ತುಮಕೂರು: ಕಂದಾಯ ನೌಕರರು, ಅಧಿಕಾರಿಗಳು ರೈತರ ಸಮೀಪ ಹೋಗಿ, ಕಚೇರಿಗೆ ಬರುವ ರೈತರನ್ನು ಗೌರವದಿಂದ ಕಂಡು ಅವರ ಕೆಲಸ ಮಾಡಿಕೊಡಿ, ರೈತರ ಸೇವೆ ಮಾಡುವ ಇಂತಹುದೊಂದು ಅವಕಾಶವನ್ನು ಸರ್ಕಾರ ಕಲ್ಪಿಸಿದೆ ಎಂಬ ಭಾವನೆಯಿಂದ ಸೇವೆ ಮಾಡಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್.ಕೆ. ಹೇಳಿದರು.
ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘ ಹಾಗೂ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತರೆ ಇಲಾಖೆಗಳಿಗೆ ಕಂದಾಯ ಇಲಾಖೆ ಮಾತೃ ಇಲಾಖೆ, ಸರ್ಕಾರದ ಬಹುತೇಕ ಯೋಜನೆಗಳ ಅನುಷ್ಠಾನ ಕಂದಾಯ ಇಲಾಖೆ ಮೂಲಕವೇ ಆಗಬೇಕಾಗಿದೆ. ಇಂತಹ ಮಹತ್ವದ ಇಲಾಖೆಯಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡಿ ಎಂದು ಹೇಳಿದರು.
ಭೂಮಿ ಮತ್ತು ಭೂಮಿ ಆಡಳಿತ ನಿರ್ವಹಿಸುವ ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳೂ ಜಾಸ್ತಿ ಇವೆ. ಇವುಗಳನ್ನು ನಿಭಾಯಿಸಿ ನಿರ್ವಹಿಸುವುದು ಅಧಿಕಾರಿಗಳು, ನೌಕರರಿಗೆ ಸವಾಲಿನ ಕೆಲಸ, ಕಾರ್ಯ ಒತ್ತಡ ಸಹಜವಾಗಿರುತ್ತದೆ. ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಕಂದಾಯ ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಅವರನ್ನು ಪ್ರೋತ್ಸಾಹಿಸುವಂತಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಉತ್ತೇಜನ ನೀಡುವಂತಹ ಕಾರ್ಯಕ್ರಮ ಮಾಡುವಂತೆ ಇಲಾಖೆ ನೌಕರರ ಸಂಘಕ್ಕೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಮಾತನಾಡಿ, ಕಂದಾಯ ಇಲಾಖೆ ಜನ ಸಾಮಾನ್ಯರ ಬದುಕಿಗೆ ಹತ್ತಿರವಾದ, ಅಗತ್ಯವಾದ ಇಲಾಖೆ, ವ್ಯಕ್ತಿ ಹುಟ್ಟಿದಾಗಿನಿಂದ ಸಾವಿನವರೆಗೂ ಕಂದಾಯ ಇಲಾಖೆಯ ಸೇವೆ ಅವಲಂಬಿಸಿರುತ್ತಾನೆ. ಜನನ ಪ್ರಮಾಣ ಪತ್ರದಿಂದ, ಮರಣ ಪ್ರಮಾಣ ಪತ್ರದವರೆಗೂ ಕಂದಾಯ ಇಲಾಖೆಯ ಸೇವೆ ಬೇಕು. ಇಂತಹ ಮಹತ್ವವಾದ ಇಲಾಖೆಯಲ್ಲಿ ಲೋಪಗಳಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಮಾತನಾಡಿ, ಸರ್ಕಾರ ಹಾಗೂ ಜನರ ಸಂಪರ್ಕ ಸೇತುವಾಗಿ ಕಂದಾಯ ಇಲಾಖೆ ಕಾರ್ಯ ನಿರ್ವಹಿಸುತ್ತದೆ, ಜನಸಾಮಾನ್ಯರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ವಿಶ್ವಾಸದಿಂದ ಅವರ ಕೆಲಸ ಮಾಡಿಕೊಡಿ, ಒಳ್ಳೆಯ ಕೆಲಸದಿಂದ ಇಲಾಖೆಗೆ, ನಿಮಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.
ಕಾರ್ಯ ಒತ್ತಡಲ್ಲಿ ನೌಕರರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಅದಕ್ಕಾಗಿ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರದಲ್ಲೇ ಆರಂಭವಾಗುತ್ತದೆ. ಆರೋಗ್ಯ ಸಮಸ್ಯೆ ಇರುವ ನೌಕರರಿಗೆ 50 ಲಕ್ಷ ರೂ. ವೆಚ್ಚದ ವರೆಗೆ ನಗದು ರಹಿತ ಆರೋಗ್ಯ ಸೇವೆ ದೊರೆಯುತ್ತದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಶೀಲ್ದಾರ್ ಸಿದ್ದೇಶ್, ಕಚೇರಿ ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಚುನಾವಣೆ ತಹಶೀಲ್ದಾರ್ ಗೌರಮ್ಮ, ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ಅಧಿಕಾರಿಗಳಾದ ಪಿ.ಎನ್.ಜಗದೀಶ್, ಜಯಪ್ರಕಾಶ್ ನಾರಾಯಣ್, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ಮಹೇಶ್, ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ದೇವರಾಜು ಇತರರು ಭಾಗವಹಿಸಿದ್ದರು.
ಈ ವೇಳೆ ಕಂದಾಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಪ್ರಸಂಶನಾ ಪತ್ರ ನೀಡಿ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ನಂತರ ಇಲಾಖೆ ನೌಕರರಿಗೆ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
Comments are closed.