ಮಧುಗಿರಿ: ಶೈಕ್ಷಣಿಕ ಜಿಲ್ಲೆಯು ಬರಪೀಡಿತ ಪ್ರದೇಶವಾಗಿದ್ದು, ಶಿಕ್ಷಣದಿಂದ ಮಾತ್ರ ಮಕ್ಕಳ ಬದುಕನ್ನು ಹಸನುಗೊಳಿಸಲು ಸಾಧ್ಯ ಎಂದು ಸಹಕಾರ ಸಚಿವ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಎಂಜಿಎಂ ಫ್ರೌಡಶಾಲೆಯಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಯ ಫ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭೂಮಿಯ ಲಭ್ಯತೆ ತಲೆಮಾರನಿಂದ ತಲೆಮಾರಿಗೆ ಕಡಿಮೆಯಾಗುತ್ತಾ ಹೋಗುತ್ತಿದ್ದು, ಉಳುವವರ ಸಂಖ್ಯೆ ಮಾತ್ರ ಹೆಚ್ಚಳವಾಗುತ್ತಿದೆ. ಆದರೆ ಬೇಸಾಯ ಲಾಭದಾಯಕವಾಗಿಲ್ಲ, ವಿದ್ಯೆಯಿಂದ ಮಾತ್ರ ಮಕ್ಕಳ ಬದುಕು ಹಸನುಗೊಳಿಸಲು ಸಾಧ್ಯ. ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಪುಣ್ಯದ ಕೆಲಸ, ಅವರು ವಿದ್ಯಾವಂತರಾಗಿ ಸಮಾಜಕ್ಕೆ ಆಸ್ತಿಯಾಗಿ ಪರಿವರ್ತನೆಯಾದಾಗ ಮಾತ್ರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ವಿದ್ಯಾರ್ಥಿಗಳನ್ನು ಎಸ್ಎಸ್ಎಲ್ಸಿಗೆ ಬಂದಾಗ ಮಾತ್ರ ತರಬೇತುಗೊಳಿಸದೇ 8ನೇ ತರಗತಿಯಿಂದಲೇ ಅವರ ಬಗ್ಗೆ ವಿಶೇಷ ಗಮನಹರಿಸಿ ಸಿದ್ಧತೆಗೊಳಿಸಿದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಶಾಲೆಯಲ್ಲಿ ಶೇ.100 ಹಾಜರಾತಿ ಇರುವಂತೆ ನೋಡಿಕೊಳ್ಳಿ, ಶಾಲೆಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಗಳ ಪಾಠ ಪ್ರವಚನ ಅವರಿಗೆ ಮತ್ತೆ ಅಭ್ಯಸಿಸಬೇಕು.
ಹಾಜರಾತಿ ಎಷ್ಟು ಮುಖ್ಯವೋ ಮಕ್ಕಳಲ್ಲಿ ಏಕಾಗ್ರತೆ ಮೂಡಿಸುವುದೂ ಅಷ್ಟೇ ಮುಖ್ಯ, ಅವರ ಗಮನ ನಿಮ್ಮ ಕಡೆ ಸೆಳೆಯದಂತೆ ನೋಡಿಕೊಳ್ಳಿ ಎಂದರು.
ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದು ಬೇಡ, ಮಕ್ಕಳು ತಂದೆ ತಾಯಿಗಳಿಗಿಂತಲೂ ಹೆಚ್ಚು ಗೌರವವನ್ನು ಗುರುಗಳಿಗೆ ನೀಡುತ್ತಿದ್ದು, ನಿಮ್ಮ ಗೌರವಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿ, ಶಾಲೆ ಬಿಟ್ಟ ಮಕ್ಕಳ ಕಡೆ ಗಮನ ಹರಿಸಿ, ಯಾವುದೇ ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ, ಯಾವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡುತ್ತಾರೋ ಅದೇ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಎಷ್ಟು ಆಸಕ್ತಿ ಇರುತ್ತದೋ ಅದೇ ಆಸಕ್ತಿ ಇತರೆ ಮಕ್ಕಳಿಗೂ ಮೂಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಡಿಡಿಪಿಐ ಮಂಜುನಾಥ್, ಬಿಇಓ ತಿಮ್ಮರಾಜು, ಶಿಕ್ಷಣಾಧಿಕಾರಿ ಶಾಂತಲಾ, ಡಯಟ್ ಉಪನ್ಯಾಸಕ ಚಿತ್ತಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಂಗಧಾಮಯ್ಯ, ಫ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಿಗರಾಮಯ್ಯ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟರಂಗಾರೆಡ್ಡಿ, ತಾಲೂಕು ಅಧ್ಯಕ್ಷ ಸಂಜಯ್, ಸಹಕಾರ ಮಹಾ ಮಂಡಳದ ನಿರ್ದೇಶಕ ಎನ್.ಗಂಗಣ್ಣ, ವಿಎಸ್ಎಸ್ಎನ್ ಅಧ್ಯಕ್ಷ ಸಿದ್ದಾಪುರ ವೀರಣ್ಣ, ನಿಖಿತ್ ರಾಜ್ ಮೌರ್ಯ, ಉಪನ್ಯಾಸಕರಾದ ಎನ್.ಮಹಾಲಿಂಗೇಶ್, ರಾಮಚಂದ್ರಪ್ಪ, ಎಂಜಿಎಂ ಶಾಲೆಯ ಕಾರ್ಯದರ್ಶಿ ಎಂ.ಎಸ್.ಶಂಕರ್ ನಾರಾಯಣ್ ಇತರರಿದ್ದರು.
Comments are closed.