ತುಮಕೂರು: ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಸಂದೇಶವುಳ್ಳ ಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗುತ್ತಿದ್ದರೂ ಅವುಗಳಿಗೆ ತಕ್ಕ ಬೆಂಬಲ, ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಶ್ರೀಸಿದ್ಧಾರ್ಥ ವ್ಯವಹಾರ ನಿರ್ವಹಣಾ ಸಂಸ್ಥೆ ತುಮಕೂರು ಮತ್ತು ಐವರ ಕಂಬೈನ್ಸ್ ಬೆಂಗಳೂರು ಸಹಯೋಗದಲ್ಲಿ ಎಸ್ಎಸ್ಐಟಿ ಕಾಲೇಜಿನ ಸ್ಕಾಲರ್ ಬಿಲ್ಡಿಂಗ್ ನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಟಾರ್ಚು ಚಿತ್ರ ತಂಡ ಉತ್ತಮ ಸಾಮಾಜಿಕ ಕಥೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಲಿ ಎಂದ ಅವರು ಮಾಧ್ಯಮ ಅಧ್ಯಯನ ಕೇಂದ್ರ ವಿಭಿನ್ನ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾರ್ಚು ಚಿತ್ರದ ನಿರ್ದೇಶಕ ವೀರನಾರಾಯಣ ಮಾತನಾಡಿ, ನೀರೀಕ್ಷೆಗಳಿಲ್ಲದೇ ಸ್ವಚ್ಛ ಮನಸ್ಸಿನಿಂದ ಚಿತ್ರ ವಿಕ್ಷೀಸಿದರೆ ಮಾತ್ರ ಚಲನಚಿತ್ರದ ನಿಮಗೆ ಇಷ್ಟವಾಗುತ್ತದೆ. ಭಾರತದಲ್ಲಿ ಕಲಾತ್ಮಾಕ ಚಲನಚಿತ್ರಗಳ ನಿರ್ಮಾಣವಾಗುವ ರೀತಿಯಲ್ಲಿ ವಿಶ್ವದಲ್ಲಿ ವಿಶ್ವಮಟ್ಟದ ಚಿತ್ರಗಳಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದ್ದು, ಅದೇ ಮಾದರಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದರು.
ಚಲನಚಿತ್ರ ಕುರಿತು ಮಾತನಾಡಿದ ಹಿರಿಯ ಪತ್ರಕರ್ತೆ ಭಾರತಿ ಹೆಗಡೆ, ಉತ್ತಮ ಉದ್ದೇಶ ಹಾಗೂ ಕಥಾ ವಸ್ತುವನ್ನು ಹೊಂದಿದ್ದು, ವಿಷಯ ನಿರೂಪಣೆಗೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ವಾಸ್ತವಿಕ ನೆಲಗಟ್ಟಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಉತ್ತಮ ಪ್ರಯತ್ನ, ನಿರಂತರವಾಗಿರಲಿ ಎಂದರು.
ಚಲನಚಿತ್ರ ವೀಕ್ಷಿಸಿದ ಎಸ್ಎಸ್ಐಟಿ ಕ್ಯಾಂಪಸ್ ನ ಮಾಧ್ಯಮ ಅಧ್ಯಯನ ಕೇಂದ್ರ, ಎಸ್ಐಬಿಎಂನ ಎಂಕಾಂ ಮತ್ತು ಎಂಎಸ್ಡಬ್ಲ್ಯೂ ವಿಭಾಗದ ವಿದ್ಯಾರ್ಥಿಗಳೊಂದಿಗೆ ಚಿತ್ರತಂಡ ಸಂವಾದ ನಡೆಸಿತು.
ಈ ಸಂದರ್ಭದಲ್ಲಿ ಟಾರ್ಚು ಚಿತ್ರ ತಂಡಕ್ಕೆ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಖಲಂದರ್ ಪಾಷ, ಎಸ್ಎಸ್ಐಬಿಎಂನ ಡಾ.ಮಮತಾ, ಹಿರಿಯ ಪತ್ರಕರ್ತ ಜಗನ್ನಾಥ್ ಕಾಳೇನಹಳ್ಳಿ, ಸಹಾಯಕ ಪ್ರಾಧ್ಯಾಪಕಿ ಶ್ವೇತಾ.ಎಂ.ಪಿ, ಎಂಎಸ್ಡಬ್ಲ್ಯೂ ವಿಭಾಗದ ಪ್ರೊ.ಗುರುಪ್ರಸಾದ್, ಎಂ.ಕಾಂ ವಿಭಾಗದ ಪ್ರೊ.ಚಿದಾನಂದ ಇತರರು ಇದ್ದರು.
Comments are closed.