ಬಸ್ ಗಳ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಹೋರಾಟ

224

Get real time updates directly on you device, subscribe now.


ಗುಬ್ಬಿ: ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ ಎಂದು ಎಬಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಅಪ್ಪು ಪಾಟೀಲ್ ತಿಳಿಸಿದರು.

ಶುಕ್ರವಾರ ಎಬಿವಿಪಿ ಗುಬ್ಬಿ ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಭಾಗದಿಂದಲೇ ಹೆಚ್ಚು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಿದ್ದು ಸಮರ್ಪಕ ಬಸುಗಳು ಇಲ್ಲದೆ ತರಗತಿಗಳಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಇದರಿಂದ ಅವರ ಶೈಕ್ಷಣಿಕ ಸಾಧನೆ ಕುಂಠಿತಗೊಳ್ಳಲು ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಕಾರ್ಯಕಾರಣಿ ಸದಸ್ಯ ಗುರುಪ್ರಸಾದ್ ಮಾತನಾಡಿ, ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳು ಕಳೆದರೂ ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದ ಅವರು ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಾದರೂ ಹೆಚ್ಚುವರಿ ಬಸ್ ಗಳನ್ನು ಓಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಮುಖಂಡ ಪುನೀತ್ ಮಾತನಾಡಿ, ಬಸ್ಗಳ ಕೊರತೆಯಿಂದಾಗಿ ಪ್ರತಿನಿತ್ಯವೂ ಫುಟ್ ಬೋರ್ಡ್ನಲ್ಲಿ ನಿಂತು ಪ್ರಯಾಣಿಸುವಂತಾಗುತ್ತಿದೆ. ವಿದ್ಯಾರ್ಥಿಗಳ ಜೀವ ಹಾನಿಯಾದರೆ ಯಾರು ಹೊಣೆಗಾರರಾಗುತ್ತಾರೆ ಎಂದರು.

ವಿದ್ಯಾರ್ಥಿನಿ ಗೀತಾ ಮಾತನಾಡಿ, ಹಳ್ಳಿಗಳಿಂದ ಬರುವ ನಮಗೆ ಸರಿಯಾದ ಸಮಯಕ್ಕೆ ಬಸ್ ಗಳು ಸಿಗದೇ ಮೊದಲ ಅವಧಿಯ ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ. ಅಧಿಕಾರಿಗಳು ಹೆಚ್ಚುವರಿ ಬಸ್ಗಳನ್ನು ಓಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯಕರ್ತರಾದ ಜನಾರ್ಧನ್, ಜೀವನ್, ಸದಸ್ಯರಾದ ಅಂಜನಾ, ಪುನೀತ್, ದರ್ಶನ್, ಮಹಾಲಕ್ಷ್ಮಿ, ಭೂಮಿಕ, ಗೀತಾ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!