ಶಿರಾ ಸರ್ಕಾರಿ ಕಾಲೇಜಿನಲ್ಲಿ ಬಿಸಿಯೂಟಕ್ಕೆ ಚಾಲನೆ

337

Get real time updates directly on you device, subscribe now.


ಶಿರಾ: ಪ್ರಸ್ತುತ ಬಲಿಷ್ಠ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಕೈಯಲ್ಲಿದೆ. ಆದ್ದರಿಂದ ಉತ್ತಮ ಶಿಕ್ಷಣ ನೀಡಿ ಯುವಕರನ್ನು ಸಧೃಡರನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಪ್ರಾರಂಭಿಸಿರುವ ವಿಧಾನಪರಿಷತ್ ಸದಸ್ಯ ಚಿದಾನಂದ್ ಗೌಡ ಅವರ ಚಿಂತನೆ ಅತ್ಯಂತ ಶ್ಲಾಘನೀಯ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಪೀಠಾಧ್ಯಕ್ಷ ಜಪಾನಂದ ಜೀ ಮಹಾರಾಜ್ ಸ್ವಾಮೀಜಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರ ಸಹಾಯಾರ್ಥ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಅನ್ನಪೂರ್ಣ ಯೋಜನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ತಮ್ಮ ಶಾಸಕರ ಗೌರವ ಧನದಲ್ಲಿ ನೀಡುವ ಮೂಲಕ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ದೇಶಕ್ಕೆ ಮಾದರಿ ಜನಪ್ರತಿನಿಧಿಯಾಗಿದ್ದಾರೆ. ದೇಶದಲ್ಲಿಯೇ ಅನ್ನ ದಾಸೋಹ, ಅಕ್ಷರ ದಾಸೋಹ ನೀಡುವ ಏಕೈಕ ಜಿಲ್ಲೆ ನಮ್ಮ ತುಮಕೂರು ಜಿಲ್ಲೆ, ತುಮಕೂರಿನ ಸಿದ್ದಗಂಗೆ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರು ಅನ್ನ ದಾಸೋಹ, ಅಕ್ಷರ ದಾಸೋಹ ನೀಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಸ್ವಾಮೀಜಿಗಳ ಕಾರ್ಯವನ್ನು ಇಡೀ ದೇಶದಲ್ಲಿ ಎಲ್ಲರೂ ಶ್ಲಾಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾನ್ಯ ರೈತರ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಬಡತನದ ಕಷ್ಟ ಗೊತ್ತಿದೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ನೀಡಬೇಕೆಂದು ನಿರ್ಧರಿಸಿ ಅನ್ನಪೂರ್ಣ ಯೋಜನೆ ಪ್ರಾರಂಭಿಸಿದ್ದೇನೆ. ಮುಂದೆ ನಡೆಯುವ ಅಧಿವೇಶನದಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಪ್ರಾರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇನೆ. ಈ ಕಾರ್ಯಕ್ರಮ ರಾಜ್ಯಕ್ಕೆ ವಿಸ್ತಾರವಾಗಬೇಕು ಎಂಬುದೇ ನನ್ನ ಉದ್ದೇಶ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ನಮ್ಮ ತುಮಕೂರು ಜಿಲ್ಲೆಯಲ್ಲಿರುವುದು ಹೆಮ್ಮೆ ತಂದಿದೆ. ವಿದ್ಯಾರ್ಥಿಗಳ ಸಮಸ್ಯೆ ಅರಿತು ತಮ್ಮ ವೇತನದ ಗೌರವಧನವನ್ನು ಸಂಪೂರ್ಣ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎಸ್.ಟಿ.ರಂಗಪ್ಪ, ಪ್ರಾಧ್ಯಾಪಕರಾದ ಪ್ರೊ.ಹೊನ್ನಾಂಜನೇಯ, ಡಾ.ಶಿವಣ್ಣ, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ನಿವೃತ್ತ ಪ್ರಾಂಶುಪಾಲ ಡಾ.ಪಿ.ಹೆಚ್.ಮಹೇಂದ್ರಪ್ಪ, ನಗರಸಭಾ ಸದಸ್ಯ ಆರ್.ರಾಮು, ಹಿರಿಯ ವೈದ್ಯರಾದ ಡಾ.ಕೆ.ರಾಮಕೃಷ್ಣ, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಆರ್.ಕೆ.ಶ್ರೀನಿವಾಸ, ಮಾಜಿ ಗ್ರಾಪಂ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ತಾಪಂ ಸದಸ್ಯ ಹೊನ್ನಗೊಂಡನ ಹಳ್ಳಿ ಚಿಕ್ಕಣ್ಣ, ಗಂಗಾಧರ ಪ್ರಿಯ, ಡಾ.ತಿಮ್ಮರಾಜ್ ಯಾದವ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!