ತುರುವೇಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನ್ಯಾಫೆಡ್ ಖರೀದಿ ಕೇಂದ್ರದಲ್ಲಿ ಮಧ್ಯಾಹ್ನವಾದರೂ ರೈತರಿಂದ ಕೊಬ್ಬರಿ ಖರೀದಿಸದ ಹಿನ್ನಲೆಯಲ್ಲಿ ತೆಂಗು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರ ಕಚೇರಿಗೆ ಮುತ್ತಿಗೆ ಹಾಕಿದರು. ಕಳೆದ 22 ದಿನಗಳಿಂದಲೂ ನ್ಯಾಫೆಡ್ ಮೂಲಕ ಕೊಬ್ಬರಿ ಮಾರಾಟ ಮಾಡಲು ಎಪಿಎಂಸಿ ಆವರಣದಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ. ರೈತರಿಂದ ನ್ಯಾಫೆಡ್ ಅಧಿಕಾರಿಗಳು ಕೊಬ್ಬರಿ ಖರೀದಿಸಲು ಸಲ್ಲದ ನೆಪವೊಡ್ಡಿ ಶೋಷಣೆ ಮಾಡುತ್ತಿದ್ದಾರೆ. ಕೊಬ್ಬರಿ ಮಾರಾಟ ಮಾಡಲು ಬಂದ ರೈತರು ಕುಡಿಯುವ, ನೀರು ಶೌಚವಿಲ್ಲದೇ ಪರದಾಡುತ್ತಿರುವ ಬಗ್ಗೆ ಕಿಡಿಕಾರಿದರು. ರೈತರ ಆರೋಪಕ್ಕೆ ಪೂರಕವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯೇಂದ್ರ ಹಾಗೂ ಮುಂಗಿಕುಪ್ಪೆ ಬಸವರಾಜ್ ಧ್ವನಿಗೂಡಿಸಿದರು.
ತಾಲೂಕು ಅಡಿಕೆ ಹಾಗೂ ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜ್ ಮಾತನಾಡಿ, ತೆಂಗು ಬೆಳೆಗಾರರಿಗೆ ಅನುಕೂಲವಾಗಲೆಂದು ನ್ಯಾಫೆಡ್ ತೆರೆದಿರುವ ಸರಕಾರದ ಆಶಯವನ್ನು ನ್ಯಾಫೆಡ್ ಅಧಿಕಾರಿಗಳು ಮಣ್ಣು ಪಾಲು ಮಾಡಿದ್ದಾರೆ. ರೈತರು ತಾವು ಬೆಳೆದ ಕೊಬ್ಬರಿ ಮಾರಲು ಎಪಿಎಂಸಿ ಆವರಣಲ್ಲಿ ತಿಂಗಳುಗಟ್ಟಲೇ ಬೀಡು ಬೀಡುವಂತಾಗಿದೆ. ಇಷ್ಟಾದರೂ ಸಲ್ಲದ ಸಬೂಬು ಹೇಳಿ ರೈತರ ಕೊಬ್ಬರಿ ಕೊಂಡುಕೊಳ್ಳದೇ ತಿರಸ್ಕರಿಸಲಾಗುತ್ತಿದೆ. ನ್ಯಾಫೆಡ್ ಅಧಿಕಾರಿಗಳು ತಹಶೀಲ್ದಾರ್ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ನ್ಯಾಫೆಡ್ ಅಧಿಕಾರಿಗಳಿಂದಾಗುತ್ತಿರುವ ಶೋಷಣೆ ತಪ್ಪಿಸಲು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ನ್ಯಾಫೆಡ್ ಅಧಿಕಾರಿಗಳನ್ನು ಕರೆದು ನ್ಯಾಫೆಡ್ ಖರೀದಿ ಕೇಂದ್ರದ ಬಗ್ಗೆ ರೈತರ ದೂರಿನ ಮೇರೆಗೆ ವಿಚಾರಿಸಿದರು. ರೈತರು ತಂದ ಕೊಬ್ಬರಿಯನ್ನು ಸಲ್ಲದ ನೆಪವೊಡ್ಡಿ ತಿರಸ್ಕರಿಸದಂತೆ ಎಚ್ಚರಿಕೆ ನೀಡಿದರು. ಕ್ಷಿಪ್ರ ಗತಿಯಲ್ಲಿ ರೈತರಿಂದ ಕೊಬ್ಬರಿ ಖರೀದಿಸುವಂತೆ ನ್ಯಾಫೆಡ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಪಿಎಸ್ಐ ರಾಮಚಂದ್ರಪ್ಪ, ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್, ಆಹಾರ ಇಲಾಖಾ ಶಿರಸ್ತೇದಾರ್ ಪ್ರೇಮ, ತನಿಖಾಧಿಕಾರಿ ಕೃಷ್ಣೇಗೌಡ, ರೈತ ಸಂಘದ ಲಕ್ಕಸಂದ್ರ ಶಂಕರಪ್ಪ ಸೇರಿದಂತೆ ಅನೇಕರು ಇದ್ದರು.
Comments are closed.