವಿಯಲು ಹೊರಟರೆ, ನಿಮ್ಮ ಹಿಂದೆ ಇಡೀ ಊರಿನ ಜನರೇ ಬೆನ್ನತ್ತಿ ಬರುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ‘ಸಿಳ್ಳೆ ಸಂಗೀತ’ ಆ ಊರಿನ ಬಹುಜನರ
ನಾಮದೇಯವಾಗಿರಬಹುದು. ಸದೇಕಾಶ್ಚರ್ಯವೇ? ಹೌದು! ಈ ಊರಿನ ಎಲ್ಲಾ ಜನರ ನಾಮದೇಯ ಸಿಳ್ಳೆಯಂತ ನಾದ ಸಂಗೀತವೇ ಆಗಿದೆ. ಆದ್ದರಿಂದಲೇ  ಈ ಊರಿಗೆ ‘ವಿಸ್ಲಿಂಗ್ ವಿಲೇಜ್’ ಎಂಬ ಅನ್ವರ್ಥನಾಮವೂ ಉಂಟು. ಖಾಸಿ ಭಾಷೆಯಲ್ಲಿ ಇದನ್ನು ‘ಜಿಂಗೃವಾಯ್ ಲಾವುಬಿ’ ಎನ್ನುತ್ತಾರೆ.

ಇದು ವಿಚಿತ್ರವಾದರೂ ಸತ್ಯ.ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಿಂದ 56 ಕಿ.ಮೀ. ದೂರದ ಈ ಗ್ರಾಮದಲ್ಲಿರುವ ಸುಮಾರು 125 ಕುಟುಂಬಗಳಲ್ಲಿರುವ ಒಟ್ಟು ಜನಸಂಖ್ಯೆ 700.. ಇವರೆಲ್ಲರೂ ನಿಸರ್ಗ ದೇವಿಯ ಮಕ್ಕಳು. ಇವರಿಗೆ ನಿಸರ್ಗ ದೇವಿಯೇ ದೇವತೆ. ಹಾಗಾಗಿ ಪರಿಸರದಲ್ಲಿರುವ ನದಿ- ಝರಿ, ಪ್ರಾಣಿ-ಪಕ್ಷಿ, ಜೇನ್ನೊಣ- ಜೀರುಂಡೆ ಧನಿಯ ಅನುಕರಿಸಿ, ಸಿಳ್ಳೆ ಸಂಗೀತದ ರೂಪದಲ್ಲಿ ವ್ಯಕ್ತಿಗಳ ಹೆಸರುಗಳು ಸೃಷ್ಟಿಯಾಗುತ್ತವೆ. ಹಾ! ಇದು ಕೂಡ ಅಮ್ಮನದೇ ಆಯ್ಕೆ. ನಮ್ಮಲ್ಲಿ ಹೆಸರಿನ ಮುಂದೆ ಅಪ್ಪನ ಹೆಸರು ಅಥವಾ ವಂಶದ ಹೆಸರು ಸೇರಿಕೊಳ್ಳುವಂತೆ, ಅಲ್ಲಿ ವ್ಯಕ್ತಿಯ ಹೆಸರುಗಳ ಮುಂದೆ ಅಮ್ಮನ ಹೆಸರು ಸಿಳ್ಳೆ ಸಂಗೀತದ ರೂಪದಲ್ಲಿ ಸೇರಿಕೊಂಡಿರುತ್ತದೆ. ಆದರೆ ಒಬ್ಬರ ಹೆಸರಿನಂತೆ ಮತ್ತೊಬ್ಬರ ಹೆಸರು ಇರುವುದಿಲ್ಲ. ಎಲ್ಲವೂ ಭಿನ್ನ ಭಿನ್ನ. ಹುಟ್ಟಿನಿಂದ ಆರಂಭಗೊಂಡ ಹೆಸರು ಸಾಯುವವರೆಗೂ ಉಳಿದಿರುತ್ತದೆ. ಸಾವಿನೊಂದಿಗೆ ಆ ಹೆಸರು ಅಳಿಯುತ್ತದೆ. ಮತ್ಯಾರಿಗೂ ಆ ಹೆಸರು ಪುನರಾವರ್ತಿತವಾಗುವುದಿಲ್ಲ.

ಕಾಡಿನ ಮಕ್ಕಳ ಹಾಡು -ಪಾಡು

ಈ ಜನರ ಮುಖ್ಯ ಕಸುಬು ವ್ಯವಸಾಯ ಹಾಗೂ ಕಾಡಿನ ಉತ್ಪನ್ನಗಳ ಸಂಗ್ರಹ. ಇತ್ತೀಚೆಗೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿ, ಪಟ್ಟಣಗಳಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಇವರಿಗೆ ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಇರುವುದರಿಂದ ಇವರು ಬಹಳ ಗಟ್ಟಿಗರು. ಗಂಡಸರು ರಸ್ತೆ ನಿರ್ಮಿಸುವ ಕೆಲಸ, ಹತ್ತಿರದ ಪಟ್ಟಣಗಳಿಗೆ ತೆರಳಿ ಬೇರೆಬೇರೆ  ಕೆಲಸಗಳಲ್ಲಿ ತೊಡಗಿಸಿಕೊಂಡರೆ, ವ್ಯವಸಾಯದ ಸಂಪೂರ್ಣ ಜವಾಬ್ದಾರಿ ಮಹಿಳೆಯರೇ ನಿಭಾಯಿಸುತ್ತಾರೆ.

ಕಾಡಿನ ಮಧ್ಯೆ ಈ ಊರು ಇರುವುದರಿಂದ ಇವರ ಮನೆಗಳು ಸಂಪೂರ್ಣವಾಗಿ ಬಿದುರು, ಮರ, ಗರಿ ಹಾಗೂ ಗರಿಗಳಿಂದ ಹೆಣೆದ ಚಾಪೆಗಳಿಂದ ನಿರ್ಮಿತವಾಗಿರುತ್ತವೆ. ಭೂಮಿಯಿಂದ ಎರಡು ಅಥವಾ ಮೂರು ಅಡಿ ಎತ್ತರದಲ್ಲಿ ಭದ್ರವಾದ ಮರದ ಕಂಬಗಳ(ಪಿಲ್ಲರ್ ಗಳ ರೀತಿ) ಆಸರೆಯಲ್ಲಿ ಮನೆಗಳು ನಿರ್ಮಿಸಲ್ಪಟ್ಟಿವೆ. ಗುಡ್ಡಗಾಡು ಪ್ರದೇಶವಾದ್ದರಿಂದ  ಹೇರಳವಾಗಿ ಸುರಿಯುವ ಮಳೆಯ ನೀರು ಸರಾಗವಾಗಿ ಮನೆಯ ಕೆಳಗಡೆ ಹರಿದು ಹೋಗುವ ಉಪಾಯ ಕೂಡ ಇದರ ಹಿಂದಿದೆ. ಕಾಡಿನ ವಿಷಜಂತುಗಳಿಂದ ಪಾರಾಗುವ ಬಗೆ ಕೂಡ ಆಗಿದೆ.

ಮನೆಯ ಒಳಗೆ ನಮ್ಮಂತೆಯೇ ಅಡುಗೆಮನೆ, ಕೋಣೆ ನಡುಮನೆಗಳು ಬೇರೆ ಬೇರೆಯಾಗಿ ಇರುತ್ತವೆ.ಮಳೆ ಹೆಚ್ಚು ಬೀಳುವ ಪ್ರದೇಶವಾದ್ದರಿಂದ ಅಡುಗೆಗೆ ಬೇಕಾದ ಉರುವಲುಗಳನ್ನು ಮನೆಯೊಳಗಿನ ಅಟ್ಟದ ಮೇಲೆ ಶೇಖರಿಸಿಟ್ಟುಕೊಳ್ಳುತ್ತಾರೆ. ಕಾಡಿನಲ್ಲಿ ಹೇರಳವಾಗಿ ಸಿಗುವ ಅಂಚಿಪೊರಕೆ ಕಡ್ಡಿಗಳನ್ನು ಕೊಯ್ದು ತಂದು ಪೊರಕೆ ತಯಾರಿಸಿ ಪಟ್ಟಣದಲ್ಲಿ ಮಾರುವುದು ಇಲ್ಲಿನ ಎಲ್ಲ ಮನೆಯವರ ಖಾಯಂ ಕೆಲಸವಾಗಿದೆ. ಬುಟ್ಟಿ ಹೆಣೆಯುವುದು, ಕಾಡಿನಲ್ಲಿ ಸಿಗುವ ಗಡ್ಡೆಗೆಣಸು, ಹಣ್ಣುಹಂಪಲು, ಜೇನುಗಳು ಕೂಡ ಇವರ ವರಮಾನದ ಮೂಲವಾಗಿವೆ. ಜೊತೆಗೆ ಭತ್ತ, ತರಕಾರಿಗಳನ್ನು ಬೇಸಾಯ ಮಾಡುತ್ತಾರೆ.

ಯಾವುದಾದರೂ ಕಾರಣಕ್ಕೆ ಯಾರದ್ದಾದರೂ ಮನೆ ಬಿದ್ದರೆ ಅಥವಾ ಹಾಳಾದರೆ, ಊರಿನ ಜನರೆಲ್ಲರೂ ಕಾಡಿಗೆ ತೆರಳಿ ಬಿದಿರು ಹಾಗೂ ಮರಗಳನ್ನೂ ಕಡಿದು ತಂದು ಒಂದೇ ದಿನಕ್ಕೆ ಮನೆ ನಿರ್ಮಿಸಿ, ಅಂದೇ ಗೃಹ ಪ್ರವೇಶವನ್ನು ಮುಗಿಸಿಬಿಡುತ್ತಾರೆ. ಆ ಮನೆಯ ಪಾತ್ರ ಪಗಡೆಗಳೂ ಹಾಳಾಗಿದ್ದರೆ, ಊರಿನವರೆಲ್ಲ ಒಂದೊಂದು ಪಾತ್ರೆ ನೀಡಿ ಅವರ ಜೀವನಕ್ಕೆ ಅಗತ್ಯವಿರುವಷ್ಟನ್ನು ಅಂದೇ ಒದಗಿಸಿಕೊಡುತ್ತಾರೆ. ಅಂತಹ ಅದ್ಭುತ, ಅನ್ಯೋನ್ಯ ಸಾಂಘಿಕ ಜೀವನಶೈಲಿ  ಇವರದ್ದಾಗಿದೆ. ಹಾಗೆಯೇ ಇಲ್ಲಿನ ಜನ ಸ್ವಚ್ಛತೆಗೆ ಅನ್ವರ್ಥರಾಗಿದ್ದಾರೆ. ಗುಡ್ಡಗಾಡು ಜನರಲ್ಲೇ ಅತ್ಯಂತ ಸ್ವಚ್ಛ ಜನಗಳಿವರು ಎಂಬ ಪ್ರಖ್ಯಾತಿ ಕೂಡ ಇದೆ.

ಬೇರುಕ್ಕಿನ ಜೀವಂತ ಸೇತುವೆ

ಇಲ್ಲಿನ ಇನ್ನೊಂದು ವಿಶೇಷವೆಂದರೆ ಜೀವಂತ ಸೇತುವೆಗಳು.  ಇಲ್ಲಿನ ಜನ ನದಿ ಅಥವಾ ಕಣಿವೆಗಳ ಎರಡು ದಂಡೆಗಳ ನಡುವೆ ಈ ರೀತಿಯ ಸೇತುವೆಗಳನ್ನು ನಿರ್ಮಿಸುತ್ತಾರೆ. ಎರಡು ದಂಡೆಯಲ್ಲಿರುವ ಮರಗಳ ಎಳೆಯ ಬೇರುಗಳನ್ನು ಬಳ್ಳಿಗಳ ಸಹಾಯದಿಂದ ಜೋಡಿಸಿ ಕೂಡಿಸುತ್ತಾರೆ. ಮರ ಬೆಳೆದಂತೆ, ಬೇರುಗಳ ಬಾಹುಗಳು ಚಾಚಿದಂತೆ, ಕ್ರಮೇಣ ಎರಡು ದಂಡೆಯ ಮರದ ಬೇರುಗಳು ಪರಸ್ಪರ ಸಂಪರ್ಕಕ್ಕೆ ಬಂದು ಹೆಣೆದುಕೊಳ್ಳತೊಡಗುತ್ತವೆ. ಈ ರೀತಿ ಹೆಣೆದುಕೊಳ್ಳುತ್ತಾ 30 ರಿಂದ 50 ವರ್ಷದವರೆಗಿನ ಅವಧಿಯಲ್ಲಿ ಮರದ ಬೇರುಗಳಿಂದಲೇ ಆದ ‘ಜೀವಂತ ಸೇತುವೆ’ ನಿರ್ಮಾಣಗೊಳ್ಳುತ್ತದೆ. ಅದು ಅಂತಿಂಥ ಸೇತುವೆಯಲ್ಲ,ಅದರ ಮೇಲೆ ಮಣಭಾರದ ಟ್ರಕ್ ಗಳು ಕೂಡ ಸಾಗಬಹುದಾದಂತಹ  ‘ಬೇರುಕ್ಕಿನ ಸೇತುವೆ’. ಮುನ್ನೂರು, ನಾನೂರು ವರ್ಷಗಳಿಂದ ಉಪಯೋಗಿಸುತ್ತಿರುವ ಅಂತಹ ಅನೇಕ ಸೇತುವೆಗಳನ್ನು ನಾವು ಕಾಣಬಹುದಾಗಿದೆ. ಜೀವವುಳ್ಳ ಸೇತುವೆ ಅಥವಾ ಜೀವಂತ ಸೇತುವೆ ಎಂದು ಇದಕ್ಕೆ ಹೆಸರು. ಇದು ಜಗತ್ತಿನ ಗಮನ ಕೂಡ ಸೆಳೆದಿದ್ದು. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಯುವಕನ ಸಂಸ್ಕೃತಿ ಪ್ರೇಮ, ಸಂಸದನ ದತ್ತು ಗ್ರಾಮ

ಕೊಂಗ್ ತಾಂಗ್ ಗ್ರಾಮದ ಕಾಂಗ್ ಸಿಟ್ ಎನ್ನುವ ಯುವಕ ತನ್ನ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಊರಿಗೆ ಮರಳುತ್ತಾನೆ. ತನ್ನೂರಿನ ವಿಶಿಷ್ಟ ಸಂಸ್ಕೃತಿಯ ಬಗ್ಗೆ ಅವನಿಗೆ ವಿಶೇಷ ಹೆಮ್ಮೆ. ಜಗತ್ತಿನೆದುರು ತನ್ನ ಊರಿನ ಸಂಸ್ಕೃತಿಯನ್ನು ತೆರೆದಿಡಬೇಕು ಎಂಬುದು ಅವನ ಇಂಗಿತ. ಹಾಗಾಗಿ ಯೂಟ್ಯೂಬ್ ಮೂಲಕ, ಪ್ರವಾಸಕ್ಕೆ ಸಂಬಂಧಿಸಿದ ಬ್ಲಾಗ್ ಗಳ ಮೂಲಕ, ತನ್ನ ಸಂಪರ್ಕಕ್ಕೆ ಬಂದಿದ್ದ  ಪತ್ರಿಕಾ, ದೃಶ್ಯಮಾಧ್ಯಮದ ಮೂಲಕ ಇಲ್ಲಿನ ವಿಶೇಷತೆಯನ್ನು ತಿಳಿಸುತ್ತಾ ಹೊರಜಗತ್ತಿಗೆ ಪರಿಚಯಿಸುತ್ತಾನೆ. ಈ ವಿಷಯ ತಿಳಿದ ದೇಶವಿದೇಶಗಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡತೊಡಗುತ್ತಾರೆ. ಅವರುಗಳು ಸಹಾ ಈ ವಿಚಾರವನ್ನು ಎಲ್ಲೆಡೆ ಪ್ರಚುರಪಡಿಸುತ್ತಾರೆ. ಆ ವ್ಯಾಪ್ತಿಯ ಲೋಕಸಭಾ ಸದಸ್ಯ ರಾಕೇಶ್ ಸಿನ್ಹಾರವರು ಈ ವಿಚಾರವನ್ನು ಲೋಕಸಭೆಯಲ್ಲೂ ಪ್ರಸ್ತಾಪಿಸಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ಕಾರಣರಾಗುತ್ತಾರೆ. ಹಾಗೆಯೇ ಆ ಗ್ರಾಮವನ್ನು ದತ್ತು ಪಡೆದು ಸುಸಜ್ಜಿತವಾದ ರಸ್ತೆಯೊಂದನ್ನು ನಿರ್ಮಿಸಿ. ನಾಗರಿಕ ಜಗತ್ತಿಗೆ ಸಂಪರ್ಕಿಸಿದ್ದಾರೆ. ಇದು ಊರಿನ ಪ್ರಪ್ರಥಮ ನಾಗರಿಕ ಸೌಲಭ್ಯ. ಇದಕ್ಕೆಲ್ಲಾ ಕಾರಣನಾದ ಯುವಕ ಕಾಂಗ್ ಸಿಟ್ ನನ್ನು ಸರ್ಕಾರ ಆ ಊರಿನ, ಅಲ್ಲಿನ ವಿಶಿಷ್ಟ ಸಂಸ್ಕೃತಿಯ,ಸಾಂಸ್ಕೃತಿಕ ರಾಯಭಾರಿಯನ್ನಾಗಿ  ನೇಮಿಸಿದೆ. ಇದೀಗ ಸಂಬಂಧಪಟ್ಟ ಇಲಾಖೆಗಳು ಈ ಊರನ್ನು ವಿಶ್ವ ಪಾರಂಪರಿಕ ತಾಣವನ್ನಾಗಿಸಲು ಪ್ರಯತ್ನ ಆರಂಭಿಸಿವೆ.

ಇದೀಗ ಬೆಳಕಿಗೆ ಬಂದಂತೆ ಇಲ್ಲಿನ ಇನ್ನೂ 22 ಗುಡ್ಡಗಾಡು ಹಳ್ಳಿಗಳಲ್ಲಿ ಇದೇ ರೀತಿಯ ಸಂಸ್ಕೃತಿ ಇದೆ ಎನ್ನಲಾಗಿದೆ. ಅವುಗಳು ನಾಗರೀಕ ಜಗತ್ತಿನ ಸಂಪರ್ಕಕ್ಕೆ ತೆರೆದುಕೊಳ್ಳದೆ ನೇಪಥ್ಯದಲ್ಲಿ ಉಳಿದಿವೆ. .ಇಂದಿಗೂ ಆ ಹಳ್ಳಿಗಳ ಜನರು  ನಾಗರಿಕತೆ, ಆಧುನಿಕತೆಯ ಸೋಂಕಿಲ್ಲದೆ ಕಾಡು ಜನರಂತೆಯೇ ಬದುಕುತ್ತಿದ್ದಾರೆ. ಕಾಂಗ್ ಸಿಟ್ ಅಂಥವರು ಆ ಊರುಗಳಲ್ಲಿ ಇಲ್ಲವಾಗಿರುವುದು ಇದಕ್ಕೆ ಕಾರಣ.ಕೊಂಗ್ ತಾಂಗ್  ಹಳ್ಳಿಗೆ ರಸ್ತೆಯಾದ ನಂತರ ಉಳಿದ ಊರಿನವರು ಕೂಡ ಇದೀಗ ಹೊರಬಂದು ನಮ್ಮ ಹಳ್ಳಿಗಳನ್ನು ಇದೇ ರೀತಿ ಪ್ರಚುರಪಡಿಸಿ, ರಸ್ತೆ ನಿರ್ಮಿಸಿ ಎಂದು ಒತ್ತಾಯಿಸುತ್ತಿದ್ದಾರೆ.

ಇದಿಷ್ಟನ್ನು ಫೋನ್ ಮುಖಾಂತರವೇ
ತಿಳಿದುಕೊಳ್ಳುವಂತಾದದ್ದು ತಂತ್ರಜ್ಞಾನದ ಹೆಗ್ಗಳಿಕೆಯಾದರೆ, ತಾನು ಕಂಡದ್ದನ್ನು ಇತರರಿಗೂ  ಪರಿಚಯಿಸಬೇಕೆನ್ನುವ ಮನಸ್ಸು ಲಲಿತಾ ದೀದಿ ಅವರದ್ದು. ಇಂತಹ ತಂತ್ರಜ್ಞಾನದ ಯುಗದ ತುಟ್ಟತುದಿಯಲ್ಲಿ ನಾವಿದ್ದರೆ, ಒಂದು ರಸ್ತೆಗಾಗಿ ಹಂಬಲಿಸುತ್ತಿರುವ ಪ್ರಾಥಮಿಕ ಹಂತದ ಕನಿಷ್ಠ ನಾಗರಿಕ ಸೌಲಭ್ಯದ ನಿರೀಕ್ಷೆಯಲ್ಲಿ ಮೇಘಾಲಯದ ನಾದಮಾಧುರ್ಯದ ಜನಾಂಗವಿದೆ. ಸುಮಾರು 400 ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಅವರ ವಿಶಿಷ್ಟ ಸಂಸ್ಕೃತಿ, ತನ್ನ ಮೂಲಸ್ವರೂಪದಲ್ಲೆ ಎಂದೆಂದಿಗೂ ಉಳಿಯಲಿ ಎಂದು ಆಶಿಸೋಣ.

ಮಣ್ಣೆ ಮೋಹನ್
ವಿಳಾಸ: ನಂ.9, ಚಂದನ ನಿಲಯ
2 ನೇ ಅಡ್ಡರಸ್ತೆ, ಪ್ರಗತಿ ನಗರ,
ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್,
ಬೆಂಗಳೂರು-560 100
ಫೋನ್: 6360507617
email: mohan68micropower@gmail.com

 

Get real time updates directly on you device, subscribe now.

Comments are closed.

error: Content is protected !!