ಹುಳಿಯಾರು: ಶಾಲೆ ಮತ್ತು ದೇವಸ್ಥಾನದ ಬಳಿ ಕೆಸರು ಗುಂಡಿ, ಜೊತೆಗೆ ದುರ್ವಾಸನೆ ಬೀರುವ ಚರಂಡಿ, ಕಳೆದ ಒಂದು ವರ್ಷದಿಂದ ಈ ದುಸ್ಥಿತಿ ಶಾಲಾ ಮಕ್ಕಳಿಗೆ ಹಾಗೂ ಭಕ್ತರಿಗೆ ಕಿರಿಕಿರಿಯುಂಟು ಮಾಡುತ್ತಿದ್ದರೂ ಹುಳಿಯಾರು ಪಟ್ಟಣ ಪಂಚಾಯ್ತಿ ಮಾತ್ರ ಕೈ ಕಟ್ಟಿ ಕುಳಿತು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಇದು ಹುಳಿಯಾರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಕೇಶವಾ ವಿದ್ಯಾ ಮಂದಿರದ ಬಳಿಯ ದುರ್ವಸ್ಥೆ, ಇಲ್ಲಿ ಬಿದ್ದಿರುವ ಗುಂಡಿಗೆ ಒಂದೆರಡು ಟ್ರಾಕ್ಟರ್ ಮಣ್ಣು ಹಾಕಿ ಮುಚ್ಚಿಸದೆ ಪಪಂ ನಿರ್ಲಕ್ಷ್ಯಿಸಿರುವುದರಿಂದ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಓಡಾಡಲು ವಿದ್ಯಾರ್ಥಿಗಳು ಹಾಗೂ ಭಕ್ತರು ಸರ್ಕಸ್ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಇದರ ಜೊತೆಗೆ ಇಲ್ಲಿರುವ ಚರಂಡಿ ಕಾಲಕಾಲಕ್ಕೆ ಸ್ವಚ್ಛವಾಗದೆ ಕೊಳಚೆ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಅಲ್ಲದೆ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ. ಜೊತೆಗೆ ಗಬ್ಬು ವಾಸನೆಯಲ್ಲಿ ಪಾಠ ಕೇಳುವ ಸಂಕಟ ಈ ಶಾಲೆಯ ಮಕ್ಕಳದಾಗಿದೆ. ಶಾಲೆಯ ಮುಂಭಾಗವೇ ಕೆಸರು ಗುಂಡಿಯಿರುವುದರಿಂದ ಮುಂಜಾನೆ ಪ್ರಾರ್ಥನೆ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ತೊಡಕಾಗಿದೆ.
ಈ ಕೇಶವಾ ಶಾಲೆಯಲ್ಲಿ 1 ರಿಂದ 7 ನೇ ತರಗತಿಯ ವರೆಗೂ 186 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹಾಗೂ ಆಟಕ್ಕೆ ಬಿಟ್ಟಾಗ, ಊಟಕ್ಕೆ ಬಿಟ್ಟಾಗ ಒಟ್ಟಿಗೆ ವಿದ್ಯಾರ್ಥಿಗಳು ಓಡಾಡುವುದರಿಂದ ಕೆಸರಲ್ಲಿ ಇಳಿಯುವುದು, ವಾಹನಗಳು ಬಂದಾಗ ಕೆಸರು ಸಿಡಿಸಿಕೊಳ್ಳುವುದು, ಕಾಲು ಜಾರಿ ಬೀಳುವುದು ಸಾಮಾನ್ಯವಾಗಿದೆ. ಇನ್ನು ದೇವಸ್ಥಾನದಕ್ಕೆ ಮಡಿಯುಟ್ಟು ಬರುವವರಂತೂ ಸರ್ಕಸ್ ಮಾಡಿಯೇ ದೇವಸ್ಥಾನಕ್ಕೆ ಹೋಗಬೇಕಿದೆ.
ಪ್ರತಿ ಪೌರ್ಣಮಿ ಮತ್ತು ಅಮಾವಾಸ್ಯೆಗೆ ಅನ್ನಸಂತರ್ಪಣೆ ಇದ್ದು ನೂರಾರು ಭಕ್ತರು ಸೇರುತ್ತಾರೆ. ಹನುಮ ಜಯಂತಿಯಲ್ಲಿ ರಥೋತ್ಸವ, ರಾಮ ನವಮಿಯಲ್ಲಿ ಉತ್ಸವದಲ್ಲಿ ಜನ ಜಾತ್ರೆಯೇ ಸೇರುತ್ತಾರೆ. ಈ ಸಂದರ್ಭದಲ್ಲಿ ಸೇರುವ ಭಕ್ತರು ಪಂಚಾಯ್ತಿಗೆ ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ. ಆದರೂ ಪಂಚಾಯ್ತಿ ಜಾಣ ಕುರುಡು ಪ್ರದರ್ಶಿಸುತ್ತಿದೆ. ಕಳೆದ ವರ್ಷ ಪಂಚಾಯ್ತಿಯಿಂದ ಚರಂಡಿ ಮಾಡಿದಾಗ ಇಲ್ಲಿ ಕೆಸರು ಗುಂಡಿಯಾಗಿದ್ದು, ಅಂದಿನಿಂದ ಇಲ್ಲಿಯವರೆವಿಗೂ ಸರಿ ಪಡಿಸಲು ಮನವಿ ಮಾಡಿದರೂ ನೂತನ ರಸ್ತೆ ಮಾಡುವಾಗ ಸರಿಪಡಿಸುತ್ತೇವೆ ಎಂಬ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ.
ನಾವು ಪ್ರತಿದಿನ ಹೊಲಸು ನೀರಿನಲ್ಲಿ ಓಡಾಡುವಂತಾಗಿದೆ. ಹಲವು ಬಾರಿ ಕಾಲು ಜಾರಿ ಕೆಸರು ನೀರಿನಲ್ಲಿ ವಿದ್ಯಾರ್ಥಿಗಳು ಬಿದ್ದಿದ್ದಾರೆ. ಒಂದು ವರ್ಷದಿಂದ ಇಲ್ಲಿನ ಸಮಸ್ಯೆ ಕುರಿತು ಪಂಚಾಯ್ತಿಗೆ ಎಷ್ಟೋ ಸಲ ದೂರು ಕೊಟ್ಟಿದ್ದೇವೆ. ಆದರೂ ಸ್ಪಂದಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಎಚ್.ಬಿ.ಸನತ್ ಕುಮಾರ್ ತಿಳಿಸಿದ್ದಾರೆ.
Comments are closed.