ತುಮಕೂರು: ನಗರದಲ್ಲಿರುವ ಅಕ್ಕಿ ಗಿರಣಿದಾರರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಮಾಲೀಕ ಆರ್.ಎಲ್.ರಮೇಶ್ ಬಾಬು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯುತ್ ದರ ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ಹೆಚ್ಚಳದಿಂದ ಗಿರಣಿಗಳನ್ನು ನಡೆಸುವುದು ಕಷ್ಟಕರವಾಗಿದ್ದು, ಅಕ್ಕಿ ಗಿರಣಿಧಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರವಾಗಿ ವಿದ್ಯುತ್ ದರ ಹೆಚ್ಚಳ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ನಿರ್ಧಾರದಂತೆ ಎಪಿಎಂಸಿ ಕಾಯ್ದೆಯನ್ನುಪುನಃ ಹಿಂದಿನ ರೀತಿಯಂತೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದಿಂದ ಅಕ್ಕಿ ಗಿರಣಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಕ್ಕಿ ಗಿರಣಿ ಉದ್ಯಮ ತೀವ್ರತರವಾದ ತೊಂದರೆಗೆ ಸಿಲುಕುತ್ತದೆಂದರು.
ಅಕ್ಕಿ ಗಿರಣಿದಾರರು ಕೃಷಿ ಮಾರುಕಟ್ಟೆಯ ಯಾವುದೇ ಸೌಕರ್ಯದ ಬಳಕೆ ಮಾಡುತ್ತಿಲ್ಲವಾದ್ದರಿಂದ ಅಕ್ಕಿ ಗಿರಣಿದಾರರನ್ನು ಸದರಿ ಕಾಯ್ದೆಯ ವ್ಯಾಪ್ತಿಯಿಂದ ಹೊರತುಪಡಿಸಬೇಕೆಂದು ಒತ್ತಾಯ ಮಾಡುತ್ತಿದ್ದೇವೆ ಎಂದರು.
ನಿಯಮಾನುಸಾರ ರೈತರು ಬೆಳೆದ ಭತ್ತವನ್ನು ರಾಜ್ಯದ ಯಾವುದೇ ಮಾರುಕಟ್ಟೆಗೆ ಕೊಂಡೊಯ್ಯಲು ಮತ್ತು ಮಾರಾಟ ಮಾಡಲು ಅನುಕೂಲವಿರುತ್ತಿತ್ತು. ಆದರೆ ಎಪಿಎಂಸಿ ಕಾಯ್ದೆ ಒಂದು ವೇಳೆ ಜಾರಿಯಾದಲ್ಲಿ ರೈತರು ಭತ್ತ ಸಾಗಾಣೆ ಮಾಡಲು ತೊಂದರೆಯಾಗುತ್ತದೆ. ಆದುದರಿಂದ ಇದನ್ನು ಜಾರಿ ಮಾಡಬಾರದೆಂಬುದು ತಮ್ಮಒತ್ತಾಯವಾಗಿದೆ. ಹಾಗೊಂದು ವೇಳೆ ಈ ರೀತಿಯಾಗಿ ಹೊಸ ಕಾಯ್ದೆ ಮಾಡಬೇಕಾದಲ್ಲಿ ಅಕ್ಕಿ ಗಿರಣಿಗಳ ಒಕ್ಕೂಟದವರ ಸಭೆ ಕರೆದು ಸಮಗ್ರ ಚರ್ಚೆ ಮಾಡಿ ತದನಂತರ ಕಾಯ್ದೆ ತಿದ್ದುಪಡಿ ರೂಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು.
ಹಾಲಿ ನಮ್ಮ ರಾಜ್ಯದಲ್ಲಿ ಬೆಳೆಯುತ್ತಿರುವ ಭತ್ತದೊಂದಿಗೆ ಹೊರ ರಾಜ್ಯಗಳಿಂದಲೂ ಭತ್ತವನ್ನು ಸರ್ಕಾರವೇ ಎಂಎಸ್ ಪಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಅಧಿಕ ಪ್ರಮಾಣದ ಭತ್ತ ಖರೀದಿಸಿ ತಂದು ನಮ್ಮ ಗಿರಣಿಗಳಲ್ಲಿಯೇ ಸಂಸ್ಕರಿಸಿ ಅಧಿಕ ಪ್ರಮಾಣದ ಅಕ್ಕಿ ನಮ್ಮ ರಾಜ್ಯದ ಜನತೆಗೆ ಲಭ್ಯವಾಗುವಂತೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಈ ರೀತಿಯಾಗಿ ಮಾಡುವುದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೂ ಸಹಕಾರಿಯಾಗುತ್ತದೆ ಎಂದರು.
ತಮ್ಮ ಮನವಿಯನ್ನು ಸರ್ಕಾರ ಪುರಸ್ಕರಿಸದೇ ಇದ್ದಲ್ಲಿ ರಾಜ್ಯದ ಅಕ್ಕಿ ಗಿರಣಿಗಳ ಹಿತಾಸಕ್ತಿಗೆ ಪ್ರತಿಕೂಲವಾದ್ದಲ್ಲಿ, ಅಕ್ಕಿ ಗಿರಣಿಗಳು ಕಾರ್ಯ ನಿರ್ವಹಿಸದೆ ಸ್ಥಗಿತಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಗೆ ಅವಕಾಶ ನೀಡಬಾರದೆಂದು ಸರ್ಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ. ಅಲ್ಲದೇ ಸರ್ಕಾರ ತಮ್ಮಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಅಕ್ಕಿ ಗಿರಣಿಗಳು ಮುಚ್ಚಿ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಸಂಘದ ಎನ್.ಆರ್.ವಿಶ್ವರಾಧ್ಯ, ಕೆ.ಜಿ.ಮುನಿಗಂಗಪ್ಪ, ಟಿ.ಎಸ್.ಪ್ರಿತೇಶ್, ಕೆ.ನಂಜುಂಡ ಪ್ರಸಾದ್, ಎಸ್.ಆರ್.ಜಗನ್ನಾಥ್ ಶೆಟ್ಟಿ, ಕೆ.ನಟೇಶ್ ಬಾಬು ಇತರರು ಇರರು ಇದ್ದರು.
Comments are closed.