ಹಡಪದ ಅಪ್ಪಣ್ಣ ಜಯಂತಿ ಆಚರಣೆ

196

Get real time updates directly on you device, subscribe now.


ತುಮಕೂರು: ವಚನಗಳನ್ನು ಕನ್ನಡ ಭಾಷೆಯಲ್ಲಿ ಸರಳವಾಗಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಬರೆಯುವುದರ ಮೂಲಕ ಸಂಸ್ಕೃತದ ಬಿಗಿತನವನ್ನು ಸರಳೀಕರಣಗೊಳಿಸಿ ಬಸವಣ್ಣನವರ ಕಾಲಘಟ್ಟದಲ್ಲಿಯೇ ಗುರುತಿಸಿಕೊಂಡಂತಹವರು ಹಡಪದ ಅಪ್ಪಣ್ಣನವರು ಎಂದು ಉಪವಿಭಾಗಾಧಿಕಾರಿ ಹೆಚ್.ಶಿವಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನವು ಸಾಮಾಜಿಕ ಕ್ರಾಂತಿ ಉಂಟುಮಾಡುವುದರ ಜೊತೆಗೆ ಧಾರ್ಮಿಕ ಬದಲಾವಣೆ ಕೂಡಾ ನಡೆದವು, ಅಂದಿನ ಕಾಲದಲ್ಲಿದ್ದ ಮೂಢನಂಬಿಕೆಗಳನ್ನು ಬಸವಣ್ಣ ಅವರು ಕಟುವಾಗಿ ವಿರೋಧಿಸಿದ್ದರು, ಅವರ ಮಾರ್ಗದಲ್ಲಿಯೇ ಹಡಪದ ಅಪ್ಪಣ್ಣ ಅವರು ಮುನ್ನೆಡೆದರು ಎಂದು ತಿಳಿಸಿದರು.

ಮೂಢನಂಬಿಕೆಗಳಿಂದ ಕೂಡಿದ್ದ ಜನರಿಗೆ ಬಸವಣ್ಣ ಅವರು ಮೂಢನಂಬಿಕೆ ಬಿಟ್ಟು ಮೊದಲು ಹಡಪದರ ದರ್ಶನ ಪಡೆದು ನಂತರ ಅನುಭವ ಮಂಟಪಕ್ಕೆ ಬರಬೇಕೆಂದು ತಿಳಿಸಿದ್ದರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, 12ನೇ ಶತಮಾನದಲ್ಲಿ ವಚನ ಸಾಹಿತ್ಯ ಜೊತೆಗೆ ವೃತ್ತಿಗೆ ಅನುಗುಣವಾಗಿ ವಚನಾಕಾರರಾದ ಕುಂಬಾರ ಗುಂಡಯ್ಯ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ಲೋಹರ ಕಕ್ಕಯ್ಯ ಇಂತಹ ಅನೇಕರು ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದ್ದರು ಎಂದರು.

ಹಡಪದ ಅಪ್ಪಣ್ಣ ಅವರು ತಮ್ಮ ಚೀಲ (ಹಡ) ದಲ್ಲಿ ತನ್ನ ಕಾಯಕಕ್ಕೆ ಬೇಕಾದ ಪರಿಕರ ಇಟ್ಟುಕೊಂಡು ಹೋಗಿ ಜನಸಾಮಾನ್ಯರ ಕೇಶ ವಿನ್ಯಾಸಗೊಳಿಸುತ್ತಿದ್ದರು. ಕಾಯಕದ ನಂತರ ಅಪ್ಪಣ್ಣನವರನ್ನು ಬಸವಣ್ಣನವರು ಅನುಭವ ಮಂಟಪದಲ್ಲಿ ಜೊತೆಯಲ್ಲಿ ಇಟ್ಟುಕೊಂಡು ವಚನಗಳನ್ನು ರಚನೆ ಮಾಡುವಲ್ಲಿ ನಿರತರಾಗುತ್ತಿದ್ದರು ಎಂದು ಹೇಳಿದರು.

ಅಂದಿನ ಕಾಲದಲ್ಲಿದ್ದ ಮೂಢನಂಬಿಕೆ ಹೋಗಲಾಡಿಸಲು ಬಸವಣ್ಣ ನವರು ಎಲ್ಲಾ ವರ್ಗದ ಶಿವ ಶರಣರನ್ನು ಸಮಾನವಾಗಿ ಕಾಣಬೇಕು, ಅವರಲ್ಲಿಯೂ ನೈಪುಣ್ಯತೆ, ವಿದ್ವತ್ ಹಾಗೂ ಪ್ರತಿಭೆ ಇದೆ ಎಂಬ ಸಮಾನ ವೇದಿಕೆ ಸೃಷ್ಟಿ ಮಾಡಿದ್ದರು, ಅಂತಹ ವ್ಯಕ್ತಿಗಳಲ್ಲಿ ಹಡಪದ ಅಪ್ಪಣ್ಣ ಅವರು ಕೂಡಾ ಪ್ರಮುಖರು ಕಾಯಕ ವ್ಯಕ್ತಿಯಾಗಿ ಕಾಯಕವೇ ಕೈಲಾಸ ಎಂದು ಕೆಲಸ ಮಾಡಿದವರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್ಕುಮಾರ್, ಜಿಲ್ಲಾ ಸವಿತಾ ಸಮಾಜದ ಖಜಾಂಚಿ ಟಿ.ಆರ್.ಮೇಲಾಕ್ಷಪ್ಪ, ನಿರ್ದೇಶಕ ಹೆಚ್.ಎಸ್.ವೇಣುಗೋಪಾಲ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!